ETV Bharat / bharat

ಗುರುದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಅಮೃತ್​ಪಾಲ್​ ಬೆಂಬಲಿಗರು: ಪ್ರತಿಭಟನೆ ತೆರವುಗೊಳಿಸಿದ ಪಂಜಾಬ್​ ಪೊಲೀಸ್​

author img

By

Published : Mar 21, 2023, 7:30 PM IST

ಅಮೃತ್​ಪಾಲ್​ ತಂದೆ ತಮ್ಮ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಅವನಿಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೆ ನೀಡಿದ್ದರು.

Protest by Amritpal Supporters near Gurdwara Punjab Police cleared the protest
ಗುರುದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಅಮೃತ್​ಪಾಲ್​ ಬೆಂಬಲಿಗರು: ಪ್ರತಿಭಟನೆ ತೆರವುಗೊಳಿಸಿದ ಪಂಜಾಬ್​ ಪೊಲೀಸ್​

ಮೊಹಾಲಿ (ಪಂಜಾಬ್​): 'ವಾರಿಸ್​ ಪಂಜಾಬ್​ ದೇ' ಸಂಘಟನೆಯ ಮುಖ್ಯಸ್ಥ ಅಮೃತ್​ಪಾಲ್​ ಸಿಂಗ್​ ಪರವಾಗಿ ಸೋಹಾನಾ ಸಾಹಿಬ್​ ಗುರುದ್ವಾರದ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತಿದ್ದ ಅಮೃತ್​ಪಾಲ್​ ಬೆಂಬಲಿಗರನ್ನು ಪಂಜಾಬ್​ ಪೊಲೀಸ್​ ಸ್ಥಳದಿಂದ ತೆರವುಗೊಳಿಸಿದ್ದಾರೆ. ಗುರುದ್ವಾರಕ್ಕೆ ಮುತ್ತಿಗೆ ಹಾಕಿದ್ದ, ಬೆಂಬಲಿಗರನ್ನು ತೆರವುಗೊಳಿಸುವ ವೇಳೆ ಸುಮಾರು 50 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದು, ಓರ್ವ ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ.

ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್​ಪಾಲ್ ನಾಪತ್ತೆಯಾಗಿದ್ದು, ಆತನ ಹಲವು ಬೆಂಬಲಿಗರನ್ನು ಬಂಧಿಸಲಾಗಿದೆ. ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿದ ಮೂರು ದಿನಗಳಿಂದ ಪ್ರತಿಭಟನಾಕಾರರು ಸೋಹಾನಾ ಸಾಹಿಬ್​ ಗುರುದ್ವಾರದ ಜನನಿಬಿಡ ಟ್ರಾಫಿಕ್ ಜಂಕ್ಷನ್‌ಗೆ ಮುತ್ತಿಗೆ ಹಾಕಿದ್ದರು. ಪ್ರತಿಭಟನಾಕಾರರನ್ನು ತೆರವುಗೊಳಿಸುವ ವೇಳೆ ಅವರ ಬಳಿ ಇದ್ದ ಕತ್ತಿಗಳು, ಈಟಿಗಳು ಮತ್ತು ಕೃಷಿ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕ್ರಾಸಿಂಗ್ ಅನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದ ಬಗ್ಗೆ ಗುರುದ್ವಾರದ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಕ್ರಮ ಕೈಗೊಂಡಿದ್ದಾರೆ.

ಇಂದು ಬೆಳಗ್ಗೆ ಗುರುದ್ವಾರದ ಸಿಬ್ಬಂದಿ ಶಸ್ತ್ರಸಜ್ಜಿತ ಪ್ರತಿಭಟನಾಕಾರರ ಬಳಿ, ಭಕ್ತರು ಪೂಜಾ ಸ್ಥಳಕ್ಕೆ ಬರಲು ಸಮಸ್ಯೆಯಾಗುತ್ತದೆ. ಗುರುದ್ವಾರದ ಪ್ರದೇಶದ ಜನರಲ್ಲಿ ಭೀತಿಯನ್ನುಂಟು ಮಾಡುತ್ತದೆ. ಆದ ಕಾರಣ ದಾರಿಯನ್ನು ತೆರವುಗೊಳಿಸಿ ಎಂದು ಕೇಳಿಕೊಂಡಿದ್ದರು. ಆದರೆ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರಿಸಿದ್ದರು. ಪ್ರತಿಭಟನಾಕಾರರು ಮತ್ತು ಗುರುದ್ವಾರ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದು, ಸಿಬ್ಬಂದಿ ಅಮೃತ್​ಪಾಲ್​ ಬೆಂಬಲಿಗರ ಟೆಂಟ್​ಗಳನ್ನು ತೆಗೆದುಹಾಕಿದ್ದಾರೆ. ಮಹಿಳೆಯರು ಮತ್ತು ವೃದ್ಧರೂ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಕಾರಣ ಸ್ಥಳಕ್ಕೆ ಬಂದ ಪೊಲೀಸರು, ರಸ್ತೆಯ ಎರಡೂ ಬದಿಯಲ್ಲಿದ್ದ ಬ್ಯಾರಿಕೇಡ್​ಗಳನ್ನು ತೆರವುಗೊಳಿಸಿದ್ದಾರೆ.

