ETV Bharat / bharat

ಅಪ್ರಾಪ್ತ ಮಕ್ಕಳ ಮೇಲೆ ತಂದೆಯಿಂದಲೇ ಅತ್ಯಾಚಾರ: ಅಪರಾಧಿಗೆ ಡಬಲ್‌ ಜೀವಾವಧಿ ಶಿಕ್ಷೆ

author img

By

Published : Feb 24, 2023, 8:34 PM IST

ಪತ್ನಿ ಸಾವನ್ನಪ್ಪಿದ ಮೇಲೆ ಎರಡನೇ ಮದುವೆಯಾಗಿದ್ದರೂ, ತನ್ನದೇ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಸತತ ಒಂದೂವರೆ ವರ್ಷ ಅಪರಾಧಿ ಅತ್ಯಾಚಾರವೆಸಗಿದ್ದಾನೆ.

Double life imprisonment father for raping two daughters in Nagpur
ಆರೋಪಿಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ನಾಗ್ಪುರ (ಮಹಾರಾಷ್ಟ್ರ): ಪತ್ನಿ ಸಾವಿನ ನಂತರ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಒಂದೂವರೆ ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿದ್ದ ತಂದೆಗೆ ನಾಗ್ಪುರ ವಿಶೇಷ ಸೆಷನ್ಸ್​ ನ್ಯಾಯಾಲಯ ಎರಡು ಜೀವಾವಧಿ ಶಿಕ್ಷೆ ವಿಧಿಸಿತು. ನ್ಯಾಯಾಧೀಶ ಒ.ಪಿ.ಜೈಸ್ವಾಲ್ ಅವರು ಅಪರಾಧಿಗೆ (ಪೋಕ್ಸೋ) ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೆಕ್ಷನ್ 4(2) ಮತ್ತು ಸೆಕ್ಷನ್ 6 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದರು.

ಅಪರಾಧಿಯು ಪತ್ನಿಯ ಸಾವಿನ ನಂತರ ಒಂದೂವರೆ ವರ್ಷಗಳ ಕಾಲ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ವಿಷಯ ತಿಳಿದ ಬಾಲಕಿಯರ ಸೋದರ ಮಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಡೆದಾಗ ಹೆಣ್ಣು ಮಕ್ಕಳಲ್ಲಿ ಒಬ್ಬಳು 14 ವರ್ಷ ಮತ್ತು ಇನ್ನೊಬ್ಬಳು 12 ವರ್ಷ ವಯಸ್ಸಿನವರಾಗಿದ್ದರು. ನಾಗ್ಪುರ ನಗರದ ಮೊಮಿನ್‌ಪುರ ಪ್ರದೇಶದಲ್ಲಿ ಜೂನ್ 2019 ಮತ್ತು ನವೆಂಬರ್ 13, 2020 ರ ನಡುವೆ ಅತ್ಯಾಚಾರ ನಡೆದಿದೆ.

ಅಪರಾಧಿ ಆಟೋ ಚಾಲಕನಾಗಿದ್ದು, ಪತ್ನಿ ಸಾವನ್ನಪ್ಪಿದಾಗ ಗರ್ಭಿಣಿಯಾಗಿದ್ದಳು. ತನ್ನ ಪತ್ನಿ ಸಾವನ್ನಪ್ಪಿದ ನಂತರ ಆರೋಪಿ ತಂದೆ ಸತತ ಒಂದೂವರೆ ವರ್ಷಗಳ ಕಾಲ ಬಾಲಕಿಯರಿಬ್ಬರ ಮೇಲೂ ಕೊಲೆ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಮಾವನ ಮನೆಗೆ ಹೋದಾಗ ವಿಷಯ ಬಹಿರಂಗ: ಸಂತ್ರಸ್ತ ಬಾಲಕಿಯರಿಬ್ಬರೂ ತಮ್ಮ ತಾಯಿಯ ಸಹೋದರ, ಮಾವನ ಮನೆಗೆ ಹೋಗಿದ್ದರು. 15 ದಿನಗಳ ಕಾಲ ಮಾವನ ಮನೆಯಲ್ಲೇ ತಂಗಿದ್ದ ಹೆಣ್ಣು ಮಕ್ಕಳಿಬ್ಬರನ್ನೂ ಮತ್ತೆ ತಂದೆ ಮನೆಗೆ ಕಳುಹಿಸಲು ಮಾವ ತಯಾರಾದಾಗ, ಇಬ್ಬರೂ ಮನೆಗೆ ಹೋಗಲು ತಯಾರಿರಲಿಲ್ಲ. ಬಾಲಕಿಯರಿಬ್ಬರೂ ತಾವು ಮನೆಗೆ ಹೋಗುವುದಿಲ್ಲ ಎಂದು ಅಳಲು ಪ್ರಾರಂಭಿಸಿದ್ದಾರೆ. ಈ ರೀತಿ ಅಳುತ್ತಿದ್ದ ಮಕ್ಕಳನ್ನು ಮಾವ ವಿಚಾರಿಸಿದ್ದು, ಬಾಲಕಿಯರು ತಮ್ಮ ತಂದೆಯ ಕೃತ್ಯದ ಕುರಿತು ಬಾಯಿ ಬಿಟ್ಟಿದ್ದಾರೆ. ಇದೆಲ್ಲವನ್ನು ತಿಳಿದ ಮಾವ ನೇರವಾಗಿ ತಹ್ಸಿಲ್​ ಪೊಲೀಸ್​ ಠಾಣೆಗೆ ಬಂದು, ಇಬ್ಬರಿಗೂ ಧೈರ್ಯ ತುಂಬಿ, ತಮ್ಮ ತಂದೆಯ ವಿರುದ್ಧ ದೂರು ದಾಖಲು ಮಾಡಿಸಿದ್ದಾರೆ.

ಆರೋಪಿ ಕುಟುಂಬ ಸದಸ್ಯರಿಗೂ ಶಿಕ್ಷೆ: ಪತ್ನಿಯ ಸಾವಿನ ನಂತರ ಆರೋಪಿ ಮರುಮದುವೆ ಮಾಡಿಕೊಂಡಿದ್ದನು. ಆ ನಂತರವೂ ಆರೋಪಿ ತನ್ನ ಸ್ವಂತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮುಂದುವರಿಸಿದ್ದನು. ಆರೋಪಿಯ