ETV Bharat / bharat

ಮೊಬೈಲ್​ಗಾಗಿ ಜಲಾಶಯದ ನೀರನ್ನೇ ಖಾಲಿ ಮಾಡಿಸಿದ ಅಧಿಕಾರಿಗೆ ಅಮಾನತು ಶಿಕ್ಷೆ

author img

By

Published : May 27, 2023, 7:32 AM IST

ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಬಿದ್ದ ಮೊಬೈಲ್​​ಗಾಗಿ ಅಧಿಕಾರಿಯೊಬ್ಬ ಜಲಾಶಯದಲ್ಲಿದ್ದ ಇಡೀ ನೀರನ್ನು ಪಂಪ್​ಸೆಟ್​ನಿಂದ ಹೊರಹಾಕಿಸಿದ್ದಾನೆ. ಆತನನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.

ಅಧಿಕಾರಿಗೆ ಅಮಾನತು ಶಿಕ್ಷೆ
ಅಧಿಕಾರಿಗೆ ಅಮಾನತು ಶಿಕ್ಷೆ

ಕಾಂಕೇರ್ (ಛತ್ತೀಸ್‌ಗಢ): ಅಧಿಕಾರದ ಮದ ಏನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ. ಅಚಾನಕ್ಕಾಗಿ ಜಲಾಶಯದ ನೀರಿನಲ್ಲಿ ಬಿದ್ದ ಮೊಬೈಲ್​ಗಾಗಿ ಅಧಿಕಾರಿಯೊಬ್ಬ ಇಡೀ ಅಣೆಕಟ್ಟಿನ ನೀರನ್ನೇ ಖಾಲಿ ಮಾಡಿಸಿದ್ದಾನೆ. ಕೃಷಿ ಮತ್ತು ಕುಡಿಯುವ ನೀರಿಗೆ ಆಪತ್ತು ತಂದ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆಹಾರ ನಿರೀಕ್ಷಕ ರಾಜೇಶ್​ ವಿಶ್ವಾಸ್​ ನೀರು ಪೋಲು ಮಾಡಿ ಅಮಾನತಾದ ಅಧಿಕಾರಿ. ಭಾನುವಾರ ರಜಾ ದಿನವಾದ ಕಾರಣ ರಾಜೇಶ್​​ ತನ್ನ ಸ್ನೇಹಿತರೊಂದಿಗೆ ಇಲ್ಲಿನ ಕೇರ್​ಕಟ್ಟಾ ಅಣೆಕಟ್ಟೆಗೆ ಭೇಟಿ ನೀಡಿದ್ದರು. ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಅಚಾನಕ್ಕಾಗಿ ತಮ್ಮ ಬಳಿಯಿದ್ದ 1 ಲಕ್ಷ ರೂಪಾಯಿ ಮೌಲ್ಯದ ಸ್ಯಾಮ್​ಸಂಗ್​ ಗ್ಯಾಲಾಕ್ಸಿ ಮೊಬೈಲ್​ ಜಲಾಶಯದ ಒಡ್ಡಿನ ನೀರಿನೊಳಗೆ ಬಿದ್ದಿದೆ.

ಇದನ್ನೂ ಓದಿ: ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸುವವರ ವಿವಾಹ ಸಿಂಧುತ್ವ ಪ್ರಶ್ನಿಸುವಂತಿಲ್ಲ: ಹೈಕೋರ್ಟ್

ಜಲಾಶಯದ ನೀರಿಗೆ ಬಿದ್ದ ಮೊಬೈಲ್​ಗಾಗಿ ಸ್ಥಳೀಯರು ಹುಡುಕಾಡಿದ್ದಾರೆ. ಪ್ರಯತ್ನದ ಹೊರತಾಗಿಯೂ ಮೊಬೈಲ್​ ಸಿಕ್ಕಿರಲಿಲ್ಲ. ಇದರಿಂದ ಅಧಿಕಾರಿ ರಾಜೇಶ್​, ಡೀಸೆಲ್​ ಎಂಜಿನ್​ಗಳನ್ನು ತರಿಸಿ ನೀರನ್ನು ಹೊರಹಾಕಿಸಿದ್ದಾನೆ. ಇದರಿಂದ ಜಲಾಶಯದಲ್ಲಿದ್ದ 41 ಲಕ್ಷ ಲೀಟರ್​ ನೀರು ಪೋಲಾಗಿದೆ. ಇಷ್ಟು ಪ್ರಮಾಣದ ನೀರು ಕೃಷಿಗೆ ಬಳಕೆ ಮಾಡಿದ್ದರೆ, 1500 ಎಕರೆಗೆ ಸಾಕಾಗುತ್ತಿತ್ತು ಎಂದು ಅಂದಾಜಿಸಲಾಗಿದೆ.

