ETV Bharat / bharat

1994ರಲ್ಲೂ ಸಂಸತ್ತಿನಲ್ಲಿ ಭದ್ರತಾ ಲೋಪ: ಗ್ಯಾಲರಿಯಿಂದ ಸದನಕ್ಕೆ ಜಿಗಿದಿದ್ದ ಅಂದಿನ ಯುವಕ ಈಗ ಏನಂತಾರೆ?

author img

By ETV Bharat Karnataka Team

Published : Dec 16, 2023, 1:01 PM IST

Updated : Dec 16, 2023, 2:02 PM IST

Parliament security breach incident: ಉತ್ತರಾಖಂಡ ಪ್ರತ್ಯೇಕ ರಾಜ್ಯದ ಹೋರಾಟದ ಸಂದರ್ಭದಲ್ಲಿ 1994ರ ಆಗಸ್ಟ್ 24ರಂದು ಇಬ್ಬರು ಯುವಕರು ಸಂಸತ್ತಿನ ಸಂದರ್ಶಕರ ಗ್ಯಾಲರಿಗೆ ಪ್ರವೇಶಿಸಿ ಘೋಷಣೆಗಳನ್ನು ಕೂಗಿದ್ದರು.

Parliament no stranger to security breaches as similar incident took place in 1994
1994ರಲ್ಲೂ ನಡೆದಿತ್ತು ಸಂಸತ್ತಿನಲ್ಲಿ ಭದ್ರತಾ ಲೋಪ: ಗ್ಯಾಲರಿಯಲ್ಲಿ ಇಬ್ಬರಿಂದ ಘೋಷಣೆ, ಸದನಕ್ಕೆ ಜಿಗಿದಿದ್ದ ಯುವಕ!

ಡೆಹ್ರಾಡೂನ್ (ಉತ್ತರಾಖಂಡ): ಇದೇ ಡಿಸೆಂಬರ್ 13ರಂದು ಸಂಸತ್ತು ಭವನದಲ್ಲಿ ಲೋಕಸಭಾ ಕಲಾಪದ ವೇಳೆ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ನುಗ್ಗಿದ್ದರಿಂದ ಉಂಟಾದ ಭದ್ರತಾ ಲೋಪದ ಘಟನೆಯು ದೇಶಾದ್ಯಂತ ಸಂಚಲನ ಮೂಡಿಸಿದೆ. ಅದೇ ರೀತಿಯಾದ ಘಟನೆಯು ಸುಮಾರು 30 ವರ್ಷಗಳ ಹಿಂದೆಯೂ ನಡೆದಿತ್ತು. 1994ರ ಆಗಸ್ಟ್ 24ರಂದು ಇಬ್ಬರು ಯುವಕರು ಸಂಸತ್ತಿನ ಸಂದರ್ಶಕರ ಗ್ಯಾಲರಿಗೆ ಪ್ರವೇಶಿಸಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು.

ಹೌದು, 1994ರಲ್ಲಿ ಮೋಹನ್ ಪಾಠಕ್ ಮತ್ತು ಮನಮೋಹನ್ ತಿವಾರಿ ಎಂಬ ಇಬ್ಬರು ಯುವಕರು ಸಂಸತ್ತಿನ ಸಂದರ್ಶಕರ ಗ್ಯಾಲರಿಯಲ್ಲಿ ನಿಂತು ಘೋಷಣೆಗಳು ಕೂಗಿದ್ದರು. ಅಲ್ಲದೇ, ಮೋಹನ್ ಪಾಠಕ್ ಕಲಾಪಕ್ಕೆ ಜಿಗಿದು ಸಂಸದರ ನಡುವೆ ಘೋಷಣೆಗಳನ್ನು ಎತ್ತಿದ್ದರು. ಇದೇ ವೇಳೆ, ಮನಮೋಹನ್ ತಿವಾರಿ ಗ್ಯಾಲರಿಯಿಂದಲೇ ಕರಪತ್ರಗಳನ್ನು ಎಸೆದಿದ್ದರು. ಉತ್ತರಾಖಂಡ ಪ್ರತ್ಯೇಕ ರಾಜ್ಯ ರಚನೆ ಕುರಿತು ಮೋಹನ್ ಪಾಠಕ್​ ಹಾಗೂ ಮನಮೋಹನ್ ತಿವಾರಿ ಸಂಸತ್ತಿನಲ್ಲಿ ಈ ರೀತಿ ಮಾಡಿದ್ದರು. ತಕ್ಷಣವೇ ಇಬ್ಬರನ್ನೂ ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಇವರು ಆಗ ವಿದ್ಯಾರ್ಥಿ ಒಕ್ಕೂಟದಲ್ಲಿ ತೊಡಗಿಸಿಕೊಂಡಿದ್ದರು.

