ETV Bharat / bharat

ದೇಶಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ.. ಹಬ್ಬದ ಮಹತ್ವ, ಆಚರಣೆ ಹೀಗಿದೆ..

author img

By

Published : Jan 14, 2023, 7:48 AM IST

Makara Sankranti celebration  Makara Sankranti celebration specialty  Makara Sankranti celebration specialty in India  Makara Sankranti 2023  ದೇಶಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ  ಸಮೃದ್ಧಿಯ ಸಂಕೇತ ಸಂಕ್ರಾಂತಿ ಹಬ್ಬ  ಸಂಕ್ರಾಂತಿ ಹಬ್ಬವನ್ನು ನಾಡಿನಾದ್ಯಂತ ಆಚರಣೆ  ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲ  ಮಕರ ಸಂಕ್ರಾಂತಿ ಹಬ್ಬವನ್ನು ರಾಜ್ಯದಲ್ಲಿಂದು ಸಡಗರ  ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ದಿನ
ದೇಶಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ

ಸಮೃದ್ಧಿಯ ಸಂಕೇತ ಸಂಕ್ರಾಂತಿ ಹಬ್ಬವನ್ನು ನಾಡಿನಾದ್ಯಂತ ಆಚರಣೆ.. ಈ ಹಬ್ಬದ ವಿಶೇಷತೆ ಹಾಗೂ ಮಹತ್ವದ ಬಗ್ಗೆ ಒಂದಿಷ್ಟು ಮಾಹಿತಿ..

ಹೈದರಾಬಾದ್‌: ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ (Makar Sankranti) ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಸೂರ್ಯ ತನ್ನ ಪಥವನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಬದಲಿಸುವ ದಿನವನ್ನು ದೇಶದಲ್ಲಿ ಮಕರ ಸಂಕ್ರಮಣ ಎಂದು ಆಚರಿಸುತ್ತೇವೆ. ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲಿ ಭೋಗಿ ಹಬ್ಬವನ್ನಾಗಿ ಸಂಭ್ರಮಿಸಲಾಗುತ್ತದೆ.

ರೈತರು ಈ ದಿನದಂದು ಜಾನುವಾರುಗಳಿಗೆ ಮೈತೊಳೆದು, ಸಿಂಗರಿಸಿ ಮೆರವಣಿಗೆ ಮಾಡಿ, ಸಂಜೆ ಊರ ಒಂದು ಬೀದಿಯ ದಾರಿಯಲ್ಲಿ ಕಿಚ್ಚು ಹಾಯಿಸುತ್ತಾರೆ. ಎಳ್ಳಿನ ಹಬ್ಬವೆಂದು ಪ್ರಸಿದ್ಧವಾದ ಈ ದಿನದಂದು, ನಾನಾ ರೂಪಗಳಲ್ಲಿ ಎಳ್ಳನ್ನು ಬಳಸುವುದಲ್ಲದೆ, ಪೀಡಾ ಪರಿಹಾರಾರ್ಥವಾಗಿ ಎಳ್ಳನ್ನು ಹಾಗೂ ಎಳಚಿ ಹಣ್ಣನ್ನು ಸುರಿಯುತ್ತಾರೆ. ಪುರಾಣಗಳ ಪ್ರಕಾರ ಈ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿಯಾಗುವುದರಿಂದ ಆನಂದಕ್ಕಾಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಹಿತ ನುಡಿಯುವ ಉದ್ದೇಶದಿಂದಾಗಿ ಎಳ್ಳು ಬೆಲ್ಲ ಹಂಚುತ್ತಾರೆ. ಆಂಧ್ರದಲ್ಲಿ ಈ ದಿನ ಶ್ರೀರಾಮನ ಪೂಜೆಯನ್ನು ಮಾಡುತ್ತಾರೆ. ತಮಿಳುನಾಡಿನಲ್ಲಿ ಸುತ್ತಲೂ ಕಬ್ಬನ್ನು ಕಟ್ಟಿ ಸಿಂಗರಿಸಿದ ಒಲೆಯಲ್ಲಿ ಬೆಲ್ಲ, ಅಕ್ಕಿ, ತುಪ್ಪದಿಂದ ಪೊಂಗಲ್ ತಯಾರಿಸಿ ಹಬ್ಬವನ್ನು ಸಂಭ್ರಮಿಸುತ್ತಾರೆ.

ಶಾಸ್ತ್ರದೃಷ್ಟಿಯಿಂದ ಈ ಹಬ್ಬದಂದು ಕಪ್ಪು ಎಳ್ಳಿನಿಂದ ಸ್ನಾನ ಮಾಡಿ ಬ್ರಾಹ್ಮಣರಿಗೆ ಎಳ್ಳುದಾನವನ್ನು ಮಾಡುತ್ತಾರೆ. ಈ ದಿನ ಮಾಡಿದ ದಾನದಿಂದ ಸೂರ್ಯನು ಆಜನ್ಮ ಪರ್ಯಂತ ಅನುಗ್ರಹಿಸುತ್ತಾನೆಂಬ ನಂಬಿಕೆ ಇದೆ. ಉತ್ತರ ಭಾರತದಲ್ಲಿಯೂ ಸಂಕ್ರಾಂತಿಯನ್ನು ಆಚರಿಸುವುದುಂಟು.

