ETV Bharat / bharat

ಪಿಎಂಒ ಅಧಿಕಾರಿ ಎಂದು ಹೇಳಿ ವಂಚನೆ ಪ್ರಕರಣ: ಪ್ರೋಟೋಕಾಲ್​ಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ

author img

By

Published : Mar 19, 2023, 4:08 PM IST

ಪ್ರಧಾನಮಂತ್ರಿ ಕಾರ್ಯಾಲಯದ ನಕಲಿ ಅಧಿಕಾರಿ ಕಿರಣ್ ಪಟೇಲ್‌ಗೆ ಅನುಚಿತ ಪ್ರೋಟೋಕಾಲ್​ಗೆ ಅನುಕೂಲ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವುದಾಗಿ ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್​ ಕುಮಾರ್​ ತಿಳಿಸಿದ್ದಾರೆ.

police-action-against-officers-who-involved-in-providing-protocol-to-gujarati-conman
ಪಿಎಂಒ ಅಧಿಕಾರಿ ಎಂದು ಹೇಳಿ ವಂಚನೆ ಪ್ರಕರಣ: ಪ್ರೋಟೋಕಾಲ್​ಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ)ದ ಉನ್ನತ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಸರ್ಕಾರಿ ಸೌಲಭ್ಯ ಪಡೆದಿದ್ದ ಗುಜರಾತ್​ನ ವಂಚಕ ಕಿರಣ್​ ಪಟೇಲ್​ ಪ್ರಕರಣಕ್ಕೆ ಸಂಬಂಧಿದಂತೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ. ಕಳೆದ ವಾರ ಬಂಧಿತನಾದ ಕಿರಣ್ ಪಟೇಲ್‌ಗೆ ಅನುಚಿತ ಪ್ರೋಟೋಕಾಲ್​ಗೆ ಅನುಕೂಲ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವುದಾಗಿ ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್​ ಕುಮಾರ್​ ತಿಳಿಸಿದ್ದಾರೆ.

ಪಿಎಂಒ ಉನ್ನತ ಮಟ್ಟದ ಅಧಿಕಾರಿ ಎಂದು ನಂಬಿಸಿ ವಂಚಕ ಕಿರಣ್ ಪಟೇಲ್‌ ನಾಲ್ಕು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ. ಈ ವೇಳೆ ಪಂಚತಾರಾ ಹೊಟೇಲ್‌ನಲ್ಲಿ ಆತಿಥ್ಯ ಪಡೆದುಕೊಂಡಿದ್ದ. ಅಷ್ಟೇ ಅಲ್ಲ, ವಿಶೇಷ ಭದ್ರತೆ ಹಾಗೂ ಬುಲೆಟ್​ ಪ್ರೂಫ್​ ವಾಹನವನ್ನೂ ಪಡೆದು ಕಾಶ್ಮೀರದಲ್ಲಿ ಕಿರಣ್ ಪಟೇಲ್‌ ಸುತ್ತಾಡಿದ್ದ. ಆದರೆ, ಇತ್ತೀಚೆಗೆ ಕಿರಣ್ ಪಟೇಲ್​ ಒಬ್ಬ ನಕಲಿ ಅಧಿಕಾರಿ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

