ETV Bharat / bharat

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಆಯ್ಕೆ

author img

By

Published : Mar 28, 2023, 2:18 PM IST

ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಚುನಾವಣೆಗೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ್ದು, ಓ ಪನ್ನೀರಸೆಲ್ವಂ ಗುಂಪಿಗೆ ಹಿನ್ನಡೆಯಾಗಿದೆ.

EPS takes over as AIADMK general secretary after Madras HC verdict; OPS petition rejected
EPS takes over as AIADMK general secretary after Madras HC verdict; OPS petition rejected

ಚೆನ್ನೈ : ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಚುನಾವಣೆಗೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಈ ಮೂಲಕ ಎಐಎಡಿಎಂಕೆ ಪರಮೋಚ್ಚ ನಾಯಕಿಯಾಗಿದ್ದ ದಿ. ಜೆ ಜಯಲಲಿತಾ ಅವರ ನಂತರ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವ ಹಾದಿ ಸುಗಮವಾಗಿದೆ.

ಹೈಕೋರ್ಟ್ ಆದೇಶದ ನಂತರ ಒಂಚೂರು ತಡಮಾಡದೆ ಎಐಎಡಿಎಂಕೆ ಪಕ್ಷದ ಚುನಾವಣಾ ಆಯುಕ್ತರಾದ ನಾಥಮ್ ಆರ್ ವಿಶ್ವನಾಥನ್ ಮತ್ತು ಪೊಲ್ಲಾಚಿ ವಿ ಜಯರಾಮನ್, ಪಳನಿಸ್ವಾಮಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಘೋಷಿಸಿದರು. ಪಕ್ಷದ ಪದಾಧಿಕಾರಿಗಳು ಶಾಲು ಮತ್ತು ಹೂಗುಚ್ಛ ನೀಡುವ ಮೂಲಕ ಪಳನಿಸ್ವಾಮಿ ಅವರನ್ನು ಅಭಿನಂದಿಸಿದರು.

ಪಕ್ಷದ ಸಂಸ್ಥಾಪಕ ಎಂಜಿ ರಾಮಚಂದ್ರನ್ (ಎಂಜಿಆರ್) ಮತ್ತು ಪಕ್ಷದ ವರಿಷ್ಠೆ ದಿ. ಜೆ ಜಯಲಲಿತಾ ಅವರು ಹೊಂದಿದ್ದ, ಪಕ್ಷದಲ್ಲಿ ಸರ್ವಶಕ್ತ ಹುದ್ದೆಯಾಗಿರುವ ಪ್ರಧಾನ ಕಾರ್ಯದರ್ಶಿಯಾಗಿ ತನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸುವುದಾಗಿ ಪಳನಿಸ್ವಾಮಿ ತೀರ್ಪಿನ ನಂತರ ಹೇಳಿದರು. ಎಐಎಡಿಎಂಕೆ ಪಕ್ಷವು ತನ್ನ ಆಂತರಿಕ ಚುನಾವಣಾ ಫಲಿತಾಂಶದ ಬಗ್ಗೆ ಭಾರತದ ಚುನಾವಣಾ ಆಯೋಗಕ್ಕೆ ತಿಳಿಸಲಿದೆ.

ಪದಚ್ಯುತ ನಾಯಕ ಓ ಪನ್ನೀರಸೆಲ್ವಂ ಮತ್ತು ಅವರ ಬೆಂಬಲಿಗರಾದ ಪಿಎಚ್ ಮನೋಜ್ ಪಾಂಡಿಯನ್, ಆರ್ ವೈತಿಲಿಂಗಂ ಮತ್ತು ಜೆಸಿಡಿ ಪ್ರಭಾಕರ್ ಅವರು ಪಕ್ಷದ ಚುನಾವಣೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಗಳ ಮೇಲೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಕುಮಾರೇಶ್ ಬಾಬು ಈ ಆದೇಶವನ್ನು ನೀಡಿದ್ದಾರೆ. ತಡೆ ಕೋರಿದ ಮಧ್ಯಂತರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ನ್ಯಾಯಾಲಯದಿಂದ ಕೆಲವು ಅನುಕೂಲಕರ ಆದೇಶಗಳನ್ನು ಪಡೆಯುವ ಮೂಲಕ ಪಕ್ಷಕ್ಕೆ ಮರಳುವ ಪ್ರಯತ್ನದಲ್ಲಿದ್ದ ಓಪಿಎಸ್​ಗೆ ಇದು ಬಹುದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.

