ETV Bharat / bharat

ಮಹದಾಯಿ ಉಳಿಸಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲು ಗೋವಾ ಬಿಜೆಪಿ ನಿರ್ಧಾರ

author img

By

Published : Jan 3, 2023, 4:33 PM IST

ಕಳಸಾ ಬಂಡೂರಿ ನಾಲಾ ಯೋಜನೆಯ ಡಿಪಿಆರ್​ಗೆ ಕೇಂದ್ರ ಜಲ ಆಯೋಗ ನೀಡಿರುವ ಅನುಮೋದನೆಯು ಏಕಪಕ್ಷೀಯ ನಿರ್ಧಾರವಾಗಿದೆ. ಇದನ್ನು ಹಿಂಪಡೆಯಬೇಕು ಎಂಬ ನಮ್ಮ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕಳುಹಿಸುತ್ತೇವೆ ಎಂದು ವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತನವಾಡೆ ತಿಳಿಸಿದ್ದಾರೆ.

ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತನವಾಡೆ
Goa BJP State President Sadanand Tanawade

ಪಣಜಿ (ಗೋವಾ): ಕಳಸಾ ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಗೆ ನೀಡಿರುವ ಅನುಮೋದನೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರದ ಮೇಲೆ ಗೋವಾ ರಾಜ್ಯ ಬಿಜೆಪಿ ಘಟಕ ಒತ್ತಡ ಹೇರಲು ಮುಂದಾಗಿದೆ. ಈ ಕುರಿತಾದ ಕೇಂದ್ರದ ಮುಂದೆ ತನ್ನ ಬೇಡಿಕೆಯನ್ನು ಒತ್ತಿ ಹೇಳಲು ಬಿಜೆಪಿಯು ಗೋವಾದಲ್ಲಿ ಮಹದಾಯಿ ಉಳಿಸಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲು ಸಹ ನಿರ್ಧರಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತನವಾಡೆ, ಮಹದಾಯಿ ಕುರಿತ ಕರ್ನಾಟಕದ ಡಿಪಿಆರ್‌ಗೆ ನೀಡಿರುವ ಅನುಮೋದನೆಯು ಗೋವಾದ ಐದು ತಾಲೂಕುಗಳು ಮತ್ತು ಐದು ವನ್ಯಜೀವಿ ಅಭಯಾರಣ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಹದಾಯಿಯನ್ನು ಉಳಿಸಲು ನಾವು ಗೋವಾದಾದ್ಯಂತ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದರು.

ಕಳಸಾ ಬಂಡೂರಿ ನಾಲಾ ಯೋಜನೆಯ ಡಿಪಿಆರ್ ಅನುಮೋದನೆ ಬಗ್ಗೆ ಗೋವಾ ರಾಜ್ಯದ ಜನತೆ ತಮ್ಮ ಕೋಪವನ್ನು ಹೊರಹಾಕಲು ಪ್ರಾರಂಭಿಸಿದ್ದಾರೆ. ಇದು ಕೇಂದ್ರ ಜಲ ಆಯೋಗದ ಏಕಪಕ್ಷೀಯ ನಿರ್ಧಾರವಾಗಿದೆ. ಇದರಿಂದ ಗೋವಾಗೆ ಅನ್ಯಾಯವಾಗಿದೆ ಎಂದು ಎಲ್ಲರೂ ಭಾವಿಸುತ್ತಿದ್ದಾರೆ. ಮಹದಾಯಿ ನೀರನ್ನು ತಿರುಗಿಸಿದರೆ ನಮ್ಮ ಐದು ತಾಲೂಕುಗಳಾದ ಸತ್ತಾರಿ, ಬಿಚೋಲಿಮ್, ಬರ್ದೇಜ್, ತಿಸ್ವಾಡಿ ಮತ್ತು ಪೆರ್ನೆಮ್‌ಗೆ ಹಾನಿ ಉಂಟಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ನಡೆ ಪ್ರಶ್ನಿಸಲು ನಿರ್ಧಾರ: ಸೋಮವಾರ ಬಿಜೆಪಿಯ ರಾಜ್ಯ ಪದಾಧಿಕಾರಿಗಳು ಮತ್ತು ಕೋರ್ ಕಮಿಟಿ ಸಭೆ ನಡೆದಿದ್ದು, ವಿವಿಧ ಮಾಧ್ಯಮಗಳ ಮೂಲಕ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ನಿರ್ಧರಿಸಲಾಗಿದೆ ಎಂದೂ ಅವರು ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತನವಾಡೆ ತಿಳಿಸಿದರು.

