ETV Bharat / bharat

ರೈತರಿಂದ ಈರುಳ್ಳಿ ಖರೀದಿಗೆ ಮುಂದಾದ ಕೇಂದ್ರ ಸರ್ಕಾರ: ಬೆಲೆ ಕುಸಿತ ತಡೆಗೆ ಕ್ರಮ

author img

By

Published : Mar 8, 2023, 3:18 PM IST

ರೈತರಿಂದ ಈರುಳ್ಳಿ ಖರೀದಿಗೆ ಮುಂದಾದ ಕೇಂದ್ರ ಸರ್ಕಾರ: ಬೆಲೆ ಕುಸಿತ ತಡೆಗೆ ಕ್ರಮ
Govt directs agencies to procure onion from farmers as its prices crash

ರೈತರು ಬೆಳೆದಿರುವ ಕೆಂಪು ಈರುಳ್ಳಿಯನ್ನು ತಕ್ಷಣವೇ ಖರೀದಿಸುವಂತೆ ಕೇಂದ್ರ ಸರ್ಕಾರ ತನ್ನ ಸಂಬಂಧಿತ ಇಲಾಖೆಗಳಿಗೆ ಸೂಚಿಸಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಯ ಬೆಲೆ ಕುಸಿತ ತಡೆಗೆ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ.

ನವದೆಹಲಿ: ರೈತರು ಬೆಳೆದ ಖಾರಿಫ್ ಸೀಸನ್​ನ ಕೆಂಪು ಈರುಳ್ಳಿ ಬೆಳೆಯನ್ನು ಖರೀದಿಸುವಂತೆ ಮತ್ತು ಹಾಗೆ ಖರೀದಿಸಿದ ಮಾಲನ್ನು ಅದರ ಬಳಕೆ ಪ್ರದೇಶಗಳಿಗೆ ಸಾಗಿಸುವ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಸೂಚಿಸಿದೆ. ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕುಸಿತ ತಡೆಗಟ್ಟಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ರೈತರಿಂದ ಈರುಳ್ಳಿ ಖರೀದಿಸಲು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ನ್ಯಾಷನಲ್ ಕನ್ಸ್ಯೂಮರ್ಸ್ ಕೋಆಪರೇಟಿವ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF) ಗೆ ಸರ್ಕಾರ ನಿರ್ದೇಶನ ನೀಡಿದೆ.

ಬೆಲೆ ಕುಸಿತದ ಸಮಸ್ಯೆ ನಿವಾರಣೆಗೆ, ಸರಕು ಕಡಿಮೆಯಾದ ಸಮಯದಲ್ಲಿ ಪೂರೈಸಲು ಈರುಳ್ಳಿ ಸಂಗ್ರಹಣೆ ಮತ್ತು ಬೆಲೆ ಸ್ಥಿರೀಕರಣಕ್ಕಾಗಿ ಸರ್ಕಾರ ಈರುಳ್ಳಿ ಖರೀದಿಗೆ ಮುಂದಾಗಿದೆ. ಕಳೆದ ಹತ್ತು ದಿನಗಳಲ್ಲಿ ನಾಫೆಡ್ ರೈತರಿಂದ 100 ಕೆಜಿಗೆ 900 ರೂ.ಗಿಂತ ಹೆಚ್ಚಿನ ದರದಲ್ಲಿ ಸುಮಾರು 4,000 ಟನ್ ಈರುಳ್ಳಿ ಖರೀದಿಸಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮಂಗಳವಾರ ಸಂಜೆ ಹೇಳಿಕೆಯಲ್ಲಿ ತಿಳಿಸಿದೆ. ಭಾರತದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಾಸಲ್‌ಗಾಂವ್ ಮಂಡಿಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 1 ರಿಂದ 2 ರೂ.ಗಳಷ್ಟು ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿವೆ.

ನಾಫೆಡ್ 40 ಖರೀದಿ ಕೇಂದ್ರಗಳನ್ನು ತೆರೆದಿದೆ. ಈ ಕೇಂದ್ರಗಳಲ್ಲಿ ರೈತರು ತಮ್ಮ ದಾಸ್ತಾನುಗಳನ್ನು ಮಾರಾಟ ಮಾಡಬಹುದು ಮತ್ತು ಆನ್‌ಲೈನ್‌ನಲ್ಲಿ ಹಣ ಪಡೆಯಬಹುದು. ಈ ಕೇಂದ್ರಗಳಿಂದ ಖರೀದಿಸಲಾದ ಈರುಳ್ಳಿಯನ್ನು ದೆಹಲಿ, ಕೋಲ್ಕತ್ತಾ, ಗುವಾಹಟಿ, ಭುವನೇಶ್ವರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿ ನಗರಗಳಿಗೆ ಸಾಗಿಸಲು ನಾಫೆಡ್ ವ್ಯವಸ್ಥೆ ಮಾಡಿದೆ. 2022-23ರಲ್ಲಿ 318 ಲಕ್ಷ ಟನ್‌ ಈರುಳ್ಳಿ ಉತ್ಪಾದನೆಯಾಗಿದ್ದು, ಕಳೆದ ವರ್ಷ ಉತ್ಪಾದನೆಯಾದ 316.98 ಲಕ್ಷ ಟನ್‌ಗಳನ್ನು ಮೀರಿಸಿದೆ.

