ETV Bharat / bharat

ಕಳಸಾ ಬಂಡೂರಿ ಡಿಪಿಆರ್​ಗೆ ಅನುಮೋದನೆ ತಪ್ಪು.. ರಾಜೀನಾಮೆ ಬಗ್ಗೆ ಯೋಚಿಸುತ್ತೇನೆ ಎಂದ ಕೇಂದ್ರ ಸಚಿವ

author img

By

Published : Dec 31, 2022, 11:04 PM IST

Updated : Jan 1, 2023, 2:47 PM IST

ಕಳಸಾ ಬಂಡೂರಿ ಯೋಜನೆಗೆ ಮತ್ತೆ ಆಕ್ಷೇಪ-ಕೇಂದ್ರ ಸರ್ಕಾರ ಗ್ರೀನ್​ ಸಿಗ್ನಲ್​ ನೀಡಿದ್ದರೂ ಬಿಜೆಪಿ ಸಚಿವರಿಂದಲೇ ವಿರೋಧ-ರಾಜೀನಾಮೆ ಬಗ್ಗೆ ಯೋಚಿಸುವೆ ಎಂದ ಸಚಿವ ಶ್ರೀಪಾದ್ ನಾಯಕ್

Etv Bharat
Etv Bharat

ಪಣಜಿ (ಗೋವಾ): ಕರ್ನಾಟಕದ ಕಳಸಾ ಬಂಡೂರಿ ನಾಲಾ ಯೋಜನೆಯ ಡಿಪಿಆರ್​ಗೆ ಕೇಂದ್ರ ಜಲ ಆಯೋಗ ಅನಮೋದನೆ ನೀಡಿರುವ ಬಗ್ಗೆ ಗೋವಾದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಕೇಂದ್ರ ಸರ್ಕಾರವು ಈ ಡಿಪಿಆರ್​ಗೆ ನೀಡಿರುವ ಅನುಮೋದನೆಯನ್ನು ಹಿಂಪಡೆಯಲು ವಿಫಲವಾದಲ್ಲಿ ರಾಜೀನಾಮೆ ನೀಡಲು ಸಿದ್ಧವೆಂದು ಕೇಂದ್ರ ಪ್ರವಾಸೋದ್ಯಮ ಮತ್ತು ಬಂದರು ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಶನಿವಾರ ಹೇಳಿದ್ದಾರೆ.

ತಮ್ಮ ತವರು ರಾಜ್ಯ ಗೋವಾದ ಪಣಜಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ನಾಯಕ್, ಮಲಪ್ರಭಾ ಜಲಾನಯನ ಪ್ರದೇಶಕ್ಕೆ ನೀರು ಹರಿಸುವ ಕರ್ನಾಟಕದ ಕನಸನ್ನು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ)ವು ನನಸಾಗಿಸಿದೆ. ಆದ್ರೆ ಇದು ದುಃಖಕರ ಸಂಗತಿ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಅಲ್ಲದೇ, ಸುಪ್ರೀಂಕೋರ್ಟ್‌ನಲ್ಲಿ ವಿಷಯ ಬಾಕಿ ಇರುವಾಗ ಕೇಂದ್ರ ಜಲ ಆಯೋಗವು ಕರ್ನಾಟಕಕ್ಕೆ ಅನುಮೋದನೆ ನೀಡುವ ನಿರ್ಧಾರ ತಪ್ಪಾಗಿದೆ. ಇದು ಆಗಬಾರದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಹದಾಯಿ ಗೋವಾದ ಜೀವನಾಡಿಯಾಗಿದೆ. ಜನರೊಂದಿಗೆ, ವನ್ಯಜೀವಿಗಳು, ಸಸ್ಯ ಮತ್ತು ಪ್ರಾಣಿಗಳು ಸಹ ಮಹದಾಯಿಯ ಈ ನೀರನ್ನು ಅವಲಂಬಿಸಿವೆ. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣಗಳಿವೆ. ಆದರೆ, ಅದರ ಹೊರತಾಗಿಯೂ ಸಿಡಬ್ಲ್ಯುಸಿ ಅನುಮೋದನೆ ನೀಡಿರುವುದು ಗೋವಾಕ್ಕೆ ಅನ್ಯಾಯವಾಗಿದೆ. ಈ ನೀರನ್ನು ತಿರುಗಿಸಿದರೆ, ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಉತ್ತರ ಗೋವಾ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಚಿವ ನಾಯಕ್ ಹೇಳಿದರು.

