ETV Bharat / bharat

ಮಿಜೋರಾಂನಲ್ಲಿ ಮತ ಎಣಿಕೆಯ ದಿನ ಬದಲಿಸಲು ಒತ್ತಡ!

author img

By ETV Bharat Karnataka Team

Published : Oct 12, 2023, 5:58 PM IST

ರಾಜಸ್ಥಾನದಲ್ಲಿ ನವೆಂಬರ್​ 23ರಂದು ಸಾವಿರಾರು ಮದುವೆ ಸಮಾರಂಭಗಳು ನಡೆಯುವ ಕಾರಣಕ್ಕೆ ಕೇಂದ್ರ ಚುನಾವಣಾ ಆಯೋಗವು ಮತದಾನದ ದಿನಾಂಕ ಬದಲಾಯಿಸಿದೆ. ಈಗ ಮಿಜೋರಾಂನಲ್ಲಿ ಕ್ರೈಸ್ತರ ಪ್ರಾರ್ಥನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಿಸೆಂಬರ್​ 3ರಂದು ನಿಗದಿಯಾಗಿರುವ ಮತ ಎಣಿಕೆಯ ದಿನ ಬದಲಿಸಲು ಒತ್ತಡ ಬಂದಿದೆ.

Mizoram Polls:  EC yet to decide on political parties demand to change counting date
ನಿನ್ನೆ ರಾಜಸ್ಥಾನದ ಮತದಾನದ ದಿನಾಂಕ ಬದಲು: ಈಗ ಮಿಜೋರಾಂನಲ್ಲಿ ಮತ ಎಣಿಕೆಯ ದಿನ ಬದಲಿಸಲು ಒತ್ತಡ!

ಐಜ್ವಾಲ್ (ಮಿಜೋರಾಂ): ಮಿಜೋರಾಂ ವಿಧಾನಸಭೆ ಚುನಾವಣೆಗೆ ಈಗಾಗಲೇ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಡಿಸೆಂಬರ್​ 3ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದೆ. ಮತ ಎಣಿಕೆಯ ದಿನ ಭಾನುವಾರ ಆಗಲಿದೆ, ಅದು ಕ್ರೈಸ್ತರ ಪ್ರಾರ್ಥನಾ ದಿನವಾಗಿದೆ. ಹೀಗಾಗಿ ಎಣಿಕೆ ದಿನಾಂಕವನ್ನು ಬದಲಿಸಬೇಕೆಂದು ಆ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಇದೀಗ ಚು.ಆಯೋಗಕ್ಕೆ ಮನವಿ ಮಾಡಿವೆ.!

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ತೆಲಂಗಾಣದೊಂದಿಗೆ ಮಿಜೋರಾಂ ವಿಧಾನಸಭೆ ಚುನಾವಣೆಗೆ ಆಯೋಗವು ಅಕ್ಟೋಬರ್ 9ರಂದು ದಿನಾಂಕ ಪಟ್ಟಿದೆ. ಇದರ ಪ್ರಕಾರ, 40 ಸದಸ್ಯರ ಬಲದ ಮಿಜೋರಾಂನಲ್ಲಿ ನವೆಂಬರ್​ 7ರಂದು ಮತದಾನ ನಡೆಯಲಿದ್ದು, ಡಿಸೆಂಬರ್​ 3ರ ಭಾನುವಾರ ಮತ ಎಣಿಕೆ ನಡೆಯಲಿದೆ. ಆದರೆ, ರಾಜ್ಯದಲ್ಲಿ 2011ರ ಜನಗಣತಿಯಂತೆ ಶೇ.87ರಷ್ಟು ಕ್ರೈಸ್ತರಿದ್ದಾರೆ. ಭಾನುವಾರ ಕ್ರೈಸ್ತರಿಗೆ ಪವಿತ್ರ ದಿನ. ಮತ ಎಣಿಕೆ ದಿನವನ್ನು ಬದಲಾವಣೆ ಮಾಡಬೇಕೆಂಬ ಒಕ್ಕೊರಲ ಅಭಿಪ್ರಾಯ ಸರ್ವಪಕ್ಷಗಳಿಂದ ವ್ಯಕ್ತವಾಗಿದೆ.