ಬೇಡಿಕೆ - ಸರಬರಾಜು ಮತ್ತು ರಫ್ತು ಸಾಮರ್ಥ್ಯದಲ್ಲಿನ ಸ್ಥಿರತೆಯಿಂದಾಗಿ ಬೆಲೆಗಳು ಸ್ಥಿರವಾಗಿವೆ. ಆದಾಗ್ಯೂ, ಫೆಬ್ರವರಿ ತಿಂಗಳಲ್ಲಿ ಕೆಂಪು ಈರುಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಉತ್ತಮ ಈರುಳ್ಳಿ ದರವು ಕ್ವಿಂಟಲ್​ಗೆ 500 ರಿಂದ 700 ರೂಪಾಯಿವರೆಗೆ ಇಳಿದಿದೆ. ಇತರ ರಾಜ್ಯಗಳಲ್ಲಿ ಈರುಳ್ಳಿ ಉತ್ಪಾದನೆ ಹೆಚ್ಚಾಗಿರುವುದರಿಂದ ಬೆಲೆ ಕುಸಿತ ಆಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಇತರ ರಾಜ್ಯಗಳಲ್ಲಿಯೂ ಈರುಳ್ಳಿ ಉತ್ಪಾದನೆ ಹೆಚ್ಚಾಗಿರುವುದರಿಂದ ದೇಶದ ಪ್ರಮುಖ ಈರುಳ್ಳಿ ಉತ್ಪಾದಕ ಜಿಲ್ಲೆಯಾಗಿರುವ ನಾಸಿಕ್‌ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ವರದಿಯಾಗಿದೆ.

ದೇಶದ ಎಲ್ಲ ರಾಜ್ಯಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದಾಗ್ಯೂ, ಮಹಾರಾಷ್ಟ್ರವು ಸುಮಾರು ಶೇ 43 ರಷ್ಟು ಈರುಳ್ಳಿ ಬೆಳೆಯ ಪಾಲನ್ನು ಹೊಂದಿದ್ದು, ಪ್ರಮುಖ ಉತ್ಪಾದಕ ರಾಜ್ಯವಾಗಿದೆ. ಮಧ್ಯಪ್ರದೇಶ ಶೇಕಡಾ 16 ಮತ್ತು ಕರ್ನಾಟಕ ಮತ್ತು ಗುಜರಾತ್ ರಾಷ್ಟ್ರೀಯ ಉತ್ಪಾದನೆಯಲ್ಲಿ ಶೇಕಡಾ 9 ರಷ್ಟು ಕೊಡುಗೆ ನೀಡುತ್ತವೆ. ಈರುಳ್ಳಿಯನ್ನು ವರ್ಷಕ್ಕೆ ಮೂರು ಬಾರಿ ಕೊಯ್ಲು ಮಾಡಲಾಗುತ್ತದೆ. ರಾಬಿ ಅವಧಿಯಲ್ಲಿ ಬೆಳೆಯುವ ಈರುಳ್ಳಿ ರಾಷ್ಟ್ರೀಯ ಉತ್ಪಾದನೆಯಲ್ಲಿ ಸುಮಾರು 72 -75 ಪ್ರತಿಶತದಷ್ಟು ಪಾಲು ಹೊಂದಿದೆ ಮತ್ತು ಇದನ್ನು ಮಾರ್ಚ್‌ನಿಂದ ಮೇ ತಿಂಗಳವರೆಗೆ ಕೊಯ್ಲು ಮಾಡಲಾಗುತ್ತದೆ.

ಇದನ್ನೂ ಓದಿ : ಅಕಾಲಿಕ ಮಳೆಗೆ ಕೈಕೊಟ್ಟ ಈರುಳ್ಳಿ; ಚಾಮರಾಜನಗರದಲ್ಲಿ ಬೆಳೆ ನಾಶಪಡಿಸಿದ ರೈತರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.