ಕೇದಾರನಾಥ ಯಾತ್ರೆಯಲ್ಲಿ 175 ಕುದುರೆ, ಕತ್ತೆಗಳ ಸಾವು: ಮಾಲೀಕರಿಗೆ ಕೋಟಿ ಕೋಟಿ ಆದಾಯ!

author img

By

Published : Jun 23, 2022, 7:57 PM IST

ಕೇದಾರನಾಥ ಯಾತ್ರೆಯಲ್ಲಿ 175 ಕುದುರೆ ಕತ್ತೆಗಳ ಸಾವು

ಕೇದಾರನಾಥದಲ್ಲಿ ಕುದುರೆಗಳ ಸಾವಿನ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು, ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಕೂಡ ಯಾತ್ರೆಯಲ್ಲಿ ಕುದುರೆ ಮತ್ತು ಕತ್ತೆಗಳ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆದರೂ ಕೇದಾರನಾಥ ಯಾತ್ರೆಯಲ್ಲಿ ಪ್ರಾಣಿಗಳು ಸಾಯುತ್ತಲೇ ಇವೆ.

ರುದ್ರಪ್ರಯಾಗ (ಉತ್ತರಾಖಂಡ) : ಒಂದೆಡೆ ಕೇದಾರನಾಥ ಯಾತ್ರೆಯಲ್ಲಿ ಬಳಕೆಯಾಗುವ ಕತ್ತೆ ಹಾಗೂ ಕುದುರೆಗಳ ಸಾವು ಹೆಚ್ಚುತ್ತಲೇ ಇದ್ದರೆ, ಮತ್ತೊಂದೆಡೆ ಅವುಗಳ ಮಾಲೀಕರ ಜೇಬು ಮಾತ್ರ ತುಂಬುತ್ತಿದೆ. ಕೇದಾರನಾಥ ಯಾತ್ರೆಯಲ್ಲಿ 46 ದಿನಗಳಲ್ಲಿ ಕತ್ತೆ ಹಾಗೂ ಕುದುರೆ ಮಾಲೀಕರು 56 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ ಎನ್ನಲಾಗ್ತಿದೆ. ಇಷ್ಟೆಲ್ಲಾ ಆದರೂ ಈ ಪ್ರಾಣಿಗಳ ಸಂಕಟವನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಪ್ರವಾಸಿಗರು ತಮ್ಮ ಸರಕುಗಳನ್ನು ಈ ಪ್ರಾಣಿಗಳ ಮೇಲೆ ಅಮಾನವೀಯ ರೀತಿಯಲ್ಲಿ ಸಾಗಿಸುತ್ತಾರೆ. ಈ ಕಾರಣಕ್ಕೆ ಇದುವರೆಗೆ 175 ಪ್ರಾಣಿಗಳು ಸಾವಿಗೀಡಾಗಿವೆ ಎಂದು ತಿಳಿದುಬಂದಿದೆ.

ಈ ವರ್ಷ ಗೌರಿಕುಂಡದಿಂದ ಕೇದಾರನಾಥಕ್ಕೆ 8,516 ಕುದುರೆ ಹಾಗೂ ಕತ್ತೆಗಳ ಸಂಖ್ಯೆಯನ್ನು ನೋಂದಾಯಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಯಾತ್ರಿಕರು ಈ ದುಸ್ತರವಾದ 16 ಕಿ.ಮೀ ದೂರವನ್ನು ಕುದುರೆ ಮತ್ತು ಕತ್ತೆಗಳ ಮೇಲೆ ಕ್ರಮಿಸುತ್ತಾರೆ. ಇಲ್ಲಿಯವರೆಗೆ 2,68,858 ಪ್ರಯಾಣಿಕರು ಕುದುರೆ ಮತ್ತು ಕತ್ತೆಗಳ ಮೂಲಕ ಕೇದಾರನಾಥ ತಲುಪಿ ದೇವರ ದರ್ಶನ ಪಡೆದು ಹಿಂದಿರುಗಿದ್ದಾರೆ. ಈ ವೇಳೆ 56 ಕೋಟಿ ರೂಪಾಯಿ ವ್ಯವಹಾರ ನಡೆದಿದ್ದು, ಜಿಲ್ಲಾ ಪಂಚಾಯಿತಿಗೆ ನೋಂದಣಿ ಶುಲ್ಕವಾಗಿ ಸುಮಾರು 29 ಲಕ್ಷ ರೂ. ಆದಾಯ ಬಂದಿದೆ.

