ETV Bharat / bharat

ಹಗರಣದಲ್ಲಿ ಶಿಕ್ಷಣ ಸಚಿವರು ಜೈಲು ಪಾಲಾಗಿದ್ದು ಇತಿಹಾಸದಲ್ಲೇ ಮೊದಲು: ಗೌತಮ್​ ಗಂಭೀರ್​ ಟೀಕೆ

author img

By

Published : Feb 28, 2023, 12:54 PM IST

Updated : Feb 28, 2023, 1:41 PM IST

ದೆಹಲಿ ಸರ್ಕಾರದ ಡಿಸಿಎಂ ಮನೀಶ್​ ಸಿಸೋಡಿಯಾ - ದೆಹಲಿ ಅಬಕಾರಿ ನೀತಿ ಹಗರಣ - ಮನೀಶ್​ ಸಿಸೋಡಿಯಾ ಬಂಧಿಸಿದ ಸಿಬಿಐ - ಸಿಬಿಐ ಕಸ್ಟಡಿಗೆ ಸಿಸೋಡಿಯಾ - ಸಿಸೋಡಿಯಾ ಬಂಧನ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ- ಸಿಸೋಡಿಯಾ ವಿರುದ್ಧ ಸಂಸದ ಗೌತಮ್​ ಗಂಭೀರ್​ ಕಿಡಿ

ದೆಹಲಿ ಡಿಸಿಎಂ ಮನೀಶ್​ ಸಿಸೋಡಿಯಾ
ದೆಹಲಿ ಡಿಸಿಎಂ ಮನೀಶ್​ ಸಿಸೋಡಿಯಾ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಶಿಕ್ಷಣ ಸಚಿವರೊಬ್ಬರು ಜೈಲಿಗೆ ಹೋಗಿದ್ದು ದೇಶದ ಇತಿಹಾಸದಲ್ಲಿಯೆ ಇದೇ ಮೊದಲು. ಪ್ರಕರಣವನ್ನು ಆಪ್​ ದೊಡ್ಡದಾಗಿ ಬಿಂಬಿಸುತ್ತಿದೆ. ಖಲಿಸ್ತಾನಿ ನೆರವು ಪಡೆದು ಚುನಾವಣೆಯಲ್ಲಿ ಹಣವನ್ನು ಬಳಸಿಕೊಳ್ಳಲು ಹೊಸ ಅಬಕಾರಿ ನೀತಿ ರೂಪಿಸಲಾಗಿದೆ ಎಂದು ಬಿಜೆಪಿ ಸಂಸದ ಗೌತಮ್ ಗಂಭೀರ್ ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಸಂಸದ, ಆಪ್​ ಸರ್ಕಾರ ರೂಪಿಸಿದ ಹೊಸ ಮದ್ಯದ ನೀತಿಯಲ್ಲಿ ಯಾವುದೇ ಲೋಪಗಳು ಇಲ್ಲದಿದ್ದರೆ, ಅದನ್ನು ಹಿಂಪಡೆಯಬಾರದಿತ್ತು. ಭಾವನಾತ್ಮಕ ಹೇಳಿಕೆಗಳನ್ನು ನೀಡುವ ಸಮಯವಿದಲ್ಲ. ಸಿಸೋಡಿಯಾ ಅವರು ದೆಹಲಿಯಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ತೆರೆದಿದ್ದರೆ ಅದನ್ನು ಜಗತ್ತಿಗೆ ತೋರಿಸಲಿ. ಅದನ್ನು ಬಿಟ್ಟು ಬರೀ ಹೇಳಿಕೆಗಳಿಗೆ ಸೀಮಿತವಾಗಬಾರದು. ಸಿಬಿಐ ಕ್ರಮದ ವಿರುದ್ಧ ಸುಪ್ರೀಂಕೋರ್ಟ್​ಗೆ ಹೋಗಲಿ. ಆದರೆ, ಅವರು ಈಗಾಗಲೇ ತಮ್ಮನ್ನು ಹೊರಗೆಡವಿಕೊಂಡಿದ್ದಾರೆ ಎಂದು ಟೀಕಿಸಿದರು.

ಬಂಧನ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಎಂ ಮನೀಶ್ ಸಿಸೋಡಿಯಾ ಅವರು ಮಂಗಳವಾರ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಭಾರತದ ಸುಪ್ರೀಂಕೋರ್ಟ್‌ಗೆ (ಎಸ್‌ಸಿ) ಅರ್ಜಿ ಸಲ್ಲಿಸಿದ್ದಾರೆ. ಅವರ ಮನವಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಮುಂದೆ ಪ್ರಸ್ತಾಪಿಸಲಾಯಿತು. ಅವರು ಈ ವಿಷಯವನ್ನು ಇಂದು ಮಧ್ಯಾಹ್ನ 3.50ಕ್ಕೆ ವಿಚಾರಣೆ ನಡೆಸುವುದಾಗಿ ಹೇಳಿದರು.

