ETV Bharat / bharat

ಮುಂಬೈ ಹೋಟೆಲ್​ನಲ್ಲಿ 15 ಕೋಟಿ ರೂ ಮೌಲ್ಯದ ಡ್ರಗ್ಸ್​ ವಶ: ವಿದೇಶಿ ಪ್ರಜೆ ಸೇರಿ ಇಬ್ಬರ ಬಂಧನ

author img

By ETV Bharat Karnataka Team

Published : Nov 13, 2023, 7:21 PM IST

Mumbai NCB arrested two with 2 kg Cocaine: ಗುಪ್ತಚರ ಮಾಹಿತಿ ಆಧರಿಸಿ ಮುಂಬೈ ಹೋಟೆಲ್​ಗೆ ದಾಳಿ ನಡೆಸಿದ್ದ ಎನ್​ಸಿಬಿ ತಂಡ ಕೊಕೇನ್​ ಜೊತೆಗೆ ವಿದೇಶಿ ಪ್ರಜೆಯನ್ನು ಬಂಧಿಸಿತ್ತು.

Two accused with seized  Cocain
ವಶಪಡಿಸಿಕೊಂಡ ಕೊಕೇನ್​ ಜೊತೆಗೆ ಇಬ್ಬರು ಆರೋಪಿಗಳು

ಮುಂಬೈ: ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಂತಾರಾಷ್ಟ್ರೀಯ ಡ್ರಗ್​ ಸಿಂಡಿಕೇಟ್​ ಅನ್ನು ಭೇದಿಸಿದೆ. ಕಾರ್ಯಾಚರಣೆ ವೇಳೆ ಮುಂಬೈಯ ಹೋಟೆಲ್​ ಒಂದರಲ್ಲಿ ನವೆಂಬರ್​ 9 ರಂದು 15 ಕೋಟಿ ರೂ ಮೌಲ್ಯದ 2 ಕೆಜಿ ಕೊಕೇನ್​ ವಶಪಡಿಸಿಕೊಂಡಿದ್ದು, ಕೊಕೇನ್​ ಜೊತೆಗೆ ಜಾಂಬಿಯಾದ ವಿದೇಶಿ ಪ್ರಜೆಯನ್ನೂ ಬಂಧಿಸಿತ್ತು. ಮುಂದುವರಿದ ಕಾರ್ಯಾಚರಣೆ ಭಾಗವಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ದೆಹಲಿಯ ಟಾಂಜೇನಿಯಾದ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ ಎಂದು ಎನ್​ಸಿಬಿ ಮುಂಬೈ ವಲಯ ನಿರ್ದೇಶಕ ಅಮಿತ್​ ಘ್ವಾವಟೆ ಸೋಮವಾರ ತಿಳಿಸಿದ್ದಾರೆ.

ಮುಂಬೈ, ದೆಹಲಿ, ಬೆಂಗಳೂರು, ಗೋವಾ ಸೇರಿದಂತೆ ಹಲವು ನಗರಗಳನ್ನು ಅಂತಾರಾಷ್ಟ್ರೀಯ ಡ್ರಗ್ಸ್​ ಜಾಲ ಹರಡಿಕೊಂಡಿದೆ. ಮುಂಬೈಯ ಎನ್​ಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್​ ಸಿಂಡಿಕೇಟ್​ ಅನ್ನು ಭೇದಿಸಿ, ಇಬ್ಬರು ಡ್ರಗ್ಸ್​ ಪೆಡ್ಲರ್​ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಹಬ್ಬಹರಿದಿನಗಳಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯುವ ನಿಟ್ಟಿನಲ್ಲಿ, ಗುಪ್ತಚರ ಮಾಹಿತಿ ಆಧರಿಸಿ ಎನ್​ಸಿಬಿ ಕಾರ್ಯಾಚರಣೆಗಿಳಿದಿತ್ತು. ಕುಖ್ಯಾತ ಅಂತಾರಾಷ್ಟ್ರೀಯ ಡ್ರಗ್ಸ್​ ಸಿಂಡಿಕೇಟ್​, ಭಾರತಕ್ಕೆ ಕೊಕೇನ್​ ಕಳ್ಳಸಾಗಣೆ ಮಾಡಲು ಸ್ಕೆಚ್​ ಹಾಕಿರುವ ಬಗ್ಗೆ ಗಮನಕ್ಕೆ ಬಂದಿತ್ತು. ಡ್ರಗ್ಸ್​ ಪೂರೈಕೆದಾರನನ್ನು ಜಾಂಬಿಯಾ ಪ್ರಜೆ ಎಲ್​​ ಎ ಗಿಲ್ಮೋರ್​ ಎಂದು ಗುರುತಿಸಲಾಗಿತ್ತು. ಶೀಘ್ರದಲ್ಲೇ ಮುಂಬೈನ ಹೋಟೆಲ್​ನಲ್ಲಿ ತಂಗಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರಂತೆ ಮುಂಬೈಯ ಹೋಟೆಲ್​ ಮೇಲೆ ನಿಗಾ ಇಡಲು ಇನ್​ಸಿಬಿ ಅಧಿಕಾರಿಗಳ ತಂಡವನ್ನು ತಕ್ಷಣವೇ ನೇಮಕ ಮಾಡಲಾಗಿತ್ತು. ನವೆಂಬರ್​ 9 ರಂದು ಗಿಲ್ಮೋರ್​ ಹೋಟೆಲ್​ಗೆ ಚೆಕ್​ ಇನ್​ ಆಗಿರುವ ಬಗ್ಗೆ ದೃಢಪಡಿಸಿಕೊಂಡು, ಎನ್​ಸಿಬಿ ತಂಡ ದಾಳಿ ಮಾಡಿತ್ತು.