ಪತ್ರಕರ್ತರನ್ನು ರಕ್ಷಿಸುವ ವೇಳೆ ಪೊಲೀಸ್​ಗೆ ಗಾಯ: ರಸ್ತೆ ತಡೆಗೆ ಬಳಸಲಾಗಿದ್ದ ಕಲ್ಲುಗಳು ಮತ್ತು ಸಿಮೆಂಟ್ ಬ್ಲಾಕ್‌ಗಳನ್ನು ತೆಗೆದ ನಂತರ, ಪೊಲೀಸರು ಹಂತಹಂತವಾಗಿ ಸಂಚಾರಕ್ಕೆ ಕ್ರಾಸಿಂಗ್ ಅನ್ನು ಮುಕ್ತಗೊಳಿಸಿದರು. ಆದರೆ ತಕ್ಷಣವೇ ಶಸ್ತ್ರಸಜ್ಜಿತ ಯುವಕರ ಗುಂಪೊಂದು ಇಳಿದು, ಸಂಚಾರವನ್ನು ನಿಲ್ಲಿಸಿದೆ. ಈ ವೇಳೆ ಅಲ್ಲಿದ್ದ ಪತ್ರಕರ್ತರೊಬ್ಬರನ್ನು ಗುಂಪು ಸುತ್ತುವರಿದಿದ್ದು, ಮಾತಿನ ಚಕಮಕಿ ನಡೆದಿದೆ. ಒಬ್ಬ ಪೊಲೀಸ್​ ಆತನನ್ನು ರಕ್ಷಿಸಲು ಓಡಿಬಂದಿದ್ದು, ಆ ವೇಳೆ ಆತನ ಮುಖಕ್ಕೆ ಗಾಯವಾಗಿದೆ.

ಕೂಡಲೇ, ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ನಿರತ ಗುಂಪಿನ ಬಳಿಗೆ ಬಂದು ದಿಗ್ಬಂಧನವನ್ನು ತೆಗೆದುಹಾಕುವಂತೆ ಹೇಳಿದ್ದಾರೆ. ಪ್ರತಿಭಟನಾಕಾರರು ಪೊಲೀಸರ ಮಾತಿಗೆ ಒಲ್ಲೆ ಎಂದಾಗ ಸುಮಾರು 200 ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರನ್ನು ಸುತ್ತುವರೆದು ಅವರನ್ನು ಬಂಧಿಸಲು ಪ್ರಾರಂಭಿಸಿದ್ದಾರೆ. ಅವರನ್ನು ಬಸ್‌ಗಳು ಮತ್ತು ಹತ್ತಿರದ ಪೊಲೀಸ್ ಪಿಕ್-ಅಪ್ ವಾಹನಗಳಲ್ಲಿ ಕರೆದೊಯ್ಯಲಾಯಿತು.

ಮೊಹಾಲಿ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ನವರೀತ್ ಸಿಂಗ್ ವಿರ್ಕ್ ಮಾತನಾಡಿ, ಅಮೃತ್​ಪಾಲ್​ ಬೆಂಬಲಿಗರ ಪ್ರತಿಭಟನೆಯಿಂದಾಗಿ ನಾಲ್ಕು ದಿನಗಳ ಕಾಲ ಭಕ್ತರು ಗುರುದ್ವಾರದ ಒಳಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಲಂಗರ್​ಗಾಗಿ ತಯಾರಿಸಿದ ಆಹಾರ ಕೂಡ ವ್ಯರ್ಥವಾಗಿದೆ. ಸೋಮವಾರ ಸಂಜೆಯಿಂದ ಎಸ್ಪಿ ಹಾಗೂ ಗುರುದ್ವಾರ ಆಡಳಿತ ಮಂಡಳಿ ಕೂಡ ಕಾನೂನು ಬಾಹಿರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೆ ಅದು ವ್ಯರ್ಥವಾಗಿದೆ. ಎರಡೂ ಗುಂಪುಗಳ ನಡುವೆ ಘರ್ಷಣೆಯಾದಾಗ ಪೊಲೀಸರು ಮಧ್ಯಪ್ರವೇಶಿಸಿ ಕ್ರಾಸಿಂಗ್​ ತೆರವುಗೊಳಿಸಬೇಕಾಯಿತು ಎಂದು ತಿಳಿಸಿದ್ದಾರೆ.

ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಲು ಯಾವುದೇ ಲಾಠಿ ಚಾರ್ಜ್ ಅಥವಾ ಬಲಪ್ರಯೋಗ ನಡೆದಿಲ್ಲ. ಕೆಲವು ಪ್ರತಿಭಟನಾಕಾರರು ಪ್ರತಿರೋಧ ತೋರಿದರು, ಆದ್ದರಿಂದ ಅವರನ್ನು ಎತ್ತಿಕೊಂಡು ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ. 50 ಜನರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿಟ್ಟುಸಿರು ಬಿಟ್ಟ ಪ್ರಯಾಣಿಕರು, ಸ್ಥಳೀಯರು: ಇಂದು ಮಧ್ಯಾಹ್ನ 2 ಗಂಟೆಯ ನಂತರ ಕ್ರಾಸಿಂಗ್​ನಲ್ಲಿ ಸಾಮಾನ್ಯ ಸಂಚಾರ ಪ್ರಾರಂಭವಾಯಿತು. ಮೂರು ದಿನಗಳಿಂದ ಹಿಂಸಾಚಾರದ ಭಯದ ವಾತಾವರಣದಲ್ಲಿ ಬದುಕುತ್ತಿದ್ದ ಈ ಭಾಗದ ನಿವಾಸಿಗಳು, ಅಂಗಡಿಕಾರರು ಹಾಗೂ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಯಿತು.

ಇದನ್ನೂ ಓದಿ: 3ನೇ ದಿನಕ್ಕೆ ಕಾಲಿಟ್ಟ ಅಮೃತ್‌ಪಾಲ್‌ ತಲಾಶ್: ಪೊಲೀಸರಿಗೆ ಶರಣಾದ ಚಿಕ್ಕಪ್ಪ, ಚಾಲಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.