ETV Bharat / bharat

ನಿರ್ಭಯಾ ಪ್ರಕರಣಕ್ಕೆ 11 ವರ್ಷ: ದೇಶದಲ್ಲಿ ಕೊನೆಗಾಣದ ಹೆಣ್ಣಿನ ನೋವಿನ ಕಥೆಗಳು

author img

By ETV Bharat Karnataka Team

Published : Dec 16, 2023, 6:38 PM IST

In memory of Nirbhaya: A tale of grit, pain, and an unyielding quest for justice
ನಿರ್ಭಯಾ ಪ್ರಕರಣಕ್ಕೆ 11 ವರ್ಷ: ದೇಶದಲ್ಲಿ ಕೊನೆಗಾಣದ ಹೆಣ್ಣಿನ ನೋವಿನ ಕಥೆಗಳು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಇಂದಿಗೆ 11 ವರ್ಷ. 2012ರ ಡಿಸೆಂಬರ್ 16ರಂದು ಜರುಗಿದ್ದ ಕ್ರೂರ ಕೃತ್ಯವು ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಹಿನ್ನೆಲೆಯಲ್ಲಿ ನಿರ್ಭಯಾ ಪ್ರಕರಣ ಹಾಗೂ ನಂತರ ನಡೆದ ದುಷ್ಕೃತ್ಯಗಳ ಮಾಹಿತಿ ಇಲ್ಲಿದೆ.

ಹೈದರಾಬಾದ್: ನಿರ್ಭಯಾ ಅತ್ಯಾಚಾರ ಪ್ರಕರಣವು ದೇಶದ ಮಹಿಳೆಯರ ಸುರಕ್ಷತೆ ಮತ್ತು ನ್ಯಾಯದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದ ಪ್ರಮುಖ ಘಟನೆ. 2012ರ ಡಿಸೆಂಬರ್ 16ರಂದು ನಡೆದಿದ್ದ ಈ ಭಯಾನಕ ಕೃತ್ಯವು ರಾಷ್ಟ್ರದ ಆತ್ಮಸಾಕ್ಷಿಯನ್ನೇ ಕಲುಕಿತು. ಲೈಂಗಿಕ ದೌರ್ಜನ್ಯದ ಘಟನೆಗಳಿಗೆ ಸ್ಥಳೀಯ ಪರಿಹಾರ ಮತ್ತು ಅಪರಾಧಿಗಳನ್ನು ತ್ವರಿತ ಶಿಕ್ಷೆಗೆ ಗುರಿ ಪಡಿಸಲು ರಚನಾತ್ಮಕ ಬದಲಾವಣೆಗಳಿಗೆ ಕರೆ ನೀಡಿದ ವ್ಯಾಪಕ ರ‍್ಯಾಲಿಗಳಿಗೂ ಕಾರಣವಾಗಿದ್ದು ಸಹ ನಿರ್ಭಯಾ ಪ್ರಕರಣ.

ಆ ದಿನ ಏನಾಯಿತು?: ದೆಹಲಿಯಲ್ಲಿ 2012ರ ಡಿಸೆಂಬರ್ 16ರಂದು ರಾತ್ರಿ ಚಲಿಸುತ್ತಿದ್ದ ಬಸ್​ನಲ್ಲಿ ನಿರ್ಭಯಾ ಎಂಬ ಯುವತಿ ('ನಿರ್ಭಯಾ' ಎಂಬುವುದು ಗುಪ್ತನಾಮ) ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತು. ಆಕೆ ಮತ್ತು ಆಕೆಯ ಸ್ನೇಹಿತನನ್ನು ಮೋಸದಿಂದ ಬಸ್​ಗೆ​ ಹತ್ತಿಸಲಾಗಿತ್ತು. ಕಾಮುಕರು ಆಕೆ ಮೇಲೆ ಎರಗಿದ್ದರು. ಕಬ್ಬಿಣದ ಸರಳುಗಳಿಂದ ದಾಳಿ ಮಾಡಿದ್ದರು. ಈ ಕ್ರೌರ್ಯದಿಂದಾಗಿ ಆಕೆ ಜೀವನ್ಮರಣ ಹೋರಾಟಕ್ಕೆ ಸಿಲುಕಿದ್ದರು.

