ETV Bharat / bharat

ಎಲ್ಲಾ ಜೈಲುಗಳಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೇರಪ್ರಸಾರ : ಯುಪಿ ಕಾರಾಗೃಹ ಸಚಿವ

author img

By ANI

Published : Jan 7, 2024, 5:03 PM IST

ಉತ್ತರಪ್ರದೇಶದ ಎಲ್ಲಾ ಜೈಲುಗಳಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರಪ್ರಸಾರ ನಡೆಸಲಾಗುವುದು ಎಂದು ಕಾರಾಗೃಹ ಸಚಿವ ಧರ್ಮವೀರ್​ ಪ್ರಜಾಪತಿ ತಿಳಿಸಿದ್ದಾರೆ.

live-streaming-of-ram-temple-consecration-ceremony-will-be-done-at-all-jails-in-up-state-prison-minister
ಎಲ್ಲಾ ಜೈಲುಗಳಲ್ಲಿ ರಾಮಮಂದಿರ ಉದ್ಘಾಟನೆ ನೇರಪ್ರಸಾರ : ಯುಪಿ ಕಾರಾಗೃಹ ಸಚಿವ

ಅಯೋಧ್ಯೆ (ಉತ್ತರಪ್ರದೇಶ) : ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ತಲೆ ಎತ್ತಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಇಡೀ ದೇಶವೇ ಈ ಕಾರ್ಯಕ್ರಮ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದೆ. ಕಾರ್ಯಕ್ರಮವನ್ನು ಇಲ್ಲಿನ ಎಲ್ಲಾ ಜೈಲುಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇದರಿಂದ ಕೈದಿಗಳೂ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಜೈಲಿನಲ್ಲಿದ್ದುಕೊಂಡೇ ವೀಕ್ಷಣೆ ಮಾಡಬಹುದು ಎಂದು ಕಾರಾಗೃಹ ಸಚಿವ ಧರ್ಮವೀರ್​ ಪ್ರಜಾಪತಿ ಹೇಳಿದ್ದಾರೆ.

ರಾಜ್ಯಾದ್ಯಂತ ಇರುವ ಜೈಲುಗಳಲ್ಲಿ ಸುಮಾರು 1.05 ಲಕ್ಷ ಕೈದಿಗಳಿದ್ದಾರೆ. ಅವರೂ ಕೂಡ ದೇಶದ ನಾಗರೀಕರು. ಕೈದಿಗಳು ಈ ಪ್ರಮುಖ ಕಾರ್ಯಕ್ರಮದಿಂದ ದೂರ ಉಳಿಯಬಾರದು. ಈ ಸಂಬಂಧ ರಾಜ್ಯದ ಎಲ್ಲಾ ಜೈಲುಗಳಲ್ಲಿಯೂ ರಾಮಮಂದಿರ ಉದ್ಘಾಟನಾ ಸಮಾರಂಭದ ನೇರಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಜೈಲಿನಲ್ಲಿರುವ ಎಲ್ಲಾ ಕೈದಿಗಳು ವೃತ್ತಿಪರ ಅಪರಾಧಿಗಳಲ್ಲ. ಸಮಯ ಮತ್ತು ಸಂದರ್ಭಗಳು ಅವರನ್ನು ಅಪರಾಧಿಗಳನ್ನಾಗಿ ಮಾಡಿರುತ್ತವೆ. ಆದ್ದರಿಂದ ಇಂತಹ ಕೈದಿಗಳು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಈ ಸಂಬಂಧ ಎಲ್ಲಾ ಕಾರಾಗೃಹಗಳಲ್ಲೂ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಇನ್ನೊಂದೆಡೆ, ಭಾರತೀಯ ಜನತಾ ಪಕ್ಷವು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಚಿಂತನೆ ನಡೆಸಿದೆ. ಈ ಸಂಬಂಧ ಬಿಜೆಪಿ ದೇಶಾದ್ಯಂತ ಬೂತ್​ ಮಟ್ಟದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನೇರಪ್ರಸಾರ ಮಾಡಲು ಚಿಂತನೆ ನಡೆಸಿದೆ.

ಜನವರಿ 22ರಂದು ರಾಮಮಂದಿರ ಲೋಕಾರ್ಪಣೆಯ ಐತಿಹಾಸಿಕ ಕ್ಷಣಕ್ಕೆ ದೇಶದ ಜನರು ಸಾಕ್ಷಿಯಾಗಲಿದ್ದು, ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಬೂತ್​ ಮಟ್ಟದಲ್ಲಿ ದೊಡ್ಡ ದೊಡ್ಡ ಪರದೆಗಳನ್ನು ಅಳವಡಿಸಿ ರಾಮ ಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರ ಮಾಡಲಿದ್ದಾರೆ. ಈ ಮೂಲಕ ದೇಶದ ಪ್ರತಿಯೊಬ್ಬ ನಾಗರೀಕರೂ ರಾಮಮಂದಿರ ಲೋಕಾರ್ಪಣೆಯನ್ನು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಜೊತೆಗೆ ಬಿಜೆಪಿ ಕಾರ್ಯಕರ್ತರು ವೈಯಕ್ತಿಕ ನೆಲೆಯಲ್ಲಿ ಸಾಮಾಜಿಕ ಸೇವೆಯನ್ನು ನಡೆಸಲು ಪ್ರೋತ್ಸಾಹಿಸಲಾಗುತ್ತಿದೆ. ಅಗತ್ಯ ಇರುವ ಜನರಿಗೆ ಬೇಕಾದ ವಸ್ತುಗಳನ್ನು, ಆಹಾರ, ಧನಸಹಾಯ ಮಾಡಲು ಪ್ರೇರೇಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿದೆ. ಜನವರಿ 16ರಿಂದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ವಿವಿಧ ವೈದಿಕ ಆಚರಣೆಗಳು ಪ್ರಾರಂಭವಾಗಲಿದ್ದು, ಜನವರಿ 22ಕ್ಕೆ ಅದ್ಧೂರಿಯಾಗಿ ಜರುಗಲಿವೆ.

ಇದನ್ನೂ ಓದಿ : ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತಿರುಪತಿಯಿಂದ ವಿಶೇಷ ಲಡ್ಡು ತಯಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.