ದೇಶದಲ್ಲಿ 5G ಸೇವೆ ಯುಗಾರಂಭ.. ಹೈಸ್ಪೀಡ್​ ಇಂಟರ್​ನೆಟ್​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

author img

By

Published : Oct 1, 2022, 12:49 PM IST

Updated : Oct 1, 2022, 1:34 PM IST

prime-minister-narendra-modi-launch-5-g

ದೆಹಲಿಯ ಇಂಡಿಯನ್​ ಮೊಬೈಲ್​ ಸಮ್ಮೇಳನದಲ್ಲಿ (ಐಎಂಸಿ) ಹೈಸ್ಪೀಡ್​ ಇಂಟರ್​ನೆಟ್​ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗ್ನೀನ್​ ಸಿಗ್ನಲ್​ ನೀಡಿದರು. ಈ ಮೂಲಕ ದೇಶದಲ್ಲಿ ಇಂದಿನಿಂದ 5ಜಿ ಯುಗಾರಂಭ ಮಾಡಿತು.

ನವದೆಹಲಿ: ದೇಶದಲ್ಲಿ ಬಹುನಿರೀಕ್ಷಿತ 5G ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ದೆಹಲಿಯ ಇಂಡಿಯನ್​ ಮೊಬೈಲ್​ ಸಮ್ಮೇಳನದಲ್ಲಿ (ಐಎಂಸಿ) ಹೈಸ್ಪೀಡ್​ ಇಂಟರ್​ನೆಟ್​ಗೆ ಗ್ನೀನ್​ ಸಿಗ್ನಲ್​ ನೀಡಿದರು. ಈ ಮೂಲಕ ದೇಶದಲ್ಲಿ ಇಂದಿನಿಂದ 5G ಯುಗಾರಂಭ ಮಾಡಿತು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಮಹತ್ತರ ಪಾತ್ರ ವಹಿಸುತ್ತದೆ/ ಇನ್ನು ಮುಂದೆ ಟೆಲಿಕಾಂ ಕಂಪನಿಗಳಿಂದ ದೇಶದ ಜನರಿಗೆ 5 ಜಿ ಸೇವೆ ಸಿಗಲಿದೆ. ಇದು ದೂರಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲಿದೆ. ಈ ಸಾಧನೆಗೆ ನಾನು ಎಲ್ಲರನ್ನೂ ಅಭಿನಂದಿಸುವೆ ಎಂದು ಹೇಳಿದರು.

2022ರ ಅಂತ್ಯಕ್ಕೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ. ಮೊದಲ ಹಂತವಾಗಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಖನೌ, ಮುಂಬೈ ಮತ್ತು ಪುಣೆಯಲ್ಲಿ 5ಜಿ ಸೇವೆ ಲಭ್ಯವಾಗಲಿದೆ.

ಬಳಸುವುದೊಂದೇ ಅಲ್ಲ, ಅಭಿವೃದ್ಧಿ ಕೂಡ ಮಾಡ್ತೀವಿ: 5G ಬಿಡುಗಡೆಯು 130 ಕೋಟಿ ಭಾರತೀಯರಿಗೆ ಟೆಲಿಕಾಂ ಉದ್ಯಮದಿಂದ ಅದ್ಭುತ ಕೊಡುಗೆಯಾಗಿದೆ. ಇದು ದೇಶದಲ್ಲಿ ಹೊಸ ಯುಗಕ್ಕೆ ಒಂದು ಹೆಜ್ಜೆ, ಅನಂತ ಅವಕಾಶಗಳಿಗೆ ಆರಂಭ ನೀಡಲಿದೆ. ನವ ಭಾರತ ಕೇವಲ ತಂತ್ರಜ್ಞಾನದ ಗ್ರಾಹಕನಾಗಿ ಉಳಿಯುವುದಿಲ್ಲ. ಅದನ್ನು ಅಭಿವೃದ್ಧಿ ಪಡಿಸಿ ಅನುಷ್ಠಾನ ಮಾಡುವ ಶಕ್ತಿ ಇದೆ. ಜಗತ್ತಿನ ತಾಂತ್ರಿಕತೆಯನ್ನು ಮುನ್ನಡೆಸುವತ್ತ ದಾಪುಗಾಲಿಟ್ಟಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಡಿಜಿಟಲ್ ಇಂಡಿಯಾದ ಯಶಸ್ಸು ಸಾಧನದ ವೆಚ್ಚ, ಡಿಜಿಟಲ್ ಸಂಪರ್ಕ, ಡೇಟಾ ಕಾಸ್ಟ್​ ಮತ್ತು ಡಿಜಿಟಲ್ ಫಸ್ಟ್​ ಅಪ್ರೋಚ್​ ಮೇಲೆ ನಿಂತಿದೆ. ಈ 4 ಸ್ತಂಭಗಳ ಮೇಲೆ ನಾವು ಕೆಲಸ ಮಾಡಿದ್ದೇವೆ. 2014 ರಲ್ಲಿ ಶೂನ್ಯದಿಂದ ಆರಂಭಿಸಿದ ಮೊಬೈಲ್ ಫೋನ್‌ಗಳ ರಫ್ತು, ಇಂದು ಸಾವಿರಾರು ಕೋಟಿಗೆ ಬಂದು ತಲುಪಿದೆ. ನಮ್ಮ ಈ ಪ್ರಯತ್ನ ಅವುಗಳ ಬೆಲೆಯನ್ನು ಕಡಿಮೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಸುಧಾರಿತ ಸಾಧನಗಳನ್ನು ಪ್ರಪಂಚಕ್ಕೆ ಪರಿಚಯಿಸಿದ್ದೇವೆ ಎಂದರು.

