ETV Bharat / bharat

ಏರು ಧ್ವನಿಯಲ್ಲಿ ವಾದ ಮಂಡಿಸಿದ ವಕೀಲನಿಗೆ ಸಿಜೆಐ ಖಡಕ್​ ವಾರ್ನಿಂಗ್​

author img

By ETV Bharat Karnataka Team

Published : Jan 3, 2024, 10:49 PM IST

CJI pulls up a lawyer: ಸುಪ್ರೀಂ ಕೋರ್ಟ್​ನಲ್ಲಿ ವಾದ ಮಂಡಿಸುವ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ವಕೀಲರೊಬ್ಬರಿಗೆ ಸಿಜೆಐ ಡಿ ವೈ ಚಂದ್ರಚೂಡ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಜೆಐ ಡಿ ವೈ ಚಂದ್ರಚೂಡ್
CJI D Y Chandrachud

ನವದೆಹಲಿ: ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ವಕೀಲರಿಗೆ ಖಡಕ್​ ಎಚ್ಚರಿಕೆ ನೀಡಿದ ಪ್ರಸಂಗ ನಡೆದಿದೆ. ತಮ್ಮ ನೇತೃತ್ವದ ನ್ಯಾಯ ಪೀಠದ ಮುಂದೆ ವಾದ ಮಂಡಿಸುವಾಗ ಧ್ವನಿ ಎತ್ತದಂತೆ ವಕೀಲರಿಗೆ ವಾರ್ನಿಂಗ್​ ನೀಡಿದ ಸಿಜೆಐ, ''ನಿಮ್ಮ ಧ್ವನಿಯನ್ನು ಕಡಿಮೆ ಮಾಡಿ, ಇಲ್ಲದಿದ್ದರೆ ನಾನು ನಿಮ್ಮನ್ನು ನ್ಯಾಯಾಲಯದಿಂದ ತೆಗೆದುಹಾಕುತ್ತೇನೆ'' ಎಂದು ಹೇಳಿದ್ದಾರೆ.

ನ್ಯಾಯಾಲಯದ ಕಲಾಪಗಳ ಸಮಯದಲ್ಲಿ ಅಪರೂಪಕ್ಕೆ ಎಂಬಂತೆ ತಮ್ಮ ಕೋಪ ಪ್ರದರ್ಶಿಸಿದ ಸಿಜೆಐ ಚಂದ್ರಚೂಡ್, ಶಾಂತ ಮತ್ತು ಸಂಯಮದಿಂದ ವಕೀಲರ ಬೆವರಿಳಿಸಿದರು. ಈ ಪ್ರಕರಣವೊಂದರಲ್ಲಿ ಪರಿಹಾರಕ್ಕಾಗಿ ಒತ್ತಾಯಿಸುತ್ತಿರುವಾಗ ವಕೀಲರೊಬ್ಬರು ಇದ್ದಕ್ಕಿದ್ದಂತೆ ಏರು ಧ್ವನಿಯಲ್ಲಿ ವಾದಿಸಲು ಪ್ರಾರಂಭಿಸಿದರು. ತಮ್ಮ ವಿಷಯದ ಕುರಿತು ದೊಡ್ಡ ಧ್ವನಿಯಲ್ಲಿ ವಾದಿಸುತ್ತ ನ್ಯಾಯಾಲಯವನ್ನು ದಬಾಯಿಸುವ ರೀತಿಗೆ ಯತ್ನಿಸಿದ ವಕೀಲರಿಗೆ ಸಿಜೆಐ ಚಾಟಿ ಬೀಸಿದರು.

ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿತ್ತು. ಆಗ ಏರು ಧ್ವನಿಯಲ್ಲಿ ವಾದಿಸಲು ಪ್ರಾರಂಭಿಸಿದ ವಕೀಲರ ನಡೆಗೆ ಸಿಜೆಐ ಆಕ್ಷೇಪ ವ್ಯಕ್ತಪಡಿಸಿದರು. ಪೀಠದ ಮುಂದೆ ಗೌರವಯುತ ಧ್ವನಿಯಲ್ಲಿ ವಾದಿಸುವಂತೆ ಸೂಚಿಸಿದರು. ಅಲ್ಲದೇ, ''ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದೀರಾ? ಅಥವಾ ವಾದ ಮಾಡುತ್ತಿರುವುದು ಇದೇ ಮೊದಲ ಬಾರಿಯೇ'' ಎಂದು ವಕೀಲರನ್ನು ಪ್ರಶ್ನಿಸಿದರು.