ಕರ್ನಾಟಕಕ್ಕೆ ನೀರು ಹರಿಸಿದರೆ ನಮ್ಮ ರಾಜ್ಯಕ್ಕೆ ಹಾನಿಯಾಗಲಿದೆ. ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ಇದನ್ನು ನಾವು ವಿರೋಧಿಸುತ್ತಿದ್ದೇವೆ, ಗೋವಾ ಸರ್ಕಾರ ಕೂಡ ಇದನ್ನು ವಿರೋಧಿಸಲು ಮುಂದಾಗಬೇಕು. ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅನುಮೋದನೆಯನ್ನು ಹಿಂಪಡೆಯುವಂತೆ ಮನವರಿಕೆ ಮಾಡುತ್ತೇವೆ ಎಂದು ಅವರು ಹೇಳಿದರು.

ಈ ಸಂಬಂಧ ಬೇಕಾದರೆ ನಾವು ಸುಪ್ರೀಂಕೋರ್ಟ್‌ಗೆ ಹೋಗಬಹುದು, ವಿರೋಧ ಪಕ್ಷದ ಶಾಸಕರು ಕೂಡ ಒಟ್ಟಾಗಿ ಬೆಂಬಲಿಸಬೇಕು. ಕೇಂದ್ರ ಸರ್ಕಾರದ ಈ ನಿರ್ಧಾರವು ತುಂಬಾ ತಪ್ಪು. ಇದು ಬಹಳ ಗಂಭೀರವಾದ ವಿಚಾರ. ಕೇಂದ್ರ ಜಲ ಆಯೋಗ ಗೋವಾವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಎಲ್ಲ ಗೋವಾದ ಪ್ರತಿಯೊಬ್ಬರು ಕೂಡ ಬೆಂಬಲಿಸಬೇಕೆಂದು ಸಲಹೆ ನೀಡಿದರು.

ರಾಜೀನಾಮೆ ಬಗ್ಗೆ ಯೋಚಿಸುತ್ತೇನೆ - ನಾಯಕ್: ಕೇಂದ್ರ ಜಲ ಆಯೋಗವು ಮಾಡಿರುವ ತಪ್ಪನ್ನು ತಿದ್ದಿಕೊಳ್ಳಬೇಕು. ಈ ಕುರಿತಾಗಿ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಇದೇ ವೇಳೆ ಕೇಂದ್ರ ಸರ್ಕಾರ ಅನುಮೋದನೆಯನ್ನು ಹಿಂಪಡೆಯಲು ವಿಫಲವಾದರೆ ನೀವು ರಾಜೀನಾಮೆ ನೀಡುತ್ತೀರಾ ಎಂದು ಮಧ್ಯಮದವರ ಪ್ರಶ್ನೆಗೆ ನಾಯಕ್, ರಾಜೀನಾಮೆ ಪರಿಹಾರವಲ್ಲ. ನಮ್ಮ ಸ್ಥಾನ, ಹುದ್ದೆಯನ್ನು ಬಳಸಿಕೊಂಡು ನಾವು ಅದನ್ನು ಹಿಂಪಡೆಯಬಹುದು ಎಂದರು.

ಜೊತೆಗೆ ಜನರ ಹಿತದ ವಿಚಾರದಲ್ಲಿ ರಾಜಕೀಯ ಗೌಣ. ಬೇಕಾದರೆ ರಾಜೀನಾಮೆ ನೀಡುವ ಬಗ್ಗೆಯೂ ನಾನು ಯೋಚಿಸುತ್ತೇನೆ. ಇದಕ್ಕೆ ಯಾವುದೇ ಸಮಸ್ಯೆ ಇಲ್ಲ. ಜನಕಲ್ಯಾಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಕೇಂದ್ರ ಸಚಿವ ನಾಯಕ್​ ತಿಳಿಸಿದರು.

ಕನಸು ನನಸಾಗಲಿದೆ - ಕರ್ನಾಟಕ ಸಿಎಂ: ಕಳಸಾ ಬಂಡೂರಿ ಯೋಜನೆಯು ಉತ್ತರ ಕರ್ನಾಟಕ ಭಾಗದ ಪ್ರತಿಷ್ಠೆಯ ಯೋಜನೆ. ಈ ಯೋಜನೆಗಾಗಿ ಸುಮಾರು ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದೆ. ಅಂತಾರಾಜ್ಯ ವ್ಯಾಜ್ಯವಾದ ಕಾರಣ ಸಾಕಷ್ಟು ಹೋರಾಟ ಮಾಡಬೇಕಾಯಿತು. ಇದೀಗ ಡಿಪಿಆರ್​ಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿದೆ. ಈ ಮೂಲಕ ಬಹಳ ದಿನಗಳ ಕನಸು ನನಸಾಗಲಿದೆ. ಅಂತಾರಾಜ್ಯ ವಿಷಯದಲ್ಲೂ ಈ ಡಿಪಿಆರ್​ ಸರಿ ಇದೆ ಎಂದು ಜಲಶಕ್ತಿ ಆಯೋಗ ತಿಳಿಸಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಯಿ ಹೇಳಿದ್ದರು.

ಇದನ್ನೂ ಓದಿ: ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮೋದನೆ

Last Updated : Jan 1, 2023, 2:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.