ETV Bharat / bharat

ಅಂಗಾಂಗ ದಾನ, ನಾರಿ ಶಕ್ತಿ ಮಹತ್ವ ಕುರಿತು ಮೋದಿ 'ಮನ್‌ ಕಿ ಬಾತ್'

author img

By

Published : Mar 26, 2023, 1:17 PM IST

ಪ್ರಧಾನಿ ನರೇಂದ್ರ ಮೋದಿ ಅವರು ಇಂದು 99ನೇ ಆವೃತ್ತಿಯ 'ಮನ್ ಕಿ ಬಾತ್' ಉದ್ದೇಶಿಸಿ ಮಾತನಾಡಿದರು. ಇದು ಈ ವರ್ಷದ ಮೂರನೇ ಬಾನುಲಿ ಕಾರ್ಯಕ್ರಮವಾಗಿದೆ.

MannKiBaat
ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಮನ್​ ಕಿ ಬಾತ್​ನ 99ನೇ ಸಂಚಿಕೆಯಲ್ಲಿ ಅಂಗಾಂಗ ದಾನದ ಮಹತ್ವ ಹಾಗೂ ಮಹಿಳಾ ಶಕ್ತಿಯ ಕುರಿತು ಮಾತನಾಡಿದರು. ಆಧುನಿಕ ವೈದ್ಯಕೀಯ ವಿಜ್ಞಾನ ಯುಗದಲ್ಲಿ ಅಂಗಾಂಗ ದಾನವು ಯಾರಿಗಾದರೂ ಬದುಕು ಒದಗಿಸುವ ಅತ್ಯಂತ ಪ್ರಮುಖ ಸಾಧನವಾಗಿದೆ. ಒಬ್ಬ ವ್ಯಕ್ತಿಯು ಮರಣಾ ನಂತರ ಅಂಗಾಂಗ ದಾನ ಮಾಡಿದರೆ, 8 ರಿಂದ 9 ಜನರು ಹೊಸ ಜೀವನ ಪಡೆಯುವ ಸಾಧ್ಯತೆ ಇದೆ. ಇಂದು ದೇಶದಲ್ಲಿ ಈ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದರು.

ಅಂಗಾಂಗ ದಾನ ಮಾಡಿ: 2013ರಲ್ಲಿ ನಮ್ಮ ದೇಶದಲ್ಲಿ 5 ಸಾವಿರಕ್ಕಿಂತ ಕಡಿಮೆ ಅಂಗಾಂಗ ದಾನ ಪ್ರಕರಣಗಳಿದ್ದರೆ, 2022ರಲ್ಲಿ ಈ ಸಂಖ್ಯೆ 15 ಸಾವಿರಕ್ಕೂ ಹೆಚ್ಚಿದೆ. ಅಂಗಾಂಗ ದಾನಿಗಳು, ಅವರ ಕುಟುಂಬದವರು ನಿಜಕ್ಕೂ ಪುಣ್ಯಭಾಗಿಗಳು ಎಂದರು.

ಅಂಗಾಂಗ ದಾನದ ಹಿಂದಿನ ದೊಡ್ಡ ಭಾವನೆ ಎಂದರೆ ಪ್ರಾಣವನ್ನು ಬಿಟ್ಟು ಹೋಗುವಾಗಲೂ ಬೇರೆಯೊಬ್ಬರ ಜೀವ ಉಳಿಸುವುದು. ಇದಕ್ಕಾಗಿ ಕಾಯುವವರಿಗೆ ಹೀಗೆ ಕಾಯುವ ಪ್ರತಿ ಕ್ಷಣವನ್ನು ಕಳೆಯುವುದು ಎಷ್ಟು ಕಷ್ಟ ಎಂದು ತಿಳಿದಿದೆ. ಹಾಗಾಗಿ ಹೆಚ್ಚಿನ ಜನರು ಅಂಗಾಂಗ ದಾನ ಮಾಡಲು ಮುಂದೆ ಬರಬೇಕು ಎಂದು ಪ್ರಧಾನಿ ಮನವಿ ಮಾಡಿದರು. ಇದೇ ವೇಳೆ, ಇಂದು ನಾವು ಸ್ವಾತಂತ್ರ್ಯದ ಅಮೃತ ಕಾಲ ಆಚರಿಸುತ್ತಿದ್ದೇವೆ. ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯುತ್ತಿದ್ದೇವೆ. ಮನ್ ಕಿ ಬಾತ್‌ನ 100 ನೇ ಸಂಚಿಕೆ ಬಗ್ಗೆ ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ತಿಳಿಯಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು.