''ಒಂದು ಸೆಕೆಂಡ್, ನಿಮ್ಮ ಧ್ವನಿಯನ್ನು ಕಡಿಮೆ ಮಾಡಿ. ನೀವು ಸುಪ್ರೀಂ ಕೋರ್ಟ್‌ನ ಮೊದಲ ನ್ಯಾಯಾಲಯದ ಮುಂದೆ ವಾದ ಮಾಡುತ್ತಿದ್ದೀರಿ. ನಿಮ್ಮ ಏರು ಧ್ವನಿಯನ್ನು ಕಡಿಮೆ ಮಾಡಿ. ಇಲ್ಲದಿದ್ದರೆ, ನಾನು ನಿಮ್ಮನ್ನು ನ್ಯಾಯಾಲಯದಿಂದ ತೆಗೆದುಹಾಕುತ್ತೇನೆ'' ಎಂದು ಸಿಜೆಐ ಅಸಮಾಧಾನ ವ್ಯಕ್ತಪಡಿಸಿದರು. ಆಗ ವಕೀಲರು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದರ ಬಗ್ಗೆ ತಿಳಿಸಿದರು.

ಮುಂದುವರೆದು ಸಿಜೆಐ, ''ನ್ಯಾಯಮೂರ್ತಿಗಳ ಮುಂದೆ ಕೂಗುವುದು ನಿಮ್ಮ ಸಾಮಾನ್ಯ ಅಭ್ಯಾಸವೇ'' ಎಂದು ವಕೀಲರನ್ನು ತರಾಟೆಗೆ ತೆಗೆದುಕೊಂಡರು. ''ನೀವು ಸಾಮಾನ್ಯವಾಗಿ ಎಲ್ಲಿ ವಿಚಾರಣೆಗೆ ಹಾಜರಾಗುತ್ತೀರಿ?, ನೀವು ಪ್ರತಿ ಬಾರಿ ಅಸಮಾಧಾನ ವ್ಯಕ್ತಪಡಿಸಿದ ಈ ರೀತಿ ಕೂಗುತ್ತೀರಾ?'' ಎಂದು ಕೇಳಿದರು. ಅಲ್ಲದೇ, ''ನೀವು ನಿಮ್ಮ ಧ್ವನಿಯನ್ನು ಎತ್ತುವ ಮೂಲಕ ನಮ್ಮನ್ನು ಸೋಲಿಸಬಹುದು ಎಂದು ನೀವು ಭಾವಿಸಿದರೆ, ಅದು ನಿಮ್ಮ ತಪ್ಪು ಭಾವನೆ. ನನ್ನ 23 ವರ್ಷಗಳಲ್ಲಿ ಇದು ಎಂದೂ ಸಂಭವಿಸಿಲ್ಲ. ಇದು ನನ್ನ ವೃತ್ತಿಜೀವನದ ಕೊನೆಯ ವರ್ಷದಲ್ಲೂ ಆಗುವುದಿಲ್ಲ.'' ಎಂದು ಎಚ್ಚರಿಸಿದರು.

ಆಗ ವಕೀಲರು ತಕ್ಷಣವೇ ನ್ಯಾಯಮೂರ್ತಿಗಳಲ್ಲಿ ಕ್ಷಮೆಯಾಚಿಸಿ, ಬಳಿಕ ತಮ್ಮ ವಾದ ಮುಂದುವರೆಸಿದರು. ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಕೋರ್ಟ್​ ಕೊಠಡಿಯೊಳಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದ ವಕೀಲರೊಬ್ಬರ ಮೇಲೆ ಸಿಜೆಐ ಕೋಪಗೊಂಡಿದ್ದ ಪ್ರಸಂಗ ವರದಿಯಾಗಿತ್ತು.

ಇದನ್ನೂ ಓದಿ: ಅಸಮಾನತೆ ಹೋಗಲಾಡಿಸಲು ಮೀಸಲಾತಿ ವ್ಯವಸ್ಥೆ ಭರವಸೆಯ ಬೆಳಕಾಗಿದೆ:CJI ಡಿ ವೈ ಚಂದ್ರಚೂಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.