ಇದರ ನಂತರ ಏನಾಯಿತು?: ನಿರ್ಭಯಾ ಮೇಲಿನ ನಡೆದ ಕ್ರೂರತೆಯಿಂದ ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗಳು ಹುಟ್ಟಿಕೊಂಡವು. ಎಲ್ಲ ವರ್ಗದ ಜನರು ಬೀದಿಗಿಳಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆಯಲು ಮತ್ತು ನಿರ್ಭಯಾಗೆ ತಕ್ಷಣವೇ ನ್ಯಾಯ ಒದಗಿಸಲು ಕರೆ ನೀಡಲಾಯಿತು. ಈ ಘಟನೆಯು ಲಿಂಗ ಆಧಾರಿತ ಹಿಂಸಾಚಾರದ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ಹುಟ್ಟುಹಾಕಿತ್ತು. ಕಠಿಣ ಕಾನೂನು ಮತ್ತು ಕಟ್ಟುನಿಟ್ಟಾದ ನಿಯಮಗಳ ಮೂಲಕ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ತುರ್ತು ಅವಶ್ಯಕತೆಗೆ ಧ್ವನಿ ನೀಡಿತ್ತು.

ನಿರ್ಭಯಾ ಸಾವು: ಕ್ರೂರ ದಾಳಿಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ನಿರ್ಭಯಾ 2012ರ ಡಿ.29ರಂದು ಕೊನೆಯುಸಿರೆಳೆದರು. ವಿಶೇಷ ಚಿಕಿತ್ಸೆಗಾಗಿ ಸಿಂಗಾಪುರದ ಆಸ್ಪತ್ರೆಗೆ ರವಾನಿಸಿದರೂ, ಬದುಕುಳಿಯಲು ಸಾಧ್ಯವಾಗಲಿಲ್ಲ. ಆಕೆಯ ಹಠಾತ್ ಮತ್ತು ಭೀಕರ ಸಾವು ಸಾರ್ವಜನಿಕ ಭಾವನೆಗಳನ್ನೂ ಇನ್ನಷ್ಟು ಕೆರಳಿಸಿತ್ತು. ದುಷ್ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಗೆ ಇಡೀ ದೇಶವೇ ಒತ್ತಾಯಿಸಿತ್ತು

ಆರೋಪಿಗಳ ವಿವರ: ನಿರ್ಭಯಾ ಅತ್ಯಾಚಾರದ ಆರೋಪಿಗಳ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಹಾಗೂ ಅಪರಾಧದ ಕ್ರೂರತೆಯು ಸಂಪೂರ್ಣ ರಾಷ್ಟ್ರ ಬೆಚ್ಚಿಬೀಳಿಸಿತ್ತು. ಆರು ದಾಳಿಕೋರರ ಗುಂಪಿನಲ್ಲಿ ಒಬ್ಬ ಅಪ್ರಾಪ್ತನಾಗಿದ್ದ. ನಿರ್ಭಯಾ ಮತ್ತು ಆಕೆಯ ಸ್ನೇಹಿತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಲಾಗಿತ್ತು.

