ETV Bharat / bharat

ಭೀಕರ ಪ್ರವಾಹದಿಂದ ₹8 ಸಾವಿರ ಕೋಟಿ ನಷ್ಟ: ಹಿಮಾಚಲಪ್ರದೇಶ ಸಿಎಂ ಸುಖು

author img

By

Published : Jul 23, 2023, 9:10 AM IST

ಹಿಮಾಚಲಪ್ರದೇಶದಲ್ಲಿ ಭಾರಿ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ರಾಜ್ಯದ ಹಲವು ಪ್ರದೇಶಗಳು ಹಾನಿಗೀಡಾಗಿವೆ. ಅಂದಾಜು 8 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಿಎಂ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.

ಹಿಮಾಚಲಪ್ರದೇಶ ಸಿಎಂ
ಹಿಮಾಚಲಪ್ರದೇಶ ಸಿಎಂ

ಶಿಮ್ಲಾ (ಹಿಮಾಚಲ ಪ್ರದೇಶ) : ಉತ್ತರ ಭಾರತದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಅದರಲ್ಲೂ ಹಿಮಚ್ಛಾದಿತ ರಾಜ್ಯವಾದ ಹಿಮಾಚಲಪ್ರದೇಶ ಈ ಸಲ ಮತ್ತೆ ಪ್ರಕೃತಿಯ ಕಡುಕೋಪಕ್ಕೆ ತುತ್ತಾಗಿದೆ. ಮೇಘಸ್ಫೋಟವಾಗಿ ಭೀಕರ ಪ್ರವಾಹಕ್ಕೆ ರಸ್ತೆ, ವಿದ್ಯುತ್​, ನೀರಿನ ಪೂರೈಕೆ ನಿಂತಿದೆ. ಇದರಿಂದ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯಕ್ಕಾಗಿರುವ ಅಪಾರ ನಷ್ಟ ಸರಿಸುಮಾರು 8 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಮಳೆ ಹಾನಿ ಬಗ್ಗೆ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು, ಕಳೆದ 75 ವರ್ಷಗಳಲ್ಲಿ ರಾಜ್ಯವು ಭೀಕರ ಮಳೆ ಮತ್ತು ಪ್ರವಾಹ ವಿಪತ್ತುಗಳನ್ನು ಎದುರಿಸಿದೆ. ಮಳೆ ಹಾನಿಯಿಂದ ರಾಜ್ಯಕ್ಕೆ ಆಗಿರುವ ನಷ್ಟವು 8,000 ಕೋಟಿ ರೂಪಾಯಿಗಳಿಗೆ ತಲುಪಬಹುದು. ಕೇಂದ್ರ ಸರ್ಕಾರದಿಂದ ತಕ್ಷಣದ ಆರ್ಥಿಕ ಪರಿಹಾರದ ಅಗತ್ಯವಿದೆ ಎಂದು ಹೇಳಿದರು.

ಭೀಕರ ಮಳೆ ಹಾನಿ ಪರಿಶೀಲನೆಗೆ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿದೆ. ಅವರು ಇಲ್ಲಿನ ಹಾನಿ ಬಗ್ಗೆ ಲೆಕ್ಕ ಹಾಕುತ್ತಿದ್ದಾರೆ. ನಮ್ಮ ಪ್ರಕಾರ 8,000 ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿದೆ. ಹಾನಿಯಾದ ಪ್ರದೇಶಗಳಲ್ಲಿ ರಸ್ತೆ, ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಹಳೆಯ ಬಾಕಿ ಕೇಳಿದ್ದೇವೆ: 2022-23 ನೇ ಸಾಲಿನ ವಿಪತ್ತು ನಿಧಿಯಲ್ಲಿ ಬಾಕಿ ಉಳಿಸಿಕೊಂಡಿರುವ 315 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ ಕೇಳಿದ್ದೇವೆ. ಈ ದುರಂತ ಪರಿಸ್ಥಿತಿಯಲ್ಲಿ ಹಿಮಾಚಲಕ್ಕೆ ಕೇಂದ್ರ ಸರ್ಕಾರ ತಕ್ಷಣದ ಪರಿಹಾರ ನೀಡಬೇಕಿದೆ. ರಾಜ್ಯದಲ್ಲಿ ಮಳೆ ಮುಂದುವರಿದಿದ್ದು, ರಕ್ಷಣಾ ತಂಡಗಳನ್ನು ಸನ್ನದ್ಧವಾಗಿಡಲಾಗಿದೆ. ಜನರ ಜೀವ ರಕ್ಷಣೆಯೇ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.

ಸಂಕಷ್ಟದ ವೇಳೆ ರಾಜಕೀಯ ಬೇಡ: ಮಾಜಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ದುರಂತದ ಸಮಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ವಿಪತ್ತು ಪರಿಹಾರ ಧನ ಬಿಡುಗಡೆಯಾಗಿದೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಸಿಎಂ ಸುಖು, ಈ ಹೊತ್ತಲ್ಲಿ ಇಂಯಹ ಹೇಳಿಕೆ ನೀಡುವುದು ಸರಿಯಲ್ಲ. ಜೈ ರಾಮ್ ಠಾಕೂರ್ ಅವರನ್ನು ಟೀಕಿಸಲು ಬಯಸುವುದಿಲ್ಲ. ಅವರು ರಾಜಕೀಯ ಮಾಡುತ್ತಿದ್ದಾರೆ. ಆದರೆ, ಸಂಕಷ್ಟ ಎದುರಿಸುತ್ತಿರುವ ರಾಜ್ಯಕ್ಕೆ ಬರಬೇಕಿರುವ ಮೊದಲ ಕಂತಿನ ವಿಪತ್ತು ಪರಿಹಾರವನ್ನು ಪಡೆಯಲು ಸರ್ವಪಕ್ಷಗಳು ಒಟ್ಟಾಗಿ ಕೈ ಜೋಡಿಸಬೇಕಿದೆ ಎಂದು ವಿನಂತಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.