ಸಿಸೋಡಿಯಾ ಪರವಾಗಿ ವಕೀಲ ಎ ಎಂ ಸಿಂಘ್ವಿ ಅರ್ಜಿ ಸಲ್ಲಿಕೆ ಮಾಡಿದ್ದು, ತುರ್ತು ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ಅವರ ಬಳಿ ಮನವಿ ಮಾಡಿದರು. ಈ ವೇಳೆ, ಇದಕ್ಕೆ ಬೇರೆ ಮಾರ್ಗಗಳಿವೆ ಎಂದು ಕೋರ್ಟ್​ ತಿಳಿಸಿದಾಗ, ಇದು ಸೂಕ್ಷ್ಮ ವಿಚಾರವಾಗಿರುವ ಕಾರಣ ಕೋರ್ಟ್​ನಲ್ಲೇ ಇತ್ಯರ್ಥವಾಗಬೇಕು ಎಂದು ವಕೀಲರು ಹೇಳಿದರು. ಉಳಿದ ಪ್ರಕರಣಗಳಿಗೆ ಸಮಸ್ಯೆಯಾಗದಂತೆ ಇಂದು ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಸಿಜೆಐ ತಿಳಿಸಿದರು.

ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ ಬಂಧಿಸಿದ್ದು, ಸೋಮವಾರ ನ್ಯಾಯಾಲಯ 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. ಸಿಸೋಡಿಯಾ ಬಂಧನವನ್ನು ತೀವ್ರವಾಗಿ ಪ್ರತಿಪಾದಿಸಿರುವ ಸಿಬಿಐ, ಮದ್ಯ ನೀತಿ ಹಗರಣದ ಎಫ್‌ಐಆರ್‌ನಲ್ಲಿ ದೆಹಲಿ ಉಪ ಮುಖ್ಯಮಂತ್ರಿ ನಂಬರ್ ಒನ್ ಆರೋಪಿಯಾಗಿದ್ದಾರೆ. ಮದ್ಯ ನೀತಿ ಸಂಚು ಅತ್ಯಂತ ಯೋಜಿತ ಮತ್ತು ರಹಸ್ಯವಾಗಿ ರೂಪಿಸಲಾಗಿದೆ ಎಂದು ಗಂಭೀರ ಆರೋಪ ಹೊರಿಸಿದೆ.

ಸಿಸೋಡಿಯಾ ಅವರು ತಮ್ಮ ಮೊಬೈಲ್​ಗಳನ್ನು ಬದಲಾಯಿಸಿದ್ದಾರೆ. ಮದ್ಯದ ನೀತಿಯಲ್ಲಿನ ಪಾಲಿಸಿ ಮಾರ್ಜಿನ್ ಅನ್ನು ಹೆಚ್ಚಿಸಲಾಗಿದೆ. ಅರ್ಹತಾ ಮಾನದಂಡಗಳನ್ನು ಬದಲಾಯಿಸಲಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಇದೇ ವೇಳೆ, ದೆಹಲಿ ಮದ್ಯ ನೀತಿಯಲ್ಲಿನ ಬದಲಾವಣೆಗಳ ಬಗ್ಗೆ ಉತ್ತರಿಸಲು ಸಿಸೋಡಿಯಾ ನಿರಾಕರಿಸಿದಲ್ಲಿ, ಅದನ್ನೇ ಕಾರಣವಾಗಿಟ್ಟುಕೊಂಡು ಬಂಧಿಸುವುದು ಸರಿಯಲ್ಲ ಎಂಬ ವಕೀಲರ ವಾದವನ್ನು ನ್ಯಾಯಾಲಯ ನಿರಾಕರಿಸಿತ್ತು.

ದೆಹಲಿ ಡಿಸಿಎಂ ಸಿಸೋಡಿಯಾ ಬಂಧನ: ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ರ ಅಡಿ ಕ್ರಿಮಿನಲ್ ಪಿತೂರಿ ಮತ್ತು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮತ್ತು ಪುರಾವೆಗಳನ್ನು ತಿರುಚಿದ್ದಕ್ಕಾಗಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 26 ರಂದು ಸಿಬಿಐ ತನ್ನ ಕಸ್ಟಡಿಗೆ ತೆಗೆದುಕೊಂಡಿತು. ಇದಕ್ಕೂ ಮುನ್ನ ಸಿಬಿಐ 3 ಬಾರಿ ನೋಟಿಸ್ ನೀಡಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದು, 8 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ. ಇದಲ್ಲದೇ ಸಿಸೋಡಿಯಾ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ, ಸಾಕ್ಷ್ಯ ಸಂಗ್ರಹಿಸಲಾಗಿದೆ.

ಏನಿದು ಪ್ರಕರಣ?: ದೆಹಲಿಯ ಆಪ್ ಸರ್ಕಾರ ಹೊಸ ಮದ್ಯ ನೀತಿಯಲ್ಲಿ ಅಕ್ರಮ ಎಸಗಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನೀಡಿದ ದೂರಿನ ಆಧಾರದ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಸೇರಿದಂತೆ ಒಟ್ಟು 15 ಮಂದಿಯನ್ನು ತಪ್ಪಿತಸ್ಥರು ಎಂದು ಹೆಸರಿಸಲಾಗಿದೆ. ಜಾರಿ ನಿರ್ದೇಶನಾಲಯ(ಇಡಿ) ಕೂಡ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, 9 ಮಂದಿಯನ್ನು ಬಂಧಿಸಿದೆ. ಇತ್ತ ಸಿಬಿಐ 4 ಮಂದಿಯನ್ನು ಬಂಧಿಸಿದೆ.

ಓದಿ: 5 ದಿನ ಸಿಬಿಐ ಕಸ್ಟಡಿಗೆ ದೆಹಲಿ ಸಚಿವ ಮನೀಶ್​ ಸಿಸೋಡಿಯಾ; ಆಪ್​ನಿಂದ ತೀವ್ರ ಪ್ರತಿಭಟನೆ

Last Updated : Feb 28, 2023, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.