30 ವರ್ಷಗಳ ಹಿಂದಿನ ಘಟನೆ ನೆನಪಿಸಿದ ಪಾಠಕ್: 1994ರಲ್ಲಿ ಸಂಸತ್ತಿನಲ್ಲಿ ಘೋಷಣೆ ಕೂಗಿದ್ದ ಇಬ್ಬರ ಪೈಕಿ ಒಬ್ಬರಾದ ಮೋಹನ್ ಪಾಠಕ್​ 'ಈಟಿವಿ ಭಾರತ್​'ನೊಂದಿಗೆ ಮಾತನಾಡಿ, ಅಂದಿನ ಘಟನೆಯನ್ನು ನೆನಪಿಸಿಕೊಂಡರು. ''ನಾನು ಉತ್ತರಾಖಂಡ ಪ್ರತ್ಯೇಕ ರಾಜ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಆ ಸಮಯದಲ್ಲಿ ನಾನು ವಿದ್ಯಾರ್ಥಿ ರಾಜಕೀಯ ಒಕ್ಕೂಟದೊಂದಿಗೆ ನಂಟು ಹೊಂದಿದ್ದೆ. 1994ರ ಆಗಸ್ಟ್ 24ರಂದು ನನ್ನ ಸ್ನೇಹಿತ ಮನಮೋಹನ್ ತಿವಾರಿ ಅವರೊಂದಿಗೆ ಸಂಸತ್ತಿಗೆ ಪ್ರವೇಶಿಸಿ ಘೋಷಣೆಗಳನ್ನು ಕೂಗಿದ್ದೆ. ನಂತರ ನಾನು ಸಂದರ್ಶಕರ ಗ್ಯಾಲರಿಯಿಂದ ಜಿಗಿದಿದ್ದೆ. ಅಷ್ಟೇ ಅಲ್ಲ, ಅಂದಿನ ಸ್ಪೀಕರ್ ಶಿವರಾಜ್ ಪಾಟೀಲ್ ಅವರ ಪೀಠದ ಬಳಿಗೆ ತೆರಳಿ 'ಆಜ್ ದೋ, ಅಭಿ ದೋ, ಉತ್ತರಾಖಂಡ್ ರಾಜ್ಯ ದೋ' (ಇಂದೇ ಕೊಡಿ, ಈಗಲೇ ಕೊಡಿ, ಉತ್ತರಾಖಂಡ್ ರಾಜ್ಯ ಕೊಡಿ) ಎಂದು ಘೋಷಣೆಗಳನ್ನು ಕೂಗಿದ್ದೆ'' ಎಂದು ಮೋಹನ್ ಪಾಠಕ್ ತಿಳಿಸಿದ್ದಾರೆ.

ನಮ್ಮಲ್ಲಿ ಹಾನಿಕಾರಕ ವಸ್ತು ಇರಲಿಲ್ಲ: ಇತ್ತೀಚೆಗೆ ನಡೆದ ಘಟನೆಯಲ್ಲಿ ಇಬ್ಬರು ಲೋಕಸಭೆ ಕಲಾಪದ ವೇಳೆ, ಸಂಸದರ ನಡುವೆ ಜಿಗಿದು ಹಳದಿ ಬಣ್ಣದ ಸ್ಪ್ರೇ ಎರಚಿದ್ದು ಆತಂಕಕ್ಕೆ ಕಾರಣವಾಗಿತ್ತು. ಆದರೆ, 1994ರ ಘಟನೆಯ ಸಂದರ್ಭದಲ್ಲಿ ನಮ್ಮಲ್ಲಿ ಯಾವುದೇ ಹಾನಿಕಾರಕ ವಸ್ತು ಇರಲಿಲ್ಲ ಎಂದು ಮೋಹನ್ ಪಾಠಕ್ ಹೇಳಿದರು.

''ನಾವು ನಮ್ಮ ಬೇಡಿಕೆಗಳನ್ನು ಕೇಳಿದ ವಿಧಾನವು ಸಂಪೂರ್ಣವಾಗಿ ಅಹಿಂಸಾತ್ಮಕವಾಗಿದೆ. ನಾವು ಸಂಸತ್ತಿಗೆ ಯಾವುದೇ ರೀತಿಯ ಹಾನಿಕಾರಕ ವಸ್ತುಗಳನ್ನು ನಮ್ಮೊಂದಿಗೆ ತೆಗೆದುಕೊಂಡು ಹೋಗಿರಲಿಲ್ಲ. ಸಂಸತ್ತಿಗೆ ಹೊಗೆ ಡಬ್ಬಿಗಳನ್ನು ತೆಗೆದುಕೊಂಡು ಹೋಗುವುದು ಸರಿಯಲ್ಲ, ಅದು ಸಂಪೂರ್ಣ ತಪ್ಪು'' ಎಂದು ಉತ್ತರಾಖಂಡ್ ಹೋರಾಟಗಾರ ಪಾಠಕ್​ ವಿವರಿಸಿದರು.

ಮತ್ತೊಬ್ಬ ಆಂದೋಲನಕಾರ ಪ್ರದೀಪ್ ಕುಕ್ರೇಟಿ ಮಾತನಾಡಿ, ''1994ರಲ್ಲಿ ಉತ್ತರಾಖಂಡ ರಾಜ್ಯ ಹೋರಾಟದ ವೇಳೆ ಯುವಕರು ಸಂಸತ್ತಿಗೆ ನುಗ್ಗಿದ್ದರು. ಸಂಸತ್ತಿನ ಒಳಗೆ ಕರಪತ್ರಗಳನ್ನು ಎಸೆದು ಘೋಷಣೆಗಳನ್ನು ಕೂಗಿದ್ದರು. ಯುವಕರು ತಮ್ಮ ಧ್ವನಿಯನ್ನು ಸಂಸತ್ತಿಗೆ ತಲುಪುತ್ತಿಲ್ಲ ಎಂಬ ಭಾವಿಸಿ ಅಂತಹ ಕ್ರಮಗಳಿಗೆ ಮುಂದಾಗುತ್ತಾರೆ'' ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಆರು ಜನರಲ್ಲಿ ಇಬ್ಬರಿಗೆ ಮಾತ್ರ ಸಿಕ್ಕಿತ್ತು 'ಸಂಸತ್​' ಪಾಸ್​; ಸೋಷಿಯಲ್​ ಮೀಡಿಯಾದಲ್ಲೇ ಸಿದ್ಧವಾಗಿತ್ತು ಪ್ಲಾನ್​!

Last Updated : Dec 16, 2023, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.