ETV Bharat / bharat

ಮಹಾದೇವ್​ ಬೆಟ್ಟಿಂಗ್ ಆ್ಯಪ್​ ಪ್ರಕರಣ: ಮಾಸ್ಟರ್​ ಮೈಂಡ್​​​ ದೀಪಕ್​ ನೇಪಾಳಿ ಸೆರೆ

author img

By ETV Bharat Karnataka Team

Published : Dec 27, 2023, 8:34 PM IST

chhattisgarh-mahadev-app-operator-activities-banned-in-dubai-prime-accused-arrested-in-bhilai
ಮಹಾದೇವ್​ ಬೆಟ್ಟಿಂಗ್ ಆ್ಯಪ್​ ಪ್ರಕರಣ : ಮಾಸ್ಟರ್​ ಮೈಂಡ್​​​ ದೀಪಕ್​ ನೇಪಾಳಿ ಬಂಧನ

ಮಹಾದೇವ್​ ಬೆಟ್ಟಿಂಗ್ ಆ್ಯಪ್​ ಪ್ರಕರಣದ ಮಾಸ್ಟರ್​ ಮೈಂಡ್​​​ ದೀಪಕ್​ ನೇಪಾಳಿ ಎಂಬಾತನನ್ನು ಛತ್ತೀಸ್‌ಗಢದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಭಿಲಾಯಿ(ಛತ್ತೀಸ್​ಗಢ): ಮಹಾದೇವ್​ ಬೆಟ್ಟಿಂಗ್​ ಆ್ಯಪ್​ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಪ್ರಕರಣದ ಮಾಸ್ಟರ್‌ಮೈಂಡ್​ ಎಂದೇ ಬಿಂಬಿತವಾಗಿರುವ ದೀಪಕ್​ ನೇಪಾಳಿಯನ್ನು ಛತ್ತೀಸ್​ಗಡದಲ್ಲಿ ಇಂದು ಬಂಧಿಸಿದ್ದಾರೆ. ಆರೋಪಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಅಪಹರಣ, ದರೋಡೆ, ರಾಷ್ಟ್ರೀಯ ಭದ್ರತಾ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ.

ಬೆಟ್ಟಿಂಗ್​ ಆ್ಯಪ್​ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬರುತ್ತಿದ್ದಂತೆ ದೀಪಕ್​ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ರಾಜ್ಯದ ಸುಪೇಲಾ, ವೈಶಾಲಿನಗರ, ಕಂಟೋನ್ಮೆಂಟ್​ ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪತ್ತೆಗಾಗಿ ಬಲೆ ಬೀಸಿದ್ದರು. ಇದೀಗ ಕ್ರೈಂ ಬ್ರಾಂಚ್​ ಅಧಿಕಾರಿಗಳು ಮತ್ತು ವೈಶಾಲಿ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಭಿಲಾಯಿಯಲ್ಲಿ ಬಂಧಿಸಿದ್ದಾರೆ.

ಛತ್ತೀಸ್​ಗಢ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪೊಲೀಸರು ದೀಪಕ್​ಗಾಗಿ ಸಾಕಷ್ಟು ಶೋಧ ನಡೆಸಿದ್ದರು. ಬಳಿಕ ಜುಲೈ ತಿಂಗಳಲ್ಲಿ ದೀಪಕ್​ ನೇಪಾಳಿ ಸಹೋದರ ನೀರಜ್​ ನೇಪಾಳಿ ಮತ್ತು ಆತನ ನಾಲ್ವರು ಸಹಚರರನ್ನು ಸೆರೆ ಹಿಡಿದಿದ್ದರು.

ಪ್ರಕರಣದಲ್ಲಿ ಮತ್ತೊಂದೆಡೆ, ಮಹಾದೇವ್​ ಬೆಟ್ಟಿಂಗ್​ ಆ್ಯಪ್​ನ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾದ ದುಬೈನಲ್ಲಿ ನೆಲೆಸಿರುವ ಸೌರಭ್​ ಚಂದ್ರಕರ್​ ಅವರ ವ್ಯವಹಾರದ ಮೇಲೆ ಇಡಿ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಇವರಿಗೆ ನೋಟಿಸ್​ ಜಾರಿ ಮಾಡಲಾಗಿದೆ. ಸೌರಭ್​ ಚಂದ್ರಕರ್​ ಮತ್ತು ರವಿ ಉಪ್ಪಲ್​​ ಅವರಿಗೆ ಸೇರಿದ 100 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಸೌರಭ್​ ಚಂದ್ರಕರ್​ ಛತ್ತೀಸ್​ಗಢದ ಭಿಲಾಯಿ ನಿವಾಸಿ. ಚಂದ್ರಕರ್​ ಮತ್ತು ರವಿ ಉಪ್ಪಲ್​ ಒಗ್ಗೂಡಿ ಮಹಾದೇವ್​ ಆನ್​ಲೈನ್​ ಬೆಟ್ಟಿಂಗ್ ಆ್ಯಪ್​ ಪ್ರಾರಂಭಿಸಿದ್ದರು. ಬಳಿಕ ದೇಶಾದ್ಯಂತ ಈ ಬೆಟ್ಟಿಂಗ್​ ಆ್ಯಪ್ ಬಳಕೆ ಹೆಚ್ಚಾದಾಗ ಕಪ್ಪು ಹಣದ ಹರಿವು ತೀವ್ರವಾಗಿದೆ. ಆ್ಯಪ್​ ಬಳಕೆ ಹೆಚ್ಚಿದ ನಂತರ ಈ ಇಬ್ಬರೂ ದುಬೈಗೆ ಹಾರಿದ್ದರು. ಆ ನಂತರ ಅಲ್ಲಿಂದ ತಮ್ಮ ವ್ಯವಹಾರಗಳನ್ನು ನಿಯಂತ್ರಿಸಲು ಆರಂಭಿಸಿದರು. ಕಳೆದ ಡಿಸೆಂಬರ್​ 12ರಂದು ಮಹಾದೇವ್​ ಆ್ಯಪ್​ನ ಸಹಸಂಸ್ಥಾಪಕ ರವಿ ಉಪ್ಪಲ್​ ಅವರನ್ನು ದುಬೈ ​ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿರುದ್ಧ ವೈಶಾಲಿನಗರ ಪೊಲೀಸ್​ ಠಾಣೆಯಲ್ಲಿ 13, ಜಮೂಲ್​ ಮತ್ತು ಭಿಲಾಯಿ ಪೊಲೀಸ್​ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಬೆಟ್ಟಿಂಗ್​ ಆ್ಯಪ್​ ಪ್ರಕರಣ: ಶ್ರದ್ಧಾ ಕಪೂರ್​ಗೆ ಇಡಿ ಸಮನ್ಸ್​, ಇಂದು ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.