ವಿನಯ್ ಶರ್ಮಾ, ಪವನ್ ಗುಪ್ತಾ, ಮುಖೇಶ್ ಮತ್ತು ಚಾಲಕ ರಾಮ್ ಸಿಂಗ್​ನನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಪಾಂಡೆ ಪೊಲೀಸರಿಗೆ ಹೇಳಿಕೆ ನೀಡಿದ ನಂತರ, ವಸಂತ ವಿಹಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ರಾಮ್ ಸಿಂಗ್​ನನ್ನು ವಶಕ್ಕೆ ಪಡೆದಾಗ ಕೃತ್ಯದಲ್ಲಿ ತನ್ನ ಪಾತ್ರ ಒಪ್ಪಿಕೊಂಡಿದ್ದ. ಅಲ್ಲದೇ, ಈತನ ಹೇಳಿಕೆ ಮೇರೆಗೆ ದೆಹಲಿ ಪೊಲೀಸರು ವಿನಯ್ ಶರ್ಮಾ ಮತ್ತು ಪವನ್ ಗುಪ್ತಾನನ್ನು ಬಂಧಿಸಿದ್ದರು. ರಾಜಸ್ಥಾನದ ಕರೋಲಿ ಜಿಲ್ಲೆಯಲ್ಲಿ ಮತ್ತೋರ್ವ ಮುಖೇಶ್​ನನ್ನು ಸೆರೆ ಹಿಡಿಯಲಾಗಿತ್ತು. ಪ್ರಕರಣದ ಐದನೇ ಆರೋಪಿಯಾಗಿದ್ದ ಯುವಕನನ್ನು ದೆಹಲಿಯ ಆನಂದ್ ವಿಹಾರ್ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆರನೇ ಆರೋಪಿ ಅಕ್ಷಯ್ ಕುಮಾರ್ ಸಿಂಗ್​ನನ್ನು ಬಿಹಾರದ ಔರಂಗಾಬಾದ್‌ನಲ್ಲಿ ಪತ್ತೆಹಚ್ಚಲಾಗಿತ್ತು.

ಪ್ರಮುಖ ಘಟನಾವಳಿಗಳು:

ಡಿಸೆಂಬರ್ 25, 2012: ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಿರ್ಭಯಾ ನೀಡಿದ ಹೇಳಿಕೆಯನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಉಷಾ ಚತುರ್ವೇದಿ ದಾಖಲಿಸಿಕೊಂಡಿದ್ದರು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164 ಅನ್ನು ಅನುಸರಿಸಿ, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ತನಿಖಾಧಿಕಾರಿಯ ಕೋರಿಕೆಯ ಮೇರೆಗೆ ಸನ್ನೆಗಳನ್ನು ಬಳಸಿ ನಿರ್ಭಯಾ ಹೇಳಿಕೆಯನ್ನು ದಾಖಲಿಸಿದ್ದರು.

ಡಿಸೆಂಬರ್ 26, 2012: ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ನಿರ್ಭಯಾ ಸ್ಥಿತಿ ಹದಗೆಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ವೈದ್ಯಕೀಯ ತಂಡ ಕಳುಹಿಸಲು ಒಪ್ಪಿಕೊಂಡಿತ್ತು.

ಡಿಸೆಂಬರ್ 27, 2012: ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ನಿರ್ಭಯಾಳನ್ನು ದಾಖಲಿಸಲಾಗಿತ್ತು.

ಡಿಸೆಂಬರ್ 29, 2012: ನಿರ್ಭಯಾ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದರು. ಇದರಿಂದ ಎಫ್‌ಐಆರ್‌ನಲ್ಲಿ ಕೊಲೆ ಪ್ರಕರಣ ಸೇರ್ಪಡೆಗೊಳಿಸಿತ್ತು.

ಮಾರ್ಚ್ 11, 2013: ಆರೋಪಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಮಾರ್ಚ್ 20, 2013: ಮರಣದಂಡನೆ ತಡೆಗಾಗಿ ಮೂವರು ಕೈದಿಗಳ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ನಂತರ ಕೈದಿಗಳು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ವಿಚಾರಣೆಯ ಸಮಯದಲ್ಲಿ ಪವನ್ ಗುಪ್ತಾ ಎರಡನೇ ಕ್ಷಮಾದಾನ ಅರ್ಜಿಯ ನಿರಾಕರಣೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿತ್ತು. ಇದರ ಪರಿಣಾಮಕಾರಿಯಾಗಿ ಪ್ರಕರಣ ಕೊನೆಗೊಂಡಿತ್ತು. ಬೆಳಗ್ಗೆ 5:30ಕ್ಕೆ ತಿಹಾರ್ ಜೈಲಿನಲ್ಲಿ ನಾಲ್ವರು ಕೈದಿಗಳನ್ನು ಗಲ್ಲಿಗೇರಿಸಲಾಗಿತ್ತು.