ಉತ್ತರದಲ್ಲೂ ನಾನಾ ಹೆಸರುಗಳಲ್ಲಿ ಆಚರಣೆ: ಸೂರ್ಯನು ಪಥ ಬದಲಿಸುವ ಹಾಗೂ ದೇಶದ ಹಲವು ಕಡೆಗಳಲ್ಲಿ ಕೊಯ್ಲು ಪ್ರಾರಂಭವಾಗುವ ಸಂದರ್ಭದಲ್ಲಿ ಮಕರ ಸಂಕ್ರಾಂತಿಯನ್ನು ಭೋಗಲಿ ಬಿಹು, ಪೊಂಗಲ್‌, ಉತ್ತರಾಯಣ ಹಾಗೂ ಪೌಷ್‌ ಎಂಬ ಹೆಸರುಗಳಿಂದ ಆಚರಿಸಲಾಗುತ್ತದೆ. ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ(ಸಕ್ಕರೆ) ನೆಲಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ಹೆಣ್ಣು ಮಕ್ಕಳು ತಮ್ಮ ಆಪ್ತರು, ನೆರೆ ಹೊರೆಯವರಿಗೆ ವಿಶೇಷ ಸಿಹಿಯನ್ನು ಹಂಚಿ ಸಂಭ್ರಮಿಸುತ್ತಾರೆ.

ಯಾವಾಗ ಸಂಕ್ರಾಂತಿ ಆಚರಣೆ ಉತ್ತಮ: ದೃಗ್‌ ಪಂಚಾಂಗದ ಪ್ರಕಾರ ಮಕರ ಸಂಕ್ರಾಂತಿ ಆಚರಣೆಯು ಇಂದು ನಡೆಯಲಿದೆ. ಆದರೆ ಕೆಲವು ಸ್ಥಳಗಳಲ್ಲಿ ನಾಳೆಯೂ ಮಾಡುತ್ತಾರೆ. ಪಂಚಾಗದ ಪ್ರಕಾರ ಜ.14ರ ಶನಿವಾರ ರಾತ್ರಿ 8.21ಕ್ಕೆ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸಿರುವುದರಿಂದ ಮಕರ ಸಂಕ್ರಾಂತಿಯ ಪುಣ್ಯಕಾಲವು ಭಾನುವಾರ ಮಧ್ಯಾಹ್ನ 12.30ರವರೆಗೆ ಇರುತ್ತದೆ. ಹೀಗಾಗಿ ನಾಳೆಯೂ ಕೆಲವೆಡೆ ಸಂಕ್ರಾಂತಿ ಆಚರಿಸುತ್ತಾರೆ.

ಮಕರ ಜ್ಯೋತಿ ದರ್ಶನ: ಇನ್ನು, ಹಬ್ಬದ ಪ್ರಯುಕ್ತ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಭಕ್ತರು ಪುಣ್ಯ ಸ್ನಾನವನ್ನು ಮಾಡುತ್ತಾರೆ. ಈ ಸಂಪ್ರದಾಯವನ್ನು ಉತ್ತರ ಭಾರತದಲ್ಲಿ ಹೆಚ್ಚಾಗಿ ಪಾಲಿಸಲಾಗುತ್ತದೆ. ಇದೇ ದಿನದಂದು ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಇಂದು ಸಂಜೆ ಮಕರ ಜ್ಯೋತಿ ದರ್ಶನ ಹಿನ್ನೆಲೆ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಜ್ಯೋತಿ ದರ್ಶನ ಪಡೆಯುವುದು ವಾಡಿಕೆ.

ಮಕರ ಸಂಕ್ರಾಂತಿ ಅರ್ಥ: ಮಕರ ಸಂಕ್ರಾಂತಿ ಎಂದರೆ ಮಕರ ಎಂಬುದು ಒಂದು ರಾಶಿ. ಸಂಕ್ರಾಂತಿ ಅಥವಾ ಸಂಕ್ರಮಣ ಎಂದರೆ ಸೂರ್ಯ ದೇವನ ಚಲನೆ ಎಂಬ ಅರ್ಥವನ್ನು ಕೊಡುತ್ತದೆ. ಸೂರ್ಯ ಧನೂರಾಶಿಯಿಂದ ಮಕರ ರಾಶಿಯತ್ತ ಚಲಿಸುತ್ತಾನೆ. ಸಂಕ್ರಾಂತಿಯನ್ನು ಸರಳವಾಗಿ ಹೇಳುವುದಾದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದೆಂದು ಅರ್ಥ. ಹೀಗಾಗಿ ಸೂರ್ಯನು ತನ್ನ ಚಲನೆಯನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ದಿನವನ್ನು ದೇಶದಲ್ಲಿ ಮಕರ ಸಂಕ್ರಮಣ ಎಂದು ಆಚರಿಸುತ್ತೇವೆ.

ಓದಿ: ಶನಿವಾರದ ಭವಿಷ್ಯ : ಈ ರಾಶಿಯವರಿಗೆ ಹಣಕಾಸಿನ ದೃಷ್ಟಿಯಿಂದ ಲಾಭದಾಯಕ ದಿನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.