ಮಹಿಳಾ ಶಕ್ತಿಯ ಪ್ರಸ್ತಾಪ: ಇಂದು ಭಾರತದ ಸಾಮರ್ಥ್ಯವು ಹೊಸ ದೃಷ್ಟಿಕೋನದಿಂದ ಹೊರಹೊಮ್ಮುತ್ತಿದೆ. ನಮ್ಮ ಮಹಿಳಾ ಶಕ್ತಿಯು ಅದರಲ್ಲಿ ದೊಡ್ಡ ಪಾತ್ರ ಹೊಂದಿದೆ ಎಂದು ಪ್ರಧಾನಿ ಹೇಳಿದರು. ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ನೋಡಿರಬೇಕು. ಸುರೇಖಾ ಜಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದೇ ರೀತಿ ನಿನಿರ್ಮಾಪಕಿ ಗುನೀತ್ ಮೊಂಗಾ ಮತ್ತು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ತಮ್ಮ 'ದಿ ಎಲಿಫೆಂಟ್ ವಿಸ್ಪರ್ಸ್' ಚಿತ್ರಕ್ಕಾಗಿ ದೇಶಕ್ಕೆ ಆಸ್ಕರ್ ಪ್ರಶಸ್ತಿ ತಂದರು. ನಾಗಾಲ್ಯಾಂಡ್‌ನಲ್ಲಿ 75 ವರ್ಷಗಳ ನಂತರ ಮೊದಲ ಬಾರಿಗೆ ಇಬ್ಬರು ಮಹಿಳಾ ಶಾಸಕಿಯರು ವಿಧಾನಸಭೆಯನ್ನು ಪ್ರವೇಶಿದ್ದಾರೆ ಎಂದರು.

99ನೇ ಆವೃತ್ತಿಯ ಮನ್‌ ಕೀ ಬಾತ್ ಪ್ರಮುಖಾಂಶಗಳು..:

