ಹೈದರಾಬಾದ್: ತಮ್ಮ ಉದ್ದೇಶಿತ ರಾಷ್ಟ್ರೀಯ ಪಕ್ಷವನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಟಿಆರ್‌ಎಸ್ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ದೇಶಾದ್ಯಂತ ಪ್ರವಾಸ ಮಾಡಲು 12 ಆಸನಗಳ ವಿಮಾನವೊಂದನ್ನು ಖರೀದಿಸಲು ನಿರ್ಧರಿಸಿದ್ದಾರೆ ಎಂದು ಟಿಆರ್‌ಎಸ್ ಪಕ್ಷದ ಮೂಲಗಳು ತಿಳಿಸಿವೆ. ಬರುವ ದಸರಾ ದಿನದಂದು ರಾಷ್ಟ್ರೀಯ ಪಕ್ಷ ಸ್ಥಾಪಿಸುವ ಪ್ರಸ್ತಾವನೆಗೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಉನ್ನತ ನಾಯಕತ್ವವು ಒಪ್ಪಿಗೆ ಸೂಚಿಸುವ ಸಾಧ್ಯತೆಯಿದ್ದು, ಅಂದೇ ಸಣ್ಣ ವಿಮಾನ ಪಡೆಯಲು ಆರ್ಡರ್ ನೀಡುವ ಸಂಭವವಿದೆ.
ಪಕ್ಷದ ಮುಖ್ಯಸ್ಥ ಕೆಸಿಆರ್ ಅವರು ರಾಷ್ಟ್ರೀಯ ಪಕ್ಷ ಘೋಷಣೆ ಮಾಡುವ ನಿರ್ಧಾರದ ಬೆನ್ನಲ್ಲೇ ಗುರುವಾರ ನಡೆದ ಪಕ್ಷದ ಸಭೆಯಲ್ಲಿ ವಿಮಾನ ಖರೀದಿಸುವ ಬಗ್ಗೆ ನಿರ್ಧರಿಸಲಾಗಿದೆ. ದೇಶದಲ್ಲಿ ಪ್ರಬಲ ಪರ್ಯಾಯ ಪ್ರತಿಪಕ್ಷ ರಚಿಸುವ ನಿಟ್ಟಿನಲ್ಲಿ ಕೆಸಿಆರ್ ಈಗಾಗಲೇ ದೇಶಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ರಾಷ್ಟ್ರೀಯ ಪಕ್ಷ ರಚನೆಯಾದ ನಂತರ ದೇಶಾದ್ಯಂತ ಈ ಪ್ರವಾಸಗಳನ್ನು ಮತ್ತಷ್ಟು ತೀವ್ರಗೊಳಿಸಲು ಅವರು ಸಜ್ಜಾಗಿದ್ದಾರೆ.
12 ಆಸನಗಳ ವಿಮಾನವನ್ನು ಖರೀದಿಸಲು ತಮ್ಮ ಪಕ್ಷವು 80 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧವಾಗಿದೆ ಎಂದು ಟಿಆರ್‌ಎಸ್ ಮೂಲಗಳು ತಿಳಿಸಿವೆ. ದಸರಾ ದಿನದಂದು ಹೊಸ ರಾಷ್ಟ್ರೀಯ ಪಕ್ಷದ ಹೆಸರನ್ನು ಕೆಸಿಆರ್ ಅಂತಿಮಗೊಳಿಸಿದ ನಂತರ ವಿಶೇಷ ವಿಮಾನ ಖರೀದಿಗೆ ಆದೇಶವನ್ನು ನೀಡಲಾಗುವುದು. ತನ್ನ ಖಜಾನೆಯಲ್ಲಿ 865 ಕೋಟಿ ರೂಪಾಯಿ ಹೊಂದಿರುವ ಟಿಆರ್‌ಎಸ್, ವಿಮಾನ ಖರೀದಿಗೆ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದೆ.
ದಸರಾ ದಿನದಂದು ನಿಗದಿಯಾಗಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಟಿಆರ್‌ಎಸ್ ನಾಯಕತ್ವವು ತನ್ನ ಎಲ್ಲ ಸಚಿವರು, ಸಂಸದರು, ಶಾಸಕರು ಮತ್ತು ಇತರ ಪ್ರಮುಖ ನಾಯಕರಿಗೆ ಸೂಚಿಸಿದೆ. ರಾಷ್ಟ್ರೀಯ ಪಕ್ಷ ರಚನೆ ವಿಚಾರವಾಗಿ ರಾಜ್ಯ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯಲಿದೆ. ನಿರ್ಧಾರ ಅಂತಿಮಗೊಂಡ ನಂತರ ಕೆಸಿಆರ್ ಅವರು ಅದೇ ದಿನ ಮಧ್ಯಾಹ್ನ ರಾಷ್ಟ್ರೀಯ ಪಕ್ಷವನ್ನು ಘೋಷಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ದೇಶದ ಎಲ್ಲ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ: ನಿತೀಶ್ ಜೊತೆ ವೇದಿಕೆ ಹಂಚಿಕೊಂಡ ಕೆಸಿಆರ್