ರಾಜ್ಯದ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್, ಕಾಂಗ್ರೆಸ್, ಬಿಜೆಪಿ, ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮತ ಎಣಿಕೆಯ ದಿನಾಂಕ (ಡಿಸೆಂಬರ್ 3) ಬದಲಾಯಿಸುವಂತೆ ಆಯೋಗಕ್ಕೆ ಒತ್ತಾಯಿಸಿವೆ. ಅಷ್ಟೇ ಅಲ್ಲ, ಪ್ರಮುಖ ಚರ್ಚ್​ಗಳ ಆಡಳಿತ ಮಂಡಳಿಗಳು ಕೂಡ ದಿನಾಂಕ ಬದಲಾವಣೆ ಕೋರಿ ಪತ್ರಗಳನ್ನೂ ಬರೆದಿವೆ.

''ಕ್ರಿಶ್ಚಿಯನ್ನರಿಗೆ ಪವಿತ್ರವಾದ ಭಾನುವಾರದ ಇಡೀ ದಿನವನ್ನು ರಾಜ್ಯದಾದ್ಯಂತ ಚರ್ಚ್ ಸೇವೆಗಳಿಗೆ ಮೀಸಲಿಡಲಾಗಿದೆ. ಚುನಾವಣಾ ಆಯೋಗ ಮಿಜೋರಾಂ ಜನರ ಭಾವನೆಗಳನ್ನು ಗೌರವಿಸಬೇಕು. ಮತ ಎಣಿಕೆ ದಿನವನ್ನು ಭಾನುವಾರದ ಬದಲಿಗೆ ಸೋಮವಾರದಿಂದ ಶುಕ್ರವಾರ ನಡುವೆ ಯಾವ ದಿನವಾದರೂ ನಗದಿ ಮಾಡಬೇಕು'' ಎಂದು ತಮ್ಮ ಮನವಿಗಳಲ್ಲಿ ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಒತ್ತಾಯಿಸಿದ್ದಾರೆ. ಈ ಕುರಿತು ಹೆಚ್ಚುವರಿ ಚುನಾವಣಾಧಿಕಾರಿ ಹೆಚ್​​.ಲಿಯಾಂಝೆಲಾ ಪ್ರತಿಕ್ರಿಯಿಸಿ, ''ಮತ ಎಣಿಕೆ ದಿನಾಂಕ ಬದಲಿಸುವ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಮನವಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ. ಆದರೆ, ಸದ್ಯಕ್ಕೆ ಆಯೋಗದಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ'' ಎಂದು ತಿಳಿಸಿದ್ದಾರೆ.

ರಾಜಸ್ಥಾನದ ಮತದಾನದ ದಿನ ಬದಲು: ಕೇಂದ್ರ ಚುನಾವಣಾ ಆಯೋಗವು ಬುಧವಾರ ರಾಜಸ್ಥಾನದಲ್ಲಿ ನವೆಂಬರ್​ 23ಕ್ಕೆ ಮತದಾನದ ದಿನವನ್ನು ನವೆಂಬರ್​ 25ಕ್ಕೆ ಬದಲಾವಣೆ ಮಾಡಲಾಗಿತ್ತು. ನವೆಂಬರ್​ 23ರಂದು ರಾಜ್ಯದಾದ್ಯಂತ ಸಾವಿರಾರು ಮದುವೆ ಸಮಾರಂಭಗಳು ಹಾಗೂ ಮಂಗಳ ಕಾರ್ಯಗಳು ನಡೆಯುವುದರಿಂದ ದಿನಾಂಕ ಬದಲಾಯಿಸುವಂತೆ ಎಲ್ಲ ರಾಜಕೀಯ ಪಕ್ಷಗಳು ಆಯೋಗಕ್ಕೆ ಮನವಿ ಮಾಡಿದ್ದವು. ಈ ಮನವಿಗಳನ್ನು ಆಯೋಗ ಪುರಸ್ಕರಿಸಿ ರಾಜಸ್ಥಾನದಲ್ಲಿ ಮತದಾನವನ್ನು ನವೆಂಬರ್​ 25ಕ್ಕೆ ನಿಗದಿ ಮಾಡಿದೆ. (ಐಎಎನ್​ಎಸ್​)

ಇದನ್ನೂ ಓದಿ: ರಾಜಸ್ಥಾನ ವಿಧಾನಸಭಾ ಚುನಾವಣೆ: ಸಾವಿರಾರು ಮದುವೆಗಳ ಕಾರಣಕ್ಕಾಗಿ ಮತದಾನದ ದಿನಾಂಕವೇ ಬದಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.