ETV Bharat / bharat

24 ತಾಸಲ್ಲಿ 10 ಸಾವಿರ ಹೊಸ ಕೋವಿಡ್​ ಕೇಸ್​ ಪತ್ತೆ: ಮಹಾರಾಷ್ಟ್ರದಲ್ಲಿ 9 ಸಾವು

author img

By

Published : Apr 13, 2023, 11:42 AM IST

ದೇಶದಲ್ಲಿ ಕೋವಿಡ್​ ಪ್ರಸರಣ ಹೆಚ್ಚುತ್ತಿದೆ. 7 ತಿಂಗಳ ಬಳಿಕ 10 ಸಾವಿರ ಕೇಸ್​ಗಳು ಒಂದೇ ದಿನದಲ್ಲಿ ಪತ್ತೆಯಾಗಿವೆ. ಜನರು ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಹೊಸ ಕೋವಿಡ್​ ಕೇಸ್​ ಪತ್ತೆ
ಹೊಸ ಕೋವಿಡ್​ ಕೇಸ್​ ಪತ್ತೆ

ನವದೆಹಲಿ: ದೇಶದಲ್ಲಿ ಕೋವಿಡ್​ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿವೆ. ಸೋಂಕು ಉಲ್ಬಣಗೊಳ್ಳುತ್ತಿದ್ದು, ನಿನ್ನೆಯಿಂದ 24 ಗಂಟೆ ಅವಧಿಯಲ್ಲಿ 10,158 ಹೊಸ ಪ್ರಕರಣಗಳು ವರದಿಯಾಗಿವೆ. ಒಂದೇ ದಿನದಲ್ಲಿ ಶೇಕಡಾ 30 ರಷ್ಟು ಸೋಂಕು ಪ್ರಕರಣಗಳು ಏರಿಕೆ ಕಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಂಕಿ - ಅಂಶಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 44,998 ರಷ್ಟಿದೆ.

ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,42,10,127 ರಷ್ಟು ದಾಖಲಾಗಿದೆ. ದೈನಂದಿನ ಪಾಸಿಟಿವ್​ ದರ ಶೇ.4.42 ರಷ್ಟಿದ್ದರೆ, ವಾರದ ದರ ಶೇ.4.02 ರಷ್ಟಿದೆ. ಸಕ್ರಿಯ ಪ್ರಕರಣಗಳು 0.10% ನಷ್ಟಿದೆ. ಆದರೂ, ಚೇತರಿಕೆ ಪ್ರಮಾಣವು 98.71 ಪ್ರತಿಶತ, ಸಾವಿನ ಪ್ರಮಾಣ 1.19 ರಷ್ಟಿದೆ. ಮುಂದಿನ 10- 12 ದಿನಗಳವರೆಗೆ ಪ್ರಕರಣಗಳು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ ನಂತರ ಇಳಿಕೆ ಕಾಣಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ದೆಹಲಿಯಲ್ಲಿ ಕೋವಿಡ್​ ದಿಢೀರ್​ ಏರಿಕೆ: ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ಕೊರೊನಾ ವೈರಸ್ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಒಂದೇ ದಿನದಲ್ಲಿ 1,149 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲೀಗ 3,347 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವ್​ ದರ 23.8% ರಷ್ಟಿದೆ. ಇದೇ ವೇಳೆ ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ. ಕಳೆದ 24 ಗಂಟೆಗಳಲ್ಲಿ 677 ಕೋವಿಡ್ ಸೋಂಕಿತರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು ಚೇತರಿಸಿಕೊಂಡವರ ಸಂಖ್ಯೆ 19,87,357 ಕ್ಕೆ ತಲುಪಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್​ ದ್ವಿಗುಣ: 7 ತಿಂಗಳ ಅಂತರದ ನಂತರ ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ ಕೊರೊನಾ ಪ್ರಕರಣಗಳು ಸಾವಿರ ಗಡಿ ದಾಟಿದೆ. 1,115 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, 9 ಸಾವು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 2021ರ ಸೆಪ್ಟೆಂಬರ್​ನಲ್ಲಿ ರಾಜ್ಯದಲ್ಲಿ 1,076 ಪ್ರಕರಣಗಳು ದಾಖಲಾಗಿದ್ದವು. ಇದಾದ ಬಳಿಕ ಇಳಿಕೆ ಕಂಡಿತ್ತು. ಇದಾದ 7 ತಿಂಗಳ ನಂತರ ಈಗ ಕೋವಿಡ್​ ಹೆಚ್ಚಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರರು 81,52,291 ಕ್ಕೆ ತಲುಪಿದೆ. ಮಂಗಳವಾರ ರಾಜ್ಯದಲ್ಲಿ 919 ಹೊಸ ಪ್ರಕರಣಗಳು ಮತ್ತು 1 ಸಾವು ಸಂಭವಿಸಿತ್ತು. ಮುಂಬೈನಲ್ಲಿ 320, 2 ಸಾವು, ಪುಣೆ ನಗರದಲ್ಲಿ 93 ಕೊರೊನಾ ಕೇಸ್​, ಮೂರು ಸಾವುಗಳು ದಾಖಲಾಗಿವೆ.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಭಯ ಬೇಡ. ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರಿಂದ ಸೋಂಕು ತಡೆಯಬಹುದು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹೇಳಿದೆ.

ಹೊಸ ಕೋವಿಡ್ ರೂಪಾಂತರ XBB.1.16 ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರಬಹುದು. ಗರ್ಭಿಣಿಯರು, 60 ವರ್ಷಕ್ಕಿಂತ ಮೇಲ್ಪಟ್ಟವರು, ದೀರ್ಘಕಾಲದ ಕಾಯಿಲೆಗಳು, ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ವೈರಾಲಜಿಸ್ಟ್‌ಗಳು ಸಲಹೆ ನೀಡಿದ್ದಾರೆ.

ಓದಿ: ಜಪಾನ್​, ದಕ್ಷಿಣ ಕೊರಿಯಾ ಕಡೆಗೆ ಕ್ಷಿಪಣಿ ಹಾರಿಬಿಟ್ಟ ಉತ್ತರ ಕೊರಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.