ETV Bharat / bharat

ಮುಂಬೈನಲ್ಲಿ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆಯ ಏಜೆಂಟ್ ಸೆರೆ;​ ಪುಣೆಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

author img

By

Published : Jul 19, 2023, 10:44 AM IST

ಮುಂಬೈನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಐಎಸ್​ಐ ಏಜೆಂಟ್​ ಸೇರಿ ಇಬ್ಬರನ್ನು ಬಂಧಿಸಿದೆ. ಪುಣೆಯಲ್ಲೂ ಇಬ್ಬರು ಶಂಕಿತ ಉಗ್ರರನ್ನು ಸೆರೆ ಹಿಡಿಯಲಾಗಿದೆ.

isi-agent-another-person-arrested-in-mumbai-by-maha-up-ats
ಮುಂಬೈನಲ್ಲಿ ಐಎಸ್​ಐ ಏಜೆಂಟ್​ ಸೇರಿ ಇಬ್ಬರನ್ನು ಬಂಧಿಸಿದ ಎಟಿಎಸ್​..ಪುಣೆಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

ಮುಂಬೈ : ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್​) ಜಂಟಿ ಕಾರ್ಯಾಚರಣೆ ನಡೆಸಿ ಓರ್ವ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆಯ (ಐಎಸ್​ಐ) ಶಂಕಿತ ಏಜೆಂಟ್​ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಈ ಬಗ್ಗೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಂಕಿತ ಉಗ್ರರ ಬಗ್ಗೆ ದೊರೆತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಜುಹು ಭಯೋತ್ಪಾದನಾ ನಿಗ್ರಹದಳ ಮತ್ತು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಮುಂಬೈನ ಜೋಗೇಶ್ವರ್ ಪ್ರದೇಶದಲ್ಲಿ ಭಾನುವಾರ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅರ್ಮಾನ್​ ಸಯ್ಯದ್​ (62) ಮತ್ತು ಮೊಹಮ್ಮದ್​ ಸಲ್ಮಾನ್​ ಸಿದ್ದಿಕಿ (24) ಎಂಬಿಬ್ಬರನ್ನು ಬಂಧಿಸಲಾಗಿದೆ.

ಅರ್ಮಾನ್​ ಸಯ್ಯದ್​ ಶಂಕಿತ ಐಎಸ್​​ಐ ಏಜೆಂಟ್​ ಆಗಿದ್ದು, ಈತ ಮೊಹಮ್ಮದ್​ ಸಲ್ಮಾನ್​ ಸಿದ್ದಿಕಿಯನ್ನು ಐಎಸ್​ಐಗೆ ನೇಮಕ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಇಬ್ಬರೂ ಮತ್ತೊಬ್ಬ ಶಂಕಿತ ಐಎಸ್​ಐ ಏಜೆಂಟ್​ ಮೊಹಮ್ಮದ್​ ರಾಯೀಸ್​ ಎಂಬಾತನಿಗೆ ಸಹಾಯ ಮಾಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಂಕಿತ ಐಎಸ್​ಐ ಏಜೆಂಟ್​ ರಾಯಿಸ್​​ ಗೋಂಡಾ ನಿವಾಸಿ. ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಗೆ ಸೋರಿಕೆ ಮಾಡಿದ್ದಕ್ಕೆ ಈತನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರದ ದಳದ ಅಧಿಕಾರಿಗಳು ಅರೆಸ್ಟ್‌ ಮಾಡಿದ್ದರು. ಈತ ನೀಡಿದ ಮಾಹಿತಿ ಮೇರೆಗೆ ಮುಂಬೈನ ಜೋಗೇಶ್ವರ್​ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಯ್ಯದ್​ ಮತ್ತು ಸಿದ್ದಿಕಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಉತ್ತರಪ್ರದೇಶ ಎಟಿಎಸ್​ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಪುಣೆಯಲ್ಲಿ ಇಬ್ಬರು ಶಂಕಿತ ಉಗ್ರರು ಸೆರೆ: ಭಯೋತ್ಪಾದನೆ ಸಂಬಂಧಿತ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್​ಐಎ) ಬೇಕಿದ್ದ ಇಬ್ಬರು ಶಂಕಿತ ಉಗ್ರರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಇವರ ಪತ್ತೆಗೆ 5 ಲಕ್ಷ ರೂ ಬಹುಮಾನ ಘೋಷಣೆ ಮಾಡಲಾಗಿತ್ತು. ಬಂಧಿತರನ್ನು ಇಮ್ರಾನ್​ ಖಾನ್​ ಮತ್ತು ಎಂಡಿ ಯೂನಸ್​ ಸಾಕಿ ಎಂದು ಗುರುತಿಸಲಾಗಿದೆ. ಮತ್ತೋರ್ವ ಉಗ್ರ ತಪ್ಪಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪುಣೆ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇವರು ಮಂಗಳವಾರ ಬೆಳಿಗ್ಗೆ ಪುಣೆಯ ಕೊತ್ರುದ್​ ಪ್ರದೇಶದಲ್ಲಿ ಬೈಕ್​ ಕಳ್ಳತನ ಮಾಡುವಾಗ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಓರ್ವ ಪರಾರಿಯಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್​ ಆಯುಕ್ತ ರಿತೇಶ್​​ ಕುಮಾರ್ ಮಾತನಾಡಿ​​, "ಪುಣೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಇವರ ವಿಚಾರಣೆ ವೇಳೆ ಬಂಧಿತರು ಎನ್​ಐಎ ವಾಂಟೆಡ್​ ಪಟ್ಟಿಯಲ್ಲಿರುವುದು ತಿಳಿದುಬಂತು. ಇವರ ಮನೆಯಿಂದ ಒಂದು ಜೀವಂತ ಮದ್ದುಗುಂಡು, 4 ಮೊಬೈಲ್ ಫೋನ್​​ಗಳು, ಒಂದು ಲ್ಯಾಪ್​ಟಾಪ್ ವಶಕ್ಕೆ ಪಡೆಯಲಾಗಿದೆ. ಭಯೋತ್ಪಾದನಾ ಚಟುವಟಿಕೆ ಸಂಬಂಧ ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದರು.

ಇದನ್ನೂ ಓದಿ : ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು: ಐವರು ಶಂಕಿತ ಉಗ್ರರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.