ಆರಂಭದಲ್ಲಿ ಆತನ ಲಗೇಜ್​ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರಲಿಲ್ಲ. ಆದರೆ ನಂತರ ಕ್ಯಾರಿ ಬ್ಯಾಗ್​ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಬ್ಯಾಗ್​ನ ಒಳಪದರಗಳಲ್ಲಿ ಡ್ರಗ್ಸ್​ ಪತ್ತೆಯಾಗಿತ್ತು. ಪದರಗಳನ್ನು ಕತ್ತರಿಸಿ ನೋಡಿದಾಗ ಬ್ಯಾಗ್​ನಲ್ಲಿ ಎರಡು ಚೀಲಗಳಲ್ಲಿ 2 ಕೆಜಿ ಕೊಕೇನ್​ ಪತ್ತೆಯಾಗಿತ್ತು.

ನವೆಂಬರ್​ 9 ರಂದು ವಿಮಾನದ ಮೂಲಕ ಗಿಲ್ಮೋರ್​ ಮುಂಬೈಗೆ ಆಗಮಿಸಿದ್ದನು. ಈತ ಮಾದಕವಸ್ತು ರವಾನೆಗಾಗಿ ಜಾಂಬಿಯಾದ ಲುಸಾಕಾದಿಂದ ಇಥಿಯೋಪಿಯಾದ ಅಡಿಸ್​ ಅಬಾಬಾಗೆ ಭೇಟಿ ನೀಡಿದ್ದನು. ತನಿಖೆ ವೇಳೆ ಗಿಲ್ಮೋರ್​, ಮಾದಕವಸ್ತು ಕಳ್ಳಸಾಗಣೆಯೊಂದಿಗೆ ಸಂಬಂಧ ಹೊಂದಿರುವ ಕೆಲವು ಮಧ್ಯವರ್ತಿಗಳ ಬಗ್ಗೆ ಮಾಹಿತಿ ನೀಡಿದ್ದನು. ಜೊತೆಗೆ ಆತನಿಗೆ ಹ್ಯಾಂಡ್ಲರ್​ ಮೂಲಕ ಮಾಹಿತಿ ನೀಡಿರುವುದನ್ನು ಹೇಳಿದ್ದನು. ಹ್ಯಾಂಡ್ಲರ್​ನಲ್ಲಿ ಸರಕು ತಲುಪಿಸಲು ದೆಹಲಿಗೆ ಬರುವಂತೆ ಹೇಳಲಾಗಿತ್ತು. ಅದನ್ನು ಆಧರಿಸಿ, ಎನ್​ಸಿಬಿ ತಂಡ ದೆಹಲಿಗೆ ತಲುಪಿ, ಮಾದಕವಸ್ತು ನೀಡಲು ಸೂಚಿಸಿದ್ದ ಜಾಗದಲ್ಲಿ ಬಲೆ ಬೀಸಿತ್ತು. ಅದರಂತೆ ನವೆಂಬರ್​ 11ರಂದು ದೆಹಲಿಯಲ್ಲಿ ಗಿಲ್ಮೋರ್​ನಿಂದ ಡ್ರಗ್ಸ್​ ಪಡೆಯಬೇಕಾಗಿದ್ದ ಎಂ ಆರ್​ ಅಗಸ್ಟಿನೋ ಎಂಬ ತಾಂಜೇನಿಯಾ ಮಹಿಳೆಯನ್ನು ಎನ್​ಸಿಬಿ ತಂಡ ಬಂಧಿಸಿದೆ. ಸದ್ಯ ಇಬ್ಬರನ್ನೂ ಹೆಚ್ಚಿನ ತನಿಖೆಗಾಗಿ ಮುಂಬೈಯ ಎನ್​ಸಿಬಿ ವಶಕ್ಕೆ ತೆಗೆದುಕೊಂಡಿದೆ.

ಇದನ್ನೂ ಓದಿ: ಬೆಂಗಳೂರು: ಮನೆಯಲ್ಲಿ ಮಿನಿ ಡ್ರಗ್ಸ್ ಫ್ಯಾಕ್ಟರಿ! ನೈಜೀರಿಯಾ ವ್ಯಕ್ತಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.