ಗೋವಾದ ಮೇಲೆ ಈ ನದಿ ತಿರುವು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಾವು ಚರ್ಚಿಸಿದ್ದೇವೆ. ಐದು ವನ್ಯಜೀವಿ ಅಭಯಾರಣ್ಯಗಳು ಸಹ ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ನಾವು ಗೋವಾದ ಗುರುತನ್ನು ರಕ್ಷಿಸಲು ಬಯಸುತ್ತೇವೆ. ಕೇಂದ್ರ ಸರ್ಕಾರವು ಡಿಪಿಆರ್‌ಗೆ ನೀಡಿರುವ ಅನುಮೋದನೆಯನ್ನು ಹಿಂಪಡೆಯಬೇಕು. ನಮ್ಮ ಈ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕಳುಹಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮೋದನೆ

ಸುಪ್ರೀಂಕೋರ್ಟ್​ನಲ್ಲಿ ಈ ವಿಷಯ ಬಾಕಿ ಇದೆ. ಬಾಕಿ ಇರುವ ಪ್ರಕರಣಗಳ ಕುರಿತು ಸುಪ್ರೀಂಕೋರ್ಟ್ ಆದೇಶ ನೀಡುವವರೆಗೆ ನೀರು ಹರಿಸುವ ಕುರಿತು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನಿರ್ಣಯ ಕೈಗೊಂಡಿದ್ದೇವೆ. ಜೊತೆಗೆ ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಬಿಜೆಪಿ ಬೆಂಬಲ ನೀಡುತ್ತದೆ ಎಂದೂ ತಾನವಾಡೆ ಮಾಹಿತಿ ನೀಡಿದರು.

ಕರ್ನಾಟಕಕ್ಕೆ ನೋಟಿಸ್​ ನೀಡುವಂತೆಯೂ ಒತ್ತಡ: ವನ್ಯಜೀವಿ ಅಭಯಾರಣ್ಯಗಳಿಂದ ನೀರನ್ನು ತಿರುಗಿಸಿದ ಆರೋಪದ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕರ್ನಾಟಕಕ್ಕೆ ನೋಟಿಸ್ ಜಾರಿ ಮಾಡುವಂತೆ ಒತ್ತಡ ಹೇರಲು ಸೋಮವಾರ ಗೋವಾ ಸಚಿವ ಸಂಪುಟವು ಪ್ರಧಾನಿ ಮೋದಿ ಮತ್ತು ಸಂಬಂಧಿಸಿದ ಇತರ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಿದೆ ಎಂದು ತನವಾಡೆ ಹೇಳಿದರು.

ಅಲ್ಲದೇ, ಬಿಜೆಪಿ ನೇತೃತ್ವದ ಸ್ಥಳೀಯ ಸಂಸ್ಥೆಗಳಲ್ಲೂ ಡಿಪಿಆರ್ ಅನುಮೋದನೆ ಹಿಂಪಡೆಯಲು ಮನವಿ ಮಾಡುವ ನಿರ್ಣಯವನ್ನು ತೆಗೆದುಕೊಳ್ಳುವಂತೆ ನಾವು ಸೂಚಿಸಿದ್ದೇವೆ. ಸುಪ್ರೀಂಕೋರ್ಟ್ ಈ ವಿಷಯದ ಬಗ್ಗೆ ತೀರ್ಮಾನಿಸುವವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದರು. ಸೋಮವಾರ ನಡೆದ ಸರ್ವಪಕ್ಷಗಳ ಸಭೆಗೆ ಪ್ರತಿಪಕ್ಷಗಳನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆಹ್ವಾನ ನೀಡಿದ್ದರು. ಆದರೂ, ಪ್ರತಿಪಕ್ಷಗಳು ಗೈರಾಗಿವೆ ಎನ್ನುವ ಮೂಲಕಗಳ ಪ್ರತಿಪಕ್ಷಗಳ ನಡೆಯನ್ನೂ ತಾನವಾಡೆ ಟೀಕಿಸಿದರು.

ಇನ್ನು, ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ನರಗುಂದ ಭಾಗಕ್ಕೆ ಕುಡಿಯುವ ನೀರಿಗೆ ತೀರ ಅವಶ್ಯಕವಾದ ಕಳಸಾ ಬಂಡೂರಿ ಯೋಜನೆಯ ಡಿಪಿಆರ್​ಗೆ ಕೇಂದ್ರ ಜಲ ಆಯೋಗವು ಅನುಮೋದನೆ ನೀಡಿದೆ ಎಂದು ಡಿಸೆಂಬರ್​ 29ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಕಟಿಸಿದ್ದಾರೆ. ಇದರ ನಂತರ ಗೋವಾದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದು, ಈ ಡಿಪಿಆರ್​ಗೆ ನೀಡಿರುವ ಅನುಮೋದನೆಯನ್ನು ಹಿಂಪಡೆಯಲು ವಿಫಲವಾದಲ್ಲಿ ರಾಜೀನಾಮೆ ನೀಡಲು ಸಿದ್ಧ ಎಂದು ಗೋವಾವನ್ನು ಪ್ರತಿನಿಧಿಸುವ ಕೇಂದ್ರ ಪ್ರವಾಸೋದ್ಯಮ ಮತ್ತು ಬಂದರು ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಕಳೆದ ಶನಿವಾರ ಹೇಳಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಕಳಸಾ ಬಂಡೂರಿ ಡಿಪಿಆರ್​ಗೆ ಅನುಮೋದನೆ ತಪ್ಪು.. ರಾಜೀನಾಮೆ ಬಗ್ಗೆ ಯೋಚಿಸುತ್ತೇನೆ ಎಂದ ಕೇಂದ್ರ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.