ಇಷ್ಟೆಲ್ಲಾ ಇದ್ದರೂ ಈ ಕಾಡುಪ್ರಾಣಿಗಳಿಗೆ ಯಾವುದೇ ಸೌಲಭ್ಯವಿಲ್ಲ. ಮಾರ್ಗದಲ್ಲಿ ನೀರಿನ ವ್ಯವಸ್ಥೆ ಇಲ್ಲ ಅಥವಾ ಪ್ರಾಣಿಗಳ ನಿಲುಗಡೆಗೆ ತಾಣ ಇಲ್ಲ. ನೋಂದಾಯಿಸಲಾದ ಈ ಪ್ರಾಣಿಗಳನ್ನು ಕೇದಾರನಾಥಕ್ಕೆ ದಿನದಲ್ಲಿ ಒಂದೇ ಬಾರಿ ಮಾತ್ರ ಪ್ರವಾಸಿಗರನ್ನು ಕರೆದುಕೊಂಡು ಹೋಗಬೇಕು. ಆದರೆ, ಹೆಚ್ಚು ಗಳಿಸುವ ಆಸೆಯಲ್ಲಿ ಮಾಲೀಕರು ಎರಡು ಮೂರು ಬಾರಿ ದೇವಾಲಯಕ್ಕೆ ಪ್ರವಾಸಿಗರುನ್ನು ಕರೆತರುತ್ತಿದ್ದಾರೆ. ಅಲ್ಲದೆ ಪ್ರಾಣಿಗಳಿಗೆ ಸಾಕಷ್ಟು ಆಹಾರವನ್ನೂ ನೀಡದೆ ವಿಶ್ರಾಂತಿಯನ್ನೂ ಕೊಡದೆ ದುಡಿಸಿಕೊಳ್ಳುತ್ತಿದ್ದಾರೆ.

ಪ್ರಯಾಣದ ಮೊದಲ ದಿನವೇ ಮೂರು ಪ್ರಾಣಿಗಳು ಸಾವನ್ನಪ್ಪಿದ್ದವು. ಇದಾದ ನಂತರ ಮೊದಲ ಒಂದು ತಿಂಗಳ ಕಾಲ ಪ್ರತಿದಿನ ಪ್ರಾಣಿಗಳ ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇದ್ದವು. ಇದುವರೆಗೆ 175 ಕುದುರೆಗಳು ಮತ್ತು ಕತ್ತೆಗಳು ಸಾವನ್ನಪ್ಪಿವೆ ಎಂದು ಮುಖ್ಯ ಪಶುವೈದ್ಯಾಧಿಕಾರಿ ಡಾ.ಆಶಿಶ್ ರಾವತ್ ಮಾಹಿತಿ ನೀಡಿದ್ದಾರೆ.

ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಕೂಡ ಯಾತ್ರೆಯಲ್ಲಿ ಕುದುರೆ ಮತ್ತು ಕತ್ತೆಗಳ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದಾದ ನಂತರ ರಾಜ್ಯ ಸರ್ಕಾರವು ಕಾರ್ಯಪ್ರವೃತ್ತವಾಗಿದೆ ಮತ್ತು ಪಾದಚಾರಿ ಮಾರ್ಗದಲ್ಲಿ ಕಣ್ಗಾವಲು ಹೆಚ್ಚಿಸಿದೆ. ಇದರೊಂದಿಗೆ ಈ ಹಿಂದೆ ವಿಧಾನಸಭೆ ಕಲಾಪದಲ್ಲಿ ಕುದುರೆ, ಕತ್ತೆಗಳ ಸಾವಿನ ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಇದಲ್ಲದೇ ಈ ವಿಚಾರವಾಗಿ ಹೈಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ನಿರಂತರವಾಗಿ ಪತ್ತೆಯಾಗುತ್ತಿವೆ ಜಿಂಕೆಗಳ ಕಳೇಬರ: ಈವರೆಗೆ 13 ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.