ಬೇಜವಾಬ್ದಾರಿ ಅಧಿಕಾರಿ ಅಮಾನತು: 1 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್​ಗಾಗಿ ಕೃಷಿ ಬಳಕೆಗೆ ಬೇಕಾಗಿದ್ದ ಜಲಾಶಯದ ನೀರನ್ನು ಪಂಪ್​ಸೆಟ್​ನಿಂದ ಹೊರಹಾಕಿಸಿದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಇಷ್ಟು ಪ್ರಮಾಣದ ನೀರನ್ನು ಹೊರಹಾಕಿದ ಬಳಿಕ ಮೊಬೈಲ್​ ಸಿಕ್ಕರೂ ಅದು ಕೆಟ್ಟು ಹೋಗಿದೆ. ನೀರು ಮೊಬೈಲ್​ ಒಳಹೋಗಿದ್ದರಿಂದ ಅದು ಹಾಳಾಗಿದೆ.

ಇದರಲ್ಲಿ ನನ್ನ ತಪ್ಪಿಲ್ಲ: ಅಮೂಲ್ಯವಾದ ನೀರನ್ನು ಮೊಬೈಲ್​ಗಾಗಿ ಹೊರಹಾಕಿ ಪೋಲು ಮಾಡಿರುವ ಅಧಿಕಾರಿ ರಾಜೇಶ್​ ತನ್ನದು ತಪ್ಪಿಲ್ಲ ಎಂದು ಸಮಜಾಯಿಷಿ ನೀಡಿದ್ದಾನೆ. ಮೊಬೈಲ್​ನಲ್ಲಿ ಕಚೇರಿಗೆ ಸಂಬಂಧಿಸಿದ ಮುಖ್ಯ ದಾಖಲೆಗಳು ಇದ್ದ ಕಾರಣ, ಅದನ್ನು ನೀರಿನಿಂದ ತೆಗೆಯಬೇಕಾಗಿತ್ತು. ಹೀಗಾಗಿ ನೀರನ್ನು ಹೊರಹಾಕಲಾಯಿತು. ಮೇಲಾಧಿಕಾರಿಗಳ ಅನುಮತಿ ಪಡೆದು ಜಲಾಶಯದ ನೀರು ಹೊರಹಾಕಲಾಗಿದೆ. ಅಷ್ಟಕ್ಕೂ ಈ ನೀರು ಕೃಷಿ ಮತ್ತು ಕುಡಿಯಲು ಬಳಕೆಗೆ ಯೋಗ್ಯ ಆಗಿರಲಿಲ್ಲ ಎಂದು ಉತ್ತರ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಅನೂಪ್ ನಾಗ್, ಜಲಾಶಯದಲ್ಲಿ ಬಿದ್ದ ಮೊಬೈಲ್​ಗಾಗಿ ಅಧಿಕಾರಿ ನೀರನ್ನೇ ಖಾಲಿ ಮಾಡಿಸಿದ್ದು ಅಕ್ಷಮ್ಯ ಅಪರಾಧ. ಈ ಅಣೆಕಟ್ಟು ಬಹಳಷ್ಟು ರೈತರ ಜೀವನಾಡಿಯಾಗಿದೆ. ಫೋನ್ ಮತ್ತು ಅದರ ಡೇಟಾ ಮುಖ್ಯವಾಗಿದ್ದರೂ, ಸಾರ್ವಜನಿಕರ ಜೀವನದ ಜೊತೆಗೆ ಆಟವಾಡುವುದು ತರವಲ್ಲ. ಈ ವಿಷಯದ ಕುರಿತು ತನಿಖೆ ನಡೆಸಿ, ಅಧಿಕಾರಿ ವಿರುದ್ಧ ಸೂಕ್ತ ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗ ಖಾತ್ರಿ ಯೋಜನೆಯಡಿ ಬಂಗಾರ ಖಾತ್ರಿ ಮಾಡಿಕೊಂಡ ನರೇಗಾ ಕಾರ್ಮಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.