ETV Bharat / bharat

ವಿಧಾನಸಭಾ ಚುನಾವಣೆ: ಮಿಜೋರಾಂನಲ್ಲಿ ಮತ ಎಣಿಕೆ ಮುಂದೂಡಿಕೆ

author img

By PTI

Published : Dec 1, 2023, 9:39 PM IST

Updated : Dec 1, 2023, 10:34 PM IST

Mizoram assembly polls: ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಡಿಸೆಂಬರ್​ 3ರ ಬದಲು ಡಿ.4ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Etv Bharat
ವಿಧಾನಸಭಾ ಚುನಾವಣೆ: ಮಿಜೋರಾಂನಲ್ಲಿ ಮತ ಎಣಿಕೆ ಮುಂದೂಡಿಕೆ

ನವದೆಹಲಿ: ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಲಾಗಿದೆ. ಈ ಹಿಂದಿನ ವೇಳಾಪಟ್ಟಿ ಪ್ರಕಾರ, ಚುನಾವಣೆಯ ಮತ ಎಣಿಕೆಯು ಡಿಸೆಂಬರ್ 3ರಂದು ನಡೆಯಬೇಕಿತ್ತು. ಶುಕ್ರವಾರ ಚುನಾವಣಾ ಆಯೋಗವು ಚುನಾವಣಾ ಫಲಿತಾಂಶದ ದಿನಾಂಕವನ್ನು ಮರು ನಿಗದಿ ಮಾಡಿ ಆದೇಶಿಸಿದೆ.

40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆದಿದೆ. ರಾಜ್ಯಾದ್ಯಂತ ಶೇ.80.66ರಷ್ಟು ಮತದಾನವಾಗಿದೆ. ಇದೀಗ ಮತ ಎಣಿಕೆ ದಿನವನ್ನು ಬದಲಾಯಿಸುವಂತೆ ರಾಜ್ಯದ ವಿವಿಧೆಡೆಯಿಂದ ಹಲವಾರು ಮನವಿ ಬಂದಿದ್ದರಿಂದ ದಿನಾಂಕವನ್ನು ಪರಿಷ್ಕರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  • Counting of votes for Mizoram Assembly polls deferred by a day to Monday: Election Commission

    — Press Trust of India (@PTI_News) December 1, 2023 " class="align-text-top noRightClick twitterSection" data=" ">

ಮಿಜೋರಾಂನ ಜನರಿಗೆ ಡಿಸೆಂಬರ್ 3ರ ಭಾನುವಾರವು ವಿಶೇಷ ಪ್ರಾಮುಖ್ಯತೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರದ ಬದಲಿಗೆ ಇತರ ಯಾವುದೇ ದಿನಕ್ಕೆ ಎಣಿಕೆಯ ದಿನಾಂಕವನ್ನು ಬದಲಾಯಿಸುವಂತೆ ವಿವಿಧ ಭಾಗಗಳಿಂದ ಆಯೋಗವು ಹಲವಾರು ಮನವಿಗಳನ್ನು ಸ್ವೀಕರಿಸಿದೆ. ಇದನ್ನು ಪರಿಗಣಿಸಿದ ಆಯೋಗವು ಮಿಜೋರಾಂನ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಎಣಿಕೆಯ ದಿನಾಂಕವನ್ನು ಡಿ.3ರ ಭಾನುವಾರದಿಂದ ಡಿ.4ರ ಸೋಮವಾರಕ್ಕೆ ಪರಿಷ್ಕರಿಸಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಇದನ್ನೂ ಓದಿ: ಮಿಜೋರಾಂನಲ್ಲಿ ಮತ ಎಣಿಕೆಯ ದಿನ ಬದಲಿಸಲು ಒತ್ತಡ!

ಮತ ಎಣಿಕೆ ಮುಂದೂಡಿಕೆಗೆ ಮನವಿ ಮಾಡಿದ್ದ ಸರ್ವಪಕ್ಷಗಳು: ಅಕ್ಟೋಬರ್ 9ರಂದು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ತೆಲಂಗಾಣದೊಂದಿಗೆ ಮಿಜೋರಾಂ ವಿಧಾನಸಭೆ ಚುನಾವಣೆಗೆ ಆಯೋಗವು ಏಕಕಾಲಕ್ಕೆ ದಿನಾಂಕ ಘೋಷಣೆ ಮಾಡಿತ್ತು. ಪಂಚ ರಾಜ್ಯಗಳಲ್ಲಿ ಮತದಾನವನ್ನು ಬೇರೆ-ಬೇರೆಗಳ ದಿನಾಂಕದಂದು ನಡೆಸಿದ್ದರೂ, ಡಿ.3ರಂದು ಒಟ್ಟಿಗೆ ಫಲಿತಾಂಶ ಪ್ರಕಟಿಸುವುದಾಗಿ ಹೇಳಿತ್ತು.

ಆದರೆ, ಚುನಾವಣೆಗೆ ಪೂರ್ವದಲ್ಲೇ ಮತ ಎಣಿಕೆ ದಿನವನ್ನು ಬದಲಾವಣೆ ಮಾಡಬೇಕೆಂದು ಎಲ್ಲ ರಾಜಕೀಯ ಪಕ್ಷಗಳು ಮನವಿ ಮಾಡಿದ್ದವು. ಮಿಜೋರಾಂ ರಾಜ್ಯದಲ್ಲಿ 2011ರ ಜನಗಣತಿಯಂತೆ ಶೇ.87ರಷ್ಟು ಕ್ರೈಸ್ತರಿದ್ದಾರೆ. ಭಾನುವಾರ ಕ್ರೈಸ್ತರಿಗೆ ಪವಿತ್ರ ದಿನ. ಹೀಗಾಗಿ ರಾಜ್ಯದ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್,ಕಾಂಗ್ರೆಸ್, ಬಿಜೆಪಿ, ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಸೇರಿ ಸರ್ವ ಪಕ್ಷಗಳು ಸಹ ಮತ ಎಣಿಕೆಯ ದಿನಾಂಕ ಬದಲಾಯಿಸುವಂತೆ ಆಯೋಗಕ್ಕೆ ಒತ್ತಾಯಿಸಿದ್ದವು. ಪ್ರಮುಖ ಚರ್ಚ್​ಗಳ ಆಡಳಿತ ಮಂಡಳಿಗಳು ಕೂಡ ದಿನಾಂಕ ಬದಲಾವಣೆ ಕೋರಿ ಪತ್ರಗಳನ್ನೂ ಬರೆದಿದ್ದವು.

ಡಿ.3ರಂದು ನಾಲ್ಕು ರಾಜ್ಯಗಳ ಫಲಿತಾಂಶ: ಡಿ.3ರಂದು ಮಿಜೋರಾಂ ಹೊರತು ಪಡಿಸಿ ನಾಲ್ಕು ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ. ಛತ್ತೀಸ್‌ಗಢ (90 ಕ್ಷೇತ್ರಗಳು), ಮಧ್ಯಪ್ರದೇಶ (230 ಕ್ಷೇತ್ರಗಳು), ರಾಜಸ್ಥಾನ (200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳು), ತೆಲಂಗಾಣದ 119 ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: Exit Poll Result: ರಾಜಸ್ಥಾನದಲ್ಲಿ ಬಿಜೆಪಿ, ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್‌, ತೆಲಂಗಾಣದಲ್ಲಿ ಬಿಆರ್​ಎಸ್​ಗೆ ಹಿನ್ನಡೆ, ಮಧ್ಯಪ್ರದೇಶದಲ್ಲಿ ನೇರ ಹಣಾಹಣಿ

Last Updated : Dec 1, 2023, 10:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.