ನಿರ್ಭಯಾ ಪ್ರಕರಣ ನಂತರದ ಆಘಾತಕಾರಿ ಘಟನೆಗಳು:

ಗುಡಿಯಾ ಗ್ಯಾಂಗ್​ರೇಪ್​ ಪ್ರಕರಣ: 2013ರ ಏಪ್ರಿಲ್‌ನಲ್ಲಿ ದೆಹಲಿಯ ಗಾಂಧಿನಗರದ ಬಾಡಿಗೆ ಮನೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಲಾಗಿತ್ತು. ಈ ಪ್ರಕರಣದಲ್ಲಿ ಮನೋಜ್ ಶಾ ಮತ್ತು ಪ್ರದೀಪ್ ಕುಮಾರ್ ತಪ್ಪಿತಸ್ಥರಾಗಿದ್ದರು. ಈ ಘಟನೆಯು ಗುಡಿಯಾ ಗ್ಯಾಂಗ್​ರೇಪ್​ ಪ್ರಕರಣವೇ ಎಂದು ದೇಶದ ಗಮನ ಸೆಳೆದಿತ್ತು.

ಶಕ್ತಿ ಮಿಲ್ಸ್ ಅತ್ಯಾಚಾರ ಪ್ರಕರಣ: ಮುಂಬೈನ ಶಕ್ತಿ ಮಿಲ್ಸ್‌ನಲ್ಲಿ 22 ವರ್ಷದ ಫೋಟೋ ಜರ್ನಲಿಸ್ಟ್ ಮೇಲೆ ಐವರು ಅತ್ಯಾಚಾರ ಎಸಗಿದ್ದರು. ಅವರಲ್ಲಿ ಒಬ್ಬರು ಬಾಲಾಪರಾಧಿ ಇದ್ದರು. 2014ರ ಏಪ್ರಿಲ್ 4ರಂದು ಮೂವರಿಗೆ ಮರಣದಂಡನೆ, ಉಳಿದ ಇಬ್ಬರು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಜಿಶಾ ಅತ್ಯಾಚಾರ ಪ್ರಕರಣ: 2016ರ ಏಪ್ರಿಲ್ 28ರಂದು ಕೇರಳದ ಎರ್ನಾಕುಲಂನಲ್ಲಿ ಮನೆಯಲ್ಲಿ 29 ವರ್ಷದ ಜಿಶಾ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಭಯಾನಕ ಕೃತ್ಯವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಕಾವು ಪಡೆದಿತ್ತು. 'ಜಸ್ಟೀಸ್ ಫಾರ್ ಜಿಶಾ' ಎಂಬ ಹ್ಯಾಶ್‌ಟ್ಯಾಗ್ ರಾಷ್ಟ್ರವ್ಯಾಪಿ ಟ್ರೆಂಡ್ ಆಗಿತ್ತು.

ಉನ್ನಾವೋ ಅತ್ಯಾಚಾರ ಪ್ರಕರಣ: 2017ರ ಜೂನ್ 4ರಂದು ಉತ್ತರ ಪ್ರದೇಶದ ಉನ್ನಾವೊದಲ್ಲಿ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಬಿಜೆಪಿಯ ಕುಲದೀಪ್ ಸಿಂಗ್ ಸೆಂಗಾರ್ ಈ ಅತ್ಯಾಚಾರ ಪ್ರಕರಣದ ಅಪರಾಧಿ. 2019ರ ಡಿಸೆಂಬರ್ 20ರಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು ಸಂತ್ರಸ್ತೆಯ ತಂದೆಯ ಕೊಲೆಯಲ್ಲೂ ಕುಲದೀಪ್ ಸಿಂಗ್ ತಪ್ಪಿತಸ್ಥರು ಎಂದು ಕಂಡುಬಂದಿದೆ.