ತಂತ್ರಜ್ಞಾನದ ಬಳಕೆಯೇ ನಿಜವಾದ ಪ್ರಜಾಪ್ರಭುತ್ವ: ದೇಶದಲ್ಲಿ ದಿಲ್ಲಿಯಿಂದ ಹಳ್ಳಿಯವರೆಗೂ ತಂತ್ರಜ್ಞಾನವನ್ನು ಪ್ರತಿಯೊಬ್ಬರೂ ಬಳಸಿದಲ್ಲಿ ಅದು ನಿಜವಾದ ಪ್ರಜಾಪ್ರಭುತ್ವವಾಗಲಿದೆ. ದೇಶದ ಪ್ರತಿ ಬಡವನಿಗೂ ಅಗ್ಗದಲ್ಲಿ ಸೇವೆ ಲಭ್ಯವಾಗಬೇಕು. ಅದನ್ನು ನಮ್ಮ ಸರ್ಕಾರ ಮಾಡಿದೆ ಎಂದರು.

ಈ ಹಿಂದೆ 1 GB ಡೇಟಾದ ಬೆಲೆ ಸುಮಾರು 300 ರೂ.ಗಳಷ್ಟಿತ್ತು. ಅದು ಈಗ ಪ್ರತಿ ಜಿಬಿಗೆ 10 ರೂ.ಗೆ ಇಳಿದಿದೆ. ದೇಶದಲ್ಲಿ ಒಬ್ಬ ವ್ಯಕ್ತಿ ತಿಂಗಳಿಗೆ ಸರಾಸರಿ 14 ಜಿಬಿ ಇಂಟರ್​ನೆಟ್​ ಬಳಸುತ್ತಾನೆ. ಇದಕ್ಕೆ ಮೊದಲು ತಿಂಗಳಿಗೆ ಸುಮಾರು 4200 ರೂ. ವೆಚ್ಚವಾಗುತ್ತಿತ್ತು. ಆದರೆ ಈಗ 125-150 ರೂ. ಮಾತ್ರ ಪಾವತಿಸಬೇಕು. ಸರ್ಕಾರದ ಪ್ರಯತ್ನಗಳೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಪ್ರತಿಯೊಬ್ಬ ಪ್ರಜೆಯನ್ನೂ ತಲುಪಿದೆ. ಬೀದಿ ವ್ಯಾಪಾರಿಗಳು ಕೂಡ UPI ಸೌಲಭ್ಯವನ್ನು ಬಳಸುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಯ ಪ್ರತೀಕವಾಗಿದೆ ಎಂದು ಮೋದಿ ಶ್ಲಾಘಿಸಿದರು.

ಓದಿ: 5ಜಿ ನೆಟ್​ವರ್ಕ್​ಗೆ ಪ್ರಧಾನಿ ಮೋದಿ ಚಾಲನೆಗೆ ಕ್ಷಣಗಣನೆ.. ಅದರ ಸ್ಪೀಡ್​ ಎಷ್ಟಿದೆ ಗೊತ್ತಾ?

Last Updated :Oct 1, 2022, 1:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.