ಪುಣೆ (ಮಹಾರಾಷ್ಟ್ರ) : ವಿಐಪಿಗಳ ವಾಹನಗಳಲ್ಲಿನ ಸೈರನ್ಗಳನ್ನು ಶೀಘ್ರವೇ ನಿರ್ಬಂಧಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಸಚಿವರು ಹಾಗೂ ವಿಐಪಿಗಳ ಕಾರುಗಳಲ್ಲಿ ಶಿಷ್ಟಾಚಾರದ ಭಾಗವಾಗಿ ಸೈರನ್ಗಳನ್ನು ಅಳವಡಿಸಲಾಗಿದೆ. ರಸ್ತೆಯಲ್ಲಿ ಸೈರನ್ ಮಾಡುತ್ತ ಬರುವ ವಾಹನಗಳನ್ನು ಕಂಡಕೂಡಲೇ ಪೊಲೀಸರು ಅವು ವಿಐಪಿಗಳ ವಾಹನ ಎಂದು ತಿಳಿದು ಅವರಿಗಾಗಿ (ಟ್ರಾಫಿಕ್ ಕ್ಲಿಯರ್) ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು. ಆದರೆ, ಕೆಲವರು ಈ ಸೈರನ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಸಂಚಾರ ದಟ್ಟಣೆಯಿಂದ ಪಾರಾಗುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ವಿಐಪಿಗಳು ಇಲ್ಲದ ಸಮಯದಲ್ಲೂ ಸೈರನ್ ಬಳಸಿಕೊಂಡಿರುವುದು ಕಂಡು ಬಂದಿದೆ. ಇನ್ನು ಕೆಲವರು ಸರ್ಕಾರದಿಂದ ಅನುಮತಿ ಪಡೆಯದೆಯೇ ತಮ್ಮ ವಾಹನಗಳಲ್ಲಿ ಸೈರನ್ಗಳನ್ನು ಅಳವಡಿಸಿಕೊಂಡಿದ್ದಾರೆ. ಇವೆಲ್ಲದರ ಪರಿಣಾಮ ಸಾಮಾನ್ಯ ಜನರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ಇದರಿಂದಾಗಿ ಶಬ್ದ ಮಾಲಿನ್ಯವೂ ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪುಣೆಯ ಚಾಂದಿನಿ ಚೌಕ್ನ ಪ್ಲೈ ಓವರ್ನ ಉದ್ಘಾಟನೆಯ ನಂತರ ಮಾತನಾಡಿದ ಕೇಂದ್ರ ಸಚಿವರು, ವಾಹನಗಳಲ್ಲಿ ಹಾರ್ನ್ಗಳ ಅಳವಡಿಕೆಯ ಬಗ್ಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದರು. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್ ಭಾಗವಹಿಸಿದ್ದರು.
ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶ: ಮಲ್ಟಿ ಲೆವೆಲ್ ಫ್ಲೈ ಓವರ್ ಯೋಜನೆಯನ್ನು ಭಾನುವಾರದ ದಿನ ಉದ್ಘಾಟಿಸಿ ಮಾತನಾಡಿದ ನಿತಿನ್ ಗಡ್ಕರಿ ಅವರು ಒಟ್ಟು ನಾಲ್ಕು ಫ್ಲೈಒವರ್ಗಳಲ್ಲಿ ಈಗ ಒಂದು ಅಂಡರ್ಪಾಸ್ನಲ್ಲಿ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಉಳಿದಂತೆ ಎರಡು ಹೊಸ ಅಂಡರ್ಪಾಸ್ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ, ಚಾಂದ್ನಿ ಚೌಕ್ನ ಪ್ಲೈಓವರ್ನ ಮುಖ್ಯ ಉದ್ದೇಶವೇ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವುದಾಗಿದೆ. ಈ ನಗರದಲ್ಲಿ ಮುಖ್ಯ ಸಮಸ್ಯೆಯೆಂದರೆ ಸಂಚಾರ ದಟ್ಟಣೆಯಾಗಿದೆ. ಹೀಗಾಗಿ, 865 ಕೋಟಿ ವೆಚ್ಚದಲ್ಲಿ 16.98 ಕಿಲೋ ಮೀಟರ್ ಉದ್ದದ ಬ್ರಿಡ್ಜ್ ನಿರ್ಮಿಸಲಾಗಿದೆ. ಇದರಿಂದ ಸಂಚಾರ ಸುಗಮವಾಗಲಿದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Maharashtra Politics: ಅಜಿತ್ ನನ್ನ ಸೋದರ ಸಂಬಂಧಿ, ಭೇಟಿಯಲ್ಲಿ ತಪ್ಪೇನು?- ಶರದ್ ಪವಾರ್