ಕಥುವಾ ಅತ್ಯಾಚಾರ ಪ್ರಕರಣ: ಜಮ್ಮು ಮತ್ತು ಕಾಶ್ಮೀರದ ಕಥುವಾ ಅತ್ಯಾಚಾರ ಪ್ರಕರಣವು ಸಹ ಅತ್ಯಂತ ಭಯಾನಕ ಪ್ರಕರಣಗಳಲ್ಲಿ ಒಂದಾಗಿದೆ. ಎಂಟು ವರ್ಷದ ಮುಗ್ಧ ಆತ್ಮವನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು.

ಫ್ರಾಂಕೋ ಮುಳಕ್ಕಲ್ ಅತ್ಯಾಚಾರ ಪ್ರಕರಣ: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ 2018ರಲ್ಲಿ ಫ್ರಾಂಕೋ ಮುಲಕ್ಕಲ್ ಎಂಬ ಪಾದ್ರಿಯು 2014 ಮತ್ತು 2016ರ ನಡುವೆ ತನ್ನ ಮೇಲೆ 13 ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಸನ್ಯಾಸಿನಿಯೊಬ್ಬರು ಆರೋಪಿಸಿದ ಪ್ರಕರಣ ಚರ್ಚೆ ಹುಟ್ಟುಹಾಕಿತ್ತು.

ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಹೈದರಾಬಾದ್​ನಲ್ಲಿ​ 26 ವರ್ಷದ ಪಶುವೈದ್ಯೆ ಮೆಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಂದು ನಂತರ ರಸ್ತೆ ಬದಿ ಬಿಸಾಡಿದ ಘಟನೆಯು ದೇಶವನ್ನೇ ಬೆಚ್ಚಿಬೀಳಿಸಿತ್ತು. ಇಬ್ಬರು ಲಾರಿ ಚಾಲಕರು ಮತ್ತು ಸಹಾಯಕರು ಉದ್ದೇಶಪೂರ್ವಕವಾಗಿ ಆಕೆಯ ಚಲಿಸುತ್ತಿದ್ದ ಸ್ಕೂಟರ್​ ಪಂಕ್ಚರ್ ಮಾಡಿದ್ದರು. ಬಳಿಕ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ರಸ್ತೆಯ ಬದಿಗೆ ಎಳೆದುಕೊಂಡು ಹೋಗಿದ್ದರು. ಪ್ರತಿಯೋಧ ತೋರಿದಾಗ ಆಕೆಯನ್ನು ಹತ್ಯೆ ಮಾಡಲಾಗಿತ್ತು.

ಹತ್ರಾಸ್ ಗ್ಯಾಂಗ್​ ರೇಪ್​ ಕೇಸ್: ಉತ್ತರ ಪ್ರದೇಶದ ಹತ್ರಾಸ್​ನಲ್ಲಿ 19 ವರ್ಷದ ಯುವತಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಿದ ಎರಡು ವಾರಗಳ ನಂತರ ಸಾವನ್ನಪ್ಪಿದ್ದಳು. ಆದರೆ, ಸಂತ್ರಸ್ತೆಯನ್ನು ಯುಪಿ ಪೊಲೀಸ್ ಆಕೆಯ ಕುಟುಂಬದ ಅನುಪಸ್ಥಿತಿಯಲ್ಲೇ ಅಂತ್ಯಸಂಸ್ಕಾರ ಮಾಡಿದ್ದು ದೇಶದಲ್ಲಿ ಚರ್ಚೆ ಹುಟ್ಟುಹಾಕಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.