ವಿಷಯವು ನ್ಯಾಯಾಂಗ ವಿಚಾರಣೆಯಲ್ಲಿದ್ದಾಗಲೇ ಮಾರ್ಚ್ 17 ರಂದು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚುನಾವಣೆಯನ್ನು ಘೋಷಿಸಲಾಗಿತ್ತು. ಚುನಾವಣಾ ವೇಳಾಪಟ್ಟಿಯ ಪ್ರಕಾರ, ಮಾರ್ಚ್ 18 ಮತ್ತು 19 ರಂದು ನಾಮಪತ್ರಗಳನ್ನು ಸಲ್ಲಿಸಲಾಯಿತು. ಇಪಿಎಸ್ ಮಾತ್ರ ನಾಮಪತ್ರ ಸಲ್ಲಿಸಿದ್ದರು ಮತ್ತು ಅವರ ಹಲವಾರು ಬೆಂಬಲಿಗರು ಅವರ ಪರವಾಗಿಯೇ ನಾಮಪತ್ರಗಳನ್ನು ಸಲ್ಲಿಸಿದ್ದರು. ಹೀಗಾಗಿ ಇಪಿಎಸ್​ ಅವಿರೋಧ ಆಯ್ಕೆ ಆಗಲೇ ಖಚಿತವಾಗಿತ್ತು. ಆದರೆ ಪಕ್ಷದೊಳಗೆ ಸಾಂಸ್ಥಿಕ ಚುನಾವಣೆ ನಡೆಸುವುದನ್ನು ಪ್ರಶ್ನಿಸಿ, ಓಪಿಎಸ್ ಮತ್ತು ಮೂವರು ನಾಯಕರು ನ್ಯಾಯಾಲಯದ ಮುಂದೆ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದರು. ಏತನ್ಮಧ್ಯೆ, ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೂ ಚುನಾವಣಾ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಇಪಿಎಸ್ ಬಣ ನ್ಯಾಯಾಲಯಕ್ಕೆ ತಿಳಿಸಿತ್ತು.

ಎರಡು ರಜಾದಿನಗಳಲ್ಲಿ ನಡೆದ ವಿಶೇಷ ವಿಚಾರಣೆಯಲ್ಲಿ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಯಿತು. ಓಪಿಎಸ್ ಶಿಬಿರವನ್ನು ಪ್ರತಿನಿಧಿಸುವ ಹಿರಿಯ ವಕೀಲರು, ತಿದ್ದುಪಡಿಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿದರು ಮತ್ತು ತಮ್ಮನ್ನು ಪಕ್ಷದ ಹುದ್ದೆಯಿಂದ ತೆಗೆದುಹಾಕುವಲ್ಲಿ ಪಕ್ಷದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು. ಮಾರ್ಚ್ 22 ರಂದು ಅಂತಿಮ ವಾದದ ನಂತರ ನ್ಯಾಯಾಧೀಶರು ಆದೇಶಗಳನ್ನು ಕಾಯ್ದಿರಿಸಿದ್ದರು.

ಇದನ್ನೂ ಓದಿ : ಜಯಲಲಿತಾ ಸಾವಿನ ವರದಿ.. ನನ್ನ ವಿರುದ್ಧದ ಆರೋಪ ಸುಳ್ಳು, ತನಿಖೆಗೆ ಸಿದ್ಧ: ಶಶಿಕಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.