ಇದೇ ವೇಳೆ ಈ ವಂಚಕ ಕಿರಣ್ ಪಟೇಲ್​ಗೆ ಸರ್ಕಾರಿ ಸೌಲಭ್ಯ ಒದಗಿದ ಅಧಿಕಾರಿಗಳ ನಡೆ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಇದರ ಬೆನ್ನಲ್ಲೇ, ಆತನಿಗೆ ಪ್ರೋಟೋಕಾಲ್​ಗೆ ಅನುಕೂಲ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿರಿಯ ಪೊಲೀಸರು ನಿರ್ಧರಿಸಿದ್ದಾರೆ. ಈ ಕುರಿತಾಗಿ ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್ ಖಚಿತ ಪಡಿಸಿದ್ದಾರೆ. ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲ ದೃಷ್ಟಿಕೋನಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಮುಂದುವರೆದು, ಅಧಿಕಾರಿಗಳಿಗೆ ಸಂಬಂಧಿಸಿದ ಎಸ್​​ಪಿಒ (Standard Operating Procedures - SOP) ಇರುತ್ತವೆ. ನಿಯಮಿತವಾಗಿ ಸೂಚನೆಗಳು ಬರುತ್ತವೆ. ಆದರೆ, ಪೊಲೀಸರು ಯಾರಿಗೂ ಮೌಖಿಕ ನಿರ್ದೇಶನಗಳ ಮೇಲೆ ಭದ್ರತೆಯನ್ನು ಒದಗಿಸಬಾರದು. ಅಲ್ಲದೇ, ಮೌಖಿಕ ನಿರ್ದೇಶನಗಳ ಮೇಲೆ ಭದ್ರತೆ ಕಲ್ಪಿಸಲು ಕೂಡ ಬರುವುದಿಲ್ಲ. ಈ ವಂಚಕ ಕಿರಣ್ ಪಟೇಲ್ ಪ್ರಕರಣದಲ್ಲಿ ಆಗಿರುವ ಲೋಪವನ್ನು ಪರಿಶೀಲಿಸುತ್ತಿದ್ದೇವೆ ಎಂದು ಎಡಿಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಇಷ್ಟೇ ಅಲ್ಲ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಕಂಡು ಹಿಡಿದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ಅಧಿಕಾರಿಗಳಿಗೆ ಇಂತಹ ನಿರ್ದೇಶನ ನೀಡಿದ್ದರಾ ಎಂಬ ಬಗ್ಗೆಯೂ ಪತ್ತೆ ಹಚ್ಚಲಾಗುವುದು. ಆದರೆ, ಒಟ್ಟಾರೆ ಘಟನೆಯು ಗುಪ್ತಚರ ವೈಫಲ್ಯವಲ್ಲ. ಇದೊಂದು ನಿರ್ಲಕ್ಷ್ಯ. ಕ್ಷೇತ್ರ ಅಧಿಕಾರಿ ಮಟ್ಟದಲ್ಲಿ ಈ ನಿರ್ಲಕ್ಷ್ಯ ನಡೆದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಝೆಡ್​​ ಭದ್ರತೆ, ಅಧಿಕೃತ ಪ್ರೋಟೋಕಾಲ್ ಪಡೆದಿದ್ದ ವಂಚಕ: ಗುಜರಾತ್​ನ ವಂಚಕ ಕಿರಣ್​ ಪಟೇಲ್​ ತಾನು ನವದೆಹಲಿಯ ಪ್ರಧಾನಮಂತ್ರಿ ಕಚೇರಿಯಲ್ಲಿ ಹೆಚ್ಚುವರಿ ನಿರ್ದೇಶಕ (ತಂತ್ರ ಮತ್ತು ಪ್ರಚಾರ ವಿಭಾಗ) ಎಂದು ಸುಳ್ಳು ಹೇಳಿಕೊಂಡು ಕಾಶ್ಮೀರಕ್ಕೆ ಭೇಟಿ ನೀಡಿದ್ದ. 2022ರ ನವೆಂಬರ್​ನಿಂದ ಮಾರ್ಚ್​ ತಿಂಗಳ ಅವಧಿಯಲ್ಲಿ ಒಟ್ಟು ನಾಲ್ಕು ಬಾರಿ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದ. ಈ ವಂಚಕನಿಗೆ ಪ್ರತಿ ಬಾರಿಯೂ ಪೊಲೀಸ್ ಮತ್ತು ಸ್ಥಳೀಯ ಆಡಳಿತದಿಂದ ಝೆಡ್​​ ಭದ್ರತೆ ಮತ್ತು ಅಧಿಕೃತ ಪ್ರೋಟೋಕಾಲ್ ಒದಗಿಸಲಾಗಿತ್ತು.

ಆದರೆ, ಇದೇ ಮಾರ್ಚ್ 3ರಂದು ಶ್ರೀನಗರಕ್ಕೆ ಬಂದಾಗ ವಂಚಕನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಪಂಚತಾರಾ ಲಲಿತ್ ಹೋಟೆಲ್‌ನಲ್ಲಿ ಕಿರಣ್​ ಪಟೇಲ್ ಸಿಕ್ಕಿ ಬಿದಿದ್ದು, ಆತನ ವಿರುದ್ಧ ಫೋರ್ಜರಿ, ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಕಿರಣ್​ ಪಟೇಲ್​ನನ್ನು ಶ್ರೀನಗರದ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.

ಗುಜರಾತ್​ನಲ್ಲಿ ಮೂರು ಕೇಸ್​ ದಾಖಲು: ವಂಚಕ ಕಿರಣ್​ ಪಟೇಲ್ ವಿರುದ್ಧ ಗುಜರಾತ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆಗಾಗಿ ಈಗಾಗಲೇ ಮೂರು ಪ್ರಕರಣಗಳು ಕೂಡ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಶೀಲಿಸಿದ (Verified) ಟ್ವಿಟರ್ ಖಾತೆ ಹೊಂದಿರುವ ಖದೀಮ, ಕಾಶ್ಮೀರದ ಗುಲ್ಮಾರ್ಗ್, ದೂಧಪತ್ರಿ ಮುಂತಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ ವಿಡಿಯೋಗಳು ಮತ್ತು ಫೋಟೋಗಳನ್ನು ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ.

ಟ್ವಿಟರ್‌ನಲ್ಲಿ ವಂಚಕನನ್ನು ಗುಜರಾತ್​ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಸಿನ್ಹ್ ವಘೇಲಾ ಫಾಲೋ ಮಾಡುತ್ತಿದ್ದಾರೆ. ವರ್ಜೀನಿಯಾದ ಕಾಮನ್‌ವೆಲ್ತ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ, ಐಐಎಂ ತಿರುಚ್ಚಿಯಿಂದ ಎಂಬಿಎ ಹಾಗೂ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಟೆಕ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಹೊಂದಿರುವುದಾಗಿ ಕಿರಣ್​ ಪಟೇಲ್ ತನ್ನ ಟ್ವಿಟ್ಟರ್ ಬಯೋದಲ್ಲಿ ಬರೆದುಕೊಂಡಿದ್ದಾನೆ.

ಇದನ್ನೂ ಓದಿ: ಪ್ರಧಾನಿ ಕಚೇರಿ ಅಧಿಕಾರಿ ಎಂದು ಸುಳ್ಳು ಹೇಳಿ ಬುಲೆಟ್‌ ಪ್ರೂಫ್‌ ವಾಹನ, ಭದ್ರತೆ ಪಡೆದ ಗುಜರಾತ್‌ ವ್ಯಕ್ತಿ ಸೆರೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.