ETV Bharat / bharat

ಸಂಸತ್​ ಭದ್ರತಾ ಲೋಪ ಕೇಸ್​: ಆರನೇ ಆರೋಪಿ ಬಂಧನ, 7 ದಿನ ಪೊಲೀಸ್​ ಕಸ್ಟಡಿಗೆ

author img

By ETV Bharat Karnataka Team

Published : Dec 16, 2023, 6:04 PM IST

ಸಂಸತ್​ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಸಂಸತ್​ ಭದ್ರತಾ ಲೋಪ ಕೇಸ್
ಸಂಸತ್​ ಭದ್ರತಾ ಲೋಪ ಕೇಸ್

ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಆರನೇ ಆರೋಪಿಯನ್ನು ಶನಿವಾರ ಬಂಧಿಸಲಾಯಿತು. ಮಹೇಶ್ ಕುಮಾವತ್ ಎಂಬಾತನನ್ನು ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ದೆಹಲಿ ಪೊಲೀಸ್​ ವಿಶೇಷ ದಳ ಬಂಧಿಸಿ, ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬಳಿಕ ಕೋರ್ಟ್ ಆತನನ್ನು ವಿಚಾರಣೆಗಾಗಿ​ 7 ದಿನಗಳವರೆಗೆ ಪೊಲೀಸ್​ ಕಸ್ಟಡಿಗೆ ನೀಡಿದೆ.

ಬಂಧಿತ ಆರೋಪಿ ಮಹೇಶ್​ ಇತರ ಆರೋಪಿಗಳೊಂದಿಗೆ ಸೇರಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಯಸಿದ್ದರು. ಈ ಮೂಲಕ ಅನ್ಯಾಯಗಳ ವಿರುದ್ಧ ಧ್ವನಿಯೆತ್ತಲು ಬಯಸಿದ್ದರು. ಸಂಸತ್​ಗೆ ನುಗ್ಗುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುವ ಇಂಗಿತ ಹೊಂದಿದ್ದರು ಎಂದು ಪೊಲೀಸರು ತಿಳಿಸಿದರು.

ಇದಲ್ಲದೇ, ಪ್ರಮುಖ ಆರೋಪಿ ಲಲಿತ್​ ಝಾ ರಾಜಸ್ಥಾನದಲ್ಲಿ ಅಡಗಿಕೊಳ್ಳಲು ಮಹೇಶ್​ ನೆರವು ನೀಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಹೇಶ್ ಇತರ ಆರೋಪಿಗಳೊಂದಿಗೆ ಕಳೆದ 2 ವರ್ಷಗಳಿಂದ ನಂಟು ಹೊಂದಿದ್ದಾನೆ. ಈತ ಸಂಸತ್​ಗೆ ನುಗ್ಗಿದ ಪ್ರಕರಣದ ಪಿತೂರಿ ಭಾಗವಾಗಿದ್ದ. ಆರೋಪಿಗಳ ನಡುವೆ ನಡೆದ ಬಹುತೇಕ ಸಭೆಗಳಿಗೂ ಹಾಜರಾಗಿದ್ದ. ಲಲಿತ್ ಝಾ ಅವರೊಂದಿಗೆ ಮೊಬೈಲ್ ಫೋನ್ ಮತ್ತು ಸಾಕ್ಷ್ಯ ನಾಶಪಡಿಸುವ ಕೃತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

  • Parliament Security Breach | Delhi's Patiala House Court sent the sixth accused Mahesh to 7-day Police custodial remand in connection with the case.

    Police claims that he alongwith others wanted to create anarchy in the country so that they can compel the government to meet…

    — ANI (@ANI) December 16, 2023 " class="align-text-top noRightClick twitterSection" data=" ">

7 ದಿನ ಪೊಲೀಸ್​ ಕಸ್ಟಡಿಗೆ: ಮಹೇಶ್​ನನ್ನು ಬಂಧಿಸಿದ ಬಳಿಕ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಲು ತನಿಖಾಧಿಕಾರಿಗಳು 15 ದಿನಗಳ ಕಾಲ ವಶಕ್ಕೆ ನೀಡಲು ಕೋರಿದರು. ಕೋರ್ಟ್​, 7 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಪ್ರಕರಣದ ಪ್ರಮುಖ ಆರೋಪಿ ಲಲಿತ್ ಝಾ ಗುರುವಾರ ಪೊಲೀಸರಿಗೆ ಶರಣಾಗಿದ್ದ. ಈತನ ಜೊತೆಗಿದ್ದ ಮಹೇಶ್​ನನ್ನೂ ಪೊಲೀಸರು ವಿಚಾರಣೆ ನಡೆಸಿದ್ದರು. ಘಟನೆಯಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸಂಸತ್​ ಒಳಗೆ ನುಗ್ಗಲು ಯತ್ನಿಸಿದ ದಿನದಂದು ಮಹೇಶ್​ ಅಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ. 'ಭಗತ್ ಸಿಂಗ್ ಫ್ಯಾನ್ ಪೇಜ್' ಹೆಸರಿನ ಫೇಸ್‌ಬುಕ್ ಗುಂಪಿನ ಮೂಲಕ ಮಹೇಶ್ ಮತ್ತು ಲಲಿತ್​ ಝಾ ಮತ್ತಿತರರು ಸಂಸತ್​ ಒಳಗೆ ನುಗ್ಗುವ ಬಗ್ಗೆ ಯೋಜನೆ ರೂಪಿಸಿದ್ದರು.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಲಲಿತ್ ಝಾ ಸೇರಿದಂತೆ ಮೈಸೂರಿನ ವಿಜಯನಗರ ನಿವಾಸಿಯಾಗಿರುವ ಎಂಜಿನಿಯರಿಂಗ್ ಪದವೀಧರ ಮನೋರಂಜನ್‌ ಡಿ. ಹಾಗೂ ಲಖನೌದ ಸಾಗರ್‌ ಶರ್ಮಾ, ಹರಿಯಾಣದ ಹಿಸಾರ್‌ನ ನೀಲಂ ಮತ್ತು ಮಹಾರಾಷ್ಟ್ರದ ಲಾತೂರ್‌ನ ಅಮೋಲ್ ಶಿಂಧೆ ಎಂಬುವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಸಂಸತ್ ಭದ್ರತಾ ಲೋಪ ಪ್ರಕರಣ: ಮತ್ತಿಬ್ಬರು ವಶಕ್ಕೆ, ಲಲಿತ್​ ಝಾಗೆ ಪೊಲೀಸ್​ ಕಸ್ಟಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.