ETV Bharat / bharat

Watch video: ಮಹಾರಾಷ್ಟ್ರ- ಮಧ್ಯಪ್ರದೇಶ ಗಡಿಯಲ್ಲಿ ಭೀಕರ ರಸ್ತೆ ಅಪಘಾತ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ..

author img

By

Published : Jul 4, 2023, 1:36 PM IST

Updated : Jul 4, 2023, 3:51 PM IST

ಮಹಾರಾಷ್ಟ್ರ,- ಮಧ್ಯಪ್ರದೇಶದ ಗಡಿಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರಂತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.

ಭೀಕರ ರಸ್ತೆ ಅಪಘಾತ
ಭೀಕರ ರಸ್ತೆ ಅಪಘಾತ

ಮಹಾರಾಷ್ಟ್ರ- ಮಧ್ಯಪ್ರದೇಶ ಗಡಿಯಲ್ಲಿ ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಧುಲೆ (ಮಹಾರಾಷ್ಟ್ರ): ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್​ ಮತ್ತು ಇತರೆ ವಾಹನಗಳ ಮೇಲೆ ಹರಿದು ಪರಿಣಾಮ ಸಂಭವಿಸಿದ ಸರಣಿ ಭೀಕರ ಅಪಘಾತದಲ್ಲಿ 10 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಗಡಿಭಾಗದ ಪಲಾಸ್ನೇರ್ ಗ್ರಾಮದ ಮುಂಬೈ- ಆಗ್ರಾ ಹೆದ್ದಾರಿಯಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದು, ಅವರನ್ನು ಶಿರಪುರ ಕಾಟೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ವಂಡರ್​ ಸಿಮೆಂಟ್​ ಕಂಪನಿಯ ಜಲ್ಲಿ ಕಲ್ಲು ತುಂಬಿದ್ದ ಕಂಟೈನರ್​ ನಿಯಂತ್ರಣ ಕಳೆದುಕೊಂಡು ಮುಂದಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಇತರ ವಾಹನಗಳ ಮೇಲೂ ಹರಿದಿದೆ. ಅಷ್ಟಕ್ಕೆ ನಿಲ್ಲದ ಅದು ಹೆದ್ದಾರಿ ಬಳಿ ಇದ್ದ ಸಣ್ಣ ಹೋಟೆಲ್​ ಒಳಗೆ ನುಗ್ಗಿದೆ. ಇದರಿಂದ ಸ್ಥಳದಲ್ಲಿ ಭೀಕರತೆ ಉಂಟಾಗಿದೆ. ಮೊದಲು ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸಿದಾಗ ಮತ್ತೆ ಮೂವರು ಸಾವನ್ನಪ್ಪಿದ್ದಾರೆ.

ಒಂದು ಪಥದ ಸಂಚಾರ ಸ್ಥಗಿತ: ಅಪಘಾತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು ಪೊಲೀಸರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಕಂಟೈನರ್​ನಲ್ಲಿದ್ದ ಜಲ್ಲಿ ಕಲ್ಲು ಹೆದ್ದಾರಿ ಮೇಲೆ ಬಿದ್ದಿದ್ದು ಒಂದು ಪಥದ ಸಂಚಾರ ಸ್ಥಗಿತಗೊಂಡಿದೆ. ಬಂದ್ ಆಗಿರುವ ರಸ್ತೆಯನ್ನು ಜನರೇ ಕ್ಲಿಯರ್​ ಮಾಡುದ್ದು, ಸಂಚಾರಕ್ಕೆ ಸಹಕಾರ ಆಗಲು ಸಹಕರಿಸುತ್ತಿದ್ದಾರೆ.

ದುರ್ಘಟನೆಯಲ್ಲಿ ಕಂಟೈನರ್ ಡಿಕ್ಕಿ ಹೊಡೆದ ಎಂಎಚ್ 18ಬಿಆರ್ 5057 ನಂಬರಿನ ಕಾರಿನಲ್ಲಿ ಪತಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಚಾಲಕ ಇದ್ದರು. ಪತಿ, ಮಕ್ಕಳು ಮತ್ತು ಚಾಲಕ ಗಂಭೀರವಾಗಿ ಗಾಯಗೊಂಡಿದ್ದರೆ, ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕಂಟೈನರ್​, ಕಾರು, ಹಲವು ಬೈಕ್​ಗಳು ನುಜ್ಜುಗುಜ್ಜಾಗಿವೆ. ಪೊಲೀಸ್ ಅಧೀಕ್ಷಕ ಸಂಜಯ್ ಬರ್ಕುಂದ್ ಅವರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ: ನಿಯಂತ್ರಣ ತಪ್ಪಿ ಕಂಟೈನರ್​ ಲಾರಿ ಕಾರಿಗೆ ಗುದ್ದಿರುವ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಮುಂದೆ ತಿರುವು ಇರುವ ಕಾರಣ ರಸ್ತೆಗೆ ಹಂಪ್​ ಅಳವಡಿಸಲಾಗಿದೆ. ಈ ಹಂಪ್​ ದಾಟಿಸಲು ಬಹುತೇಕ ವಾಹನಗಳು ನಿಧಾನವಾಗಿ ಮಾರ್ಗದಲ್ಲಿ ಚಲಿಸುತ್ತಿವೆ. ಒಂದು ಕಂಟೈನರ್​ ನಿಧಾನಗತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿರುವುದು ಕಾಣುತ್ತದೆ. ಅದರ ಹಿಂದೆ MH18 BR 5057 ನಂಬರ್​ನ ಹೂಂಡಾಯಿ ಅಮೇಜ್​ ಕಾರು ಅದರ ಹಿಂದೆ ನಿಧಾನವಾಗಿ ಸಾಗುತ್ತಿರುವಾಗ ಒಮ್ಮೆಗೆ ಯಮನಂತೆ ಹಿಂದಿನಿಂದ ಬಂದ ಕಂಟೈನರ್​ ಕಾರಿಗೆ ಅಪ್ಪಳಿಸಿದೆ. ಕಾರು ಕ್ಷಣದಲ್ಲೇ ಮಕ್ಕಳ ಆಟದ ವಸ್ತುವಿಂತೆ ಪುಡಿಯಾಗಿ ರಸ್ತೆ ಪಕ್ಕಕ್ಕೆ ಬಿದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಟೆಂಪೋ- ಕಾರು ಭೀಕರ ರಸ್ತೆ ಅಪಘಾತ: ಪತಿ, ಪತ್ನಿ, ಮಗ ಸೇರಿ 6 ಮಂದಿ ಸಾವು, ಹಲವರಿಗೆ ಗಾಯ

Last Updated : Jul 4, 2023, 3:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.