  • ಅಂಗಾಂಗ ದಾನ ಸುಲಭಗೊಳಿಸಲು ದೇಶಾದ್ಯಂತ ಏಕರೂಪದ ನೀತಿಯನ್ನು ರೂಪಿಸಲಾಗುತ್ತಿದೆ. ರಾಜ್ಯಗಳ ನಿವಾಸದ ಸ್ಥಿತಿಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಈಗ ರೋಗಿಯು ದೇಶದ ಯಾವುದೇ ರಾಜ್ಯಕ್ಕೆ ಹೋಗಿ ಅಂಗವನ್ನು ಪಡೆಯಲು ನೋಂದಾಯಿಸಲು ಸಾಧ್ಯವಾಗುತ್ತದೆ.
  • 2013ರಲ್ಲಿ, ದೇಶದಲ್ಲಿ 5,000 ಕ್ಕಿಂತ ಕಡಿಮೆ ಅಂಗಾಂಗ ದಾನ ಪ್ರಕರಣಗಳು ಇದ್ದವು. 2022ರಲ್ಲಿ, ಸಂಖ್ಯೆ 15,000 ಕ್ಕಿಂತ ಹೆಚ್ಚಾಗಿದೆ.
  • ಯಾರಿಗಾದರೂ ಜೀವ ನೀಡಲು ಅಂಗಾಂಗ ದಾನ ಪ್ರಮುಖ ಮಾರ್ಗ. ಒಬ್ಬ ವ್ಯಕ್ತಿಯು ಮರಣದ ನಂತರ ಒಬ್ಬರ ದೇಹವನ್ನು ದಾನ ಮಾಡಿದಾಗ ಅದು ಎಂಟರಿಂದ ಒಂಬತ್ತು ಜನರಿಗೆ ಹೊಸ ಜೀವನವನ್ನು ಪಡೆಯುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.
  • ಭಾರತದ ನಾರಿ ಶಕ್ತಿ ಮುಂಚೂಣಿಯಲ್ಲಿದೆ. ನಿರ್ಮಾಪಕಿ ಗುನೀತ್ ಮೊಂಗಾ ಮತ್ತು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ತಮ್ಮ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ದೇಶಕ್ಕೆ ಪ್ರಶಸ್ತಿ ತಂದರು.
  • ಈ ವರ್ಷದ ಆರಂಭದಲ್ಲಿ ಭಾರತದ ಅಂಡರ್-19 ಮಹಿಳಾ ಕ್ರಿಕೆಟ್ ತಂಡ ಟಿ-20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿತ್ತು.
  • ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ.
  • ಭಾರತವು ಯುಎನ್ ಮಿಷನ್ ಅಡಿಯಲ್ಲಿ ಶಾಂತಿಪಾಲನೆಯಲ್ಲಿ ಮಹಿಳಾ ತುಕಡಿಯನ್ನು ನಿಯೋಜಿಸಿದೆ.
  • ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಯುದ್ಧ ಘಟಕದಲ್ಲಿ ಕಮಾಂಡ್ ನೇಮಕಾತಿಯನ್ನು ಪಡೆದ ಮೊದಲ ಮಹಿಳಾ ವಾಯುಪಡೆ ಅಧಿಕಾರಿಯಾಗಿದ್ದಾರೆ.
  • ಅದೇ ರೀತಿ ಭಾರತೀಯ ಸೇನೆಯ ಕ್ಯಾಪ್ಟನ್ ಶಿವ ಚೌಹಾಣ್ ಅವರು ಸಿಯಾಚಿನ್‌ನಲ್ಲಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  • ಇಂದು ಮಹಿಳಾ ಶಕ್ತಿಯಿಂದ ಭಾರತದ ಸಾಮರ್ಥ್ಯ ಹೊರಹೊಮ್ಮುತ್ತಿದೆ. ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಮತ್ತೊಂದು ದಾಖಲೆ ಬರೆದಿದ್ದಾರೆ. ವಂದೇ ಭಾರತ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
  • ನಾಗಾಲ್ಯಾಂಡ್‌ನಲ್ಲಿ 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಶಾಸಕಿಯರು ವಿಧಾನಸಭೆಯನ್ನು ಪ್ರವೇಶಿದ್ದಾರೆ.
  • 'ಸಬ್ಕಾ ಪ್ರಯಾಸ್' ಸ್ಪಿರಿಟ್ ಭಾರತದ ಸೌರ ಮಿಷನ್ ಅನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಸೌರಶಕ್ತಿ ಕ್ಷೇತ್ರದಲ್ಲಿ ಭಾರತ ಮುನ್ನಡೆಯುತ್ತಿರುವ ವೇಗ ದೊಡ್ಡ ಸಾಧನೆ.
  • ದಿಯು ಶೇ.100 ರಷ್ಟು ಶುದ್ಧ ಸೌರ ಶಕ್ತಿಯನ್ನು ಬಳಸುವ ಭಾರತದ ಮೊದಲ ಜಿಲ್ಲೆಯಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಎಂಎಸ್ಆರ್-ಆಲಿವ್ ಹೌಸಿಂಗ್ ಸೊಸೈಟಿಯ ಜನರು ಸೌರಶಕ್ತಿಯಿಂದ ಸೊಸೈಟಿಯನ್ನು ನಡೆಸಬೇಕೆಂದು ನಿರ್ಧರಿಸಿದರು ಮತ್ತು ಎಲ್ಲರೂ ಒಟ್ಟಾಗಿ ಸೌರ ಫಲಕಗಳನ್ನು ಅಳವಡಿಸಿದ್ದಾರೆ.
  • ಶತಮಾನಗಳ ಹಿಂದೆ, ಸೌರಾಷ್ಟ್ರದ ಅನೇಕ ಜನರು ತಮಿಳುನಾಡಿನ ವಿವಿಧ ಭಾಗಗಳಲ್ಲಿ ನೆಲೆಸಿದರು. ಈ ಜನರನ್ನು ಇಂದಿಗೂ 'ಸೌರಾಷ್ಟ್ರೈ ತಮಿಳು' ಎಂದು ಕರೆಯಲಾಗುತ್ತದೆ. 'ಸೌರಾಷ್ಟ್ರ-ತಮಿಳು ಸಂಗಮಂ' ಗುಜರಾತ್‌ನ ವಿವಿಧ ಭಾಗಗಳಲ್ಲಿ ಏಪ್ರಿಲ್ 17 ರಿಂದ 30 ರವರೆಗೆ ನಡೆಯಲಿದೆ. ಇದು ಸೌರಾಷ್ಟ್ರೀಯರು ಮತ್ತು ತಮಿಳರ ನಡುವಿನ ಸಾವಿರ ವರ್ಷಗಳ ಹಿಂದಿನ ಸಂಬಂಧವನ್ನು ಪುನರುಜ್ಜೀವನಗೊಳಿಸುತ್ತದೆ.
  • ಭದೇರ್ವಾ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಒಂದು ಪಟ್ಟಣ. ಇಲ್ಲಿನ ರೈತರು ದಶಕಗಳಿಂದ ಸಾಂಪ್ರದಾಯಿಕ ಜೋಳದ ಕೃಷಿ ಮಾಡುತ್ತಿದ್ದು, ಕೆಲವು ರೈತರು ವಿಭಿನ್ನವಾಗಿ ಯೋಚಿಸಿ ಪುಷ್ಪ ಕೃಷಿಯತ್ತ ಮುಖ ಮಾಡಿದ್ದಾರೆ.
  • ಕೆಲವೆಡೆ ಕೋವಿಡ್-19 ಹೆಚ್ಚಾಗುತ್ತಿದೆ. ಎಲ್ಲರೂ ಮುಂಜಾಗ್ರತೆ ವಹಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

100ನೇ ಮನ್‌ ಕಿ ಬಾತ್‌ಗೆ ವಿಶೇಷ ಸಿದ್ಧತೆ: ಪ್ರಧಾನಿ ನರೇಂದ್ರ ಮೋದಿಯವರ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನ 100ನೇ ಸಂಚಿಕೆ ಏಪ್ರಿಲ್ 30 ರಂದು ಪ್ರಸಾರವಾಗಲಿದೆ. ಇದಕ್ಕೂ ಮುನ್ನ ಆಲ್ ಇಂಡಿಯಾ ರೇಡಿಯೋ ಬುಧವಾರ ವಿಶೇಷ ಅಭಿಯಾನ ಆರಂಭಿಸಲಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಪ್ರಧಾನ ಮಂತ್ರಿಯ 'ಮನ್ ಕಿ ಬಾತ್' ನ ಪ್ರತಿ ಸಂಚಿಕೆಯಿಂದ ಸಂಬಂಧಿತ ಆಯ್ದ ಭಾಗಗಳನ್ನು ಒಳಗೊಂಡಿರುವ 'ಬೈಟ್'ಗಳನ್ನು ಎಲ್ಲಾ ಬುಲೆಟಿನ್‌ಗಳು ಮತ್ತು ಇತರ ಕಾರ್ಯಕ್ರಮಗಳೊಂದಿಗೆ ಆಲ್ ಇಂಡಿಯಾ ರೇಡಿಯೊದ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಅಭಿಯಾನವು ಮಾರ್ಚ್ 15 ರಂದು ಪ್ರಾರಂಭವಾಗಿ ಏಪ್ರಿಲ್ 29 ರಂದು ಮುಕ್ತಾಯಗೊಳ್ಳಲಿದೆ.

'ಮನ್ ಕಿ ಬಾತ್' ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುವ ಮಾಸಿಕ ಕಾರ್ಯಕ್ರಮವಾಗಿದ್ದು, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳೊಂದಿಗೆ ಸಂವಹನ ನಡೆಸುತ್ತಾರೆ. ಈ ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ಹಾಗೂ ಆಲ್ ಇಂಡಿಯಾ ರೇಡಿಯೋ ಸುದ್ದಿ ವೆಬ್‌ಸೈಟ್ ಮತ್ತು ನ್ಯೂಸ್‌ಆನ್ ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.

ಇದನ್ನೂ ಓದಿ: 11 ಗಂಟೆಗೆ ಕೇಳಿ ಪ್ರಧಾನಿ ಮೋದಿ 'ಮನ್ ಕಿ ಬಾತ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.