ETV Bharat / bharat

'ಒತ್ತಡದಲ್ಲಿ ಅರ್ಜಿದಾರರು, ನಾವೇ ನ್ಯಾಯ ಕೊಡಿಸ್ತೀವಿ': ಪತ್ನಿ ಕೊಲೆ ಕೇಸಿನ ಆರೋಪಿ, ಕರ್ನಾಟಕದ ಪತಿಗೆ ನೀಡಿದ್ದ ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್​

author img

By ETV Bharat Karnataka Team

Published : Oct 21, 2023, 10:13 PM IST

Updated : Oct 21, 2023, 10:27 PM IST

ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​

ಪತ್ನಿ ಸಾವಿಗೆ ಸುಪಾರಿ ನೀಡಿದ್ದ ಆರೋಪ ಪತಿಗೆ ಹೈಕೋರ್ಟ್​ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್​ ರದ್ದು ಮಾಡಿದೆ. ಜೊತೆಗೆ ಹೆಚ್ಚಿನ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ.

ನವದೆಹಲಿ: ತನ್ನ ಪತ್ನಿಯನ್ನೇ ಹತ್ಯೆ ಮಾಡಲು ಹಂತಕರಿಗೆ ಸುಪಾರಿ ನೀಡಿದ್ದ ಆರೋಪಿಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಶನಿವಾರ ರದ್ದು ಮಾಡಿದೆ. 'ಇದೊಂದು ಆಘಾತಕಾರಿ ಮತ್ತು ನ್ಯಾಯ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆ ಕುಸಿಯುವಂತೆ ಮಾಡುತ್ತದೆ' ಎಂದು ವ್ಯಾಖ್ಯಾನಿಸಿದೆ.

ಮಹಿಳೆ ಕೊಲೆ ಪ್ರಕರಣದಲ್ಲಿ ಆರೋಪಿತನಾಗಿರುವ ಕರ್ನಾಟಕದ ವ್ಯಕ್ತಿಗೆ ಜಾಮೀನು ನೀಡಿದ್ದನ್ನು ವಿರೋಧಿಸಿ ಮೃತ ಮಹಿಳೆಯ ಕುಟುಂಬಸ್ಥರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಕೋರ್ಟ್​, ಮೃತರ ಕುಟುಂಬಕ್ಕೆ ಹಗಲು- ರಾತ್ರಿ ಸೂಕ್ತ ಭದ್ರತೆ ನೀಡಿ. ಅವರು ಮತ್ತೊಂದು ಮನವಿ ಸಲ್ಲಿಸಲು ಅವಕಾಶ ನೀಡಬೇಕು. ಅವರ ಮೇಲೆ ಬೆದರಿಕೆ, ಒತ್ತಡವಿದ್ದರೆ, ತನಿಖೆ ನಡೆಸುವಂತೆಯೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತು.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು, ಅರ್ಜಿ ಸಲ್ಲಿಸಿದ 20 ದಿನಗಳಲ್ಲಿ ಯಾವುದೋ ಒತ್ತಡಕ್ಕೋ, ಪ್ರಭಾವಕ್ಕೋ ಒಳಗಾಗಿ ಮೃತ ಮಹಿಳೆಯ ಕುಟುಂಬ ತಮ್ಮ ಈ ಹಿಂದಿನ ಹೇಳಿಕೆಗಳನ್ನು ಹಿಂದಕ್ಕೆ ಪಡೆದಿರುವುದು, ಆತ್ಮ ಸಾಕ್ಷಿಯ ವಂಚನೆಯಾಗಿದೆ. ಇದೊಂದು ನಿರಾಶಾದಾಯಕ ಮತ್ತು ನೋವಿನ ಸಂಗತಿಯಾಗಿದೆ. ಹೀಗಾಗಿ ಕುಟುಂಬಕ್ಕೆ ಭದ್ರತೆ ನೀಡಬೇಕು. ಒತ್ತಡ ಹೇರಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿತು.

ಮೃತ ಮಹಿಳೆಯ ಪೋಷಕರು ಮತ್ತು ಸಹೋದರಿಯು 2019 ರಿಂದ ವಿವಿಧ ವೇದಿಕೆಗಳಲ್ಲಿ ತೀವ್ರವಾಗಿ ಪ್ರತಿಭಟನೆ ನಡೆಸಿದ್ದರು. ಆದರೆ, ಈಗ ಹಠಾತ್ತಾಗಿ ಹಿಂದೆ ಸರಿದಿರುವುದು ಸಿಆರ್​ಪಿಸಿ ಸೆಕ್ಷನ್ 311, ಸಂವಿಧಾನದ 142 ರ ಅಡಿ ನಾವು ಸಾಂವಿಧಾನಿಕ ಅಧಿಕಾರವನ್ನು ಬಳಸುತ್ತಿದ್ದೇವೆ ಎಂದು ಪೀಠವು ಹೇಳಿತು.

ಯಾವುದೇ ರೀತಿಯ ಬೆದರಿಕೆ, ಮಾನಸಿಕ ಭಯ ಅಥವಾ ಯಾವುದೇ ಪ್ರಚೋದನೆಗೆ ಒಳಗಾಗಿದ್ದನ್ನು ಖಾತ್ರಿಪಡಿಸಿಕೊಂಡ ನಂತರ ಕುಟುಂಬವನ್ನು ಹೊಸದಾಗಿ ಪರೀಕ್ಷೆಗೆ ಒಳಪಡಿಸಿ. 20 ದಿನಗಳ ಅಂತರದಲ್ಲಿ ಅರ್ಜಿದಾರರಾದ ಮೃತ ಮಹಿಳೆಯ ತಾಯಿ, ಸಹೋದರಿ, ತಂದೆ ಉಲ್ಟಾ ಹೇಳಿಕೆ ನೀಡುತ್ತಿದ್ದು ಪೀಠದ ಗಮನಕ್ಕೆ ಬಂದಿದೆ. ಹೀಗಾಗಿ ಅವರ ಮೇಲಿನ ಒತ್ತಡ ಏನೆಂದು ಪತ್ತೆ ಮಾಡಿ ಎಂದು ಪೊಲೀಸರಿಗೆ ಪೀಠ ಹೇಳಿದೆ.

ನ್ಯಾಯ ಕೊಡಿಸೋದೆ ಕೋರ್ಟ್​ ಕೆಲಸ: ಅರ್ಜಿದಾರರು ಯಾವುದೋ ಕಾರಣಕ್ಕಾಗಿ ಹೇಳಿಕೆಗಳನ್ನು ಬದಲಿಸುತ್ತಿರುವುದು ನ್ಯಾಯ ವ್ಯವಸ್ಥೆಯ ಮೇಲಿನ ವಿಶ್ವಾಸವೇ ಕಳೆದು ಹೋದಂತಾಗುತ್ತದೆ. ಈ ಪ್ರಕರಣದಲ್ಲಿ ನಮಗಿರುವ ವಿಶೇಷಾಧಿಕಾರವನ್ನು ಬಳಸಿ, ನ್ಯಾಯ ಕೊಡಿಸುತ್ತೇವೆ. ತಪ್ಪು ಮಾಡಿದ ಅಪರಾಧಿಗಳಿಗೆ ಶಿಕ್ಷೆ ನೀಡುವುದೇ ನ್ಯಾಯಾಲಯಗಳ ಗುರುತರ ಕೆಲಸವಾಗಿದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ಪ್ರಕರಣದ ಹಿನ್ನೆಲೆ: ಮಹಿಳೆಯೊಬ್ಬಳು 2019ರ ಡಿಸೆಂಬರ್ 21 ರಂದು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮೃತಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಇದು ಪತಿಯ ಕೃತ್ಯ ಎಂದು ಆರೋಪಿಸಿ ಮಹಿಳೆಯ ಕುಟುಂಬ ದೂರು ನೀಡಿತ್ತು. ವಿಚಾರಣೆಯ ವೇಳೆ ಪತಿ, ತನ್ನ ಪತ್ನಿಯ ಹತ್ಯೆಗಾಗಿ ಇಬ್ಬರಿಗೆ ಸುಪಾರಿ ನೀಡಿದ್ದ. ಪ್ರಕರಣದಲ್ಲಿ ಮೂವರನ್ನೂ ಬಂಧಿಸಲಾಗಿತ್ತು.

ಇದಾದ ಬಳಿಕ 2020ರ ಆಗಸ್ಟ್ 12 ರಂದು ಕರ್ನಾಟಕ ಹೈಕೋರ್ಟ್ ಆರೋಪಿ ನರೇಂದ್ರ ಬಾಬು(respondent no.10)ಗೆ ಜಾಮೀನು ಮಂಜೂರು ಮಾಡಿತ್ತು. ಇದರ ವಿರುದ್ಧ ಮಹಿಳೆಯ ಕುಟುಂಬ ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಕುಟುಂಬ ಯಾವುದೋ ಬೆದರಿಕೆ ಒಳಗಾಗಿ ತನ್ನ ಈ ಹಿಂದಿನ ಹೇಳಿಕೆಗಳನ್ನು ಹಿಂಪಡೆಯುತ್ತಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಹಣದ ಹೊಳೆ.. ಒಟ್ಟಾರೆ ₹307 ಕೋಟಿ ವಶ.. 200 ಕೆ ಜಿ ಬಂಗಾರ ಜಪ್ತಿ ಮಾಡಿದ ಪೊಲೀಸರು!

Last Updated :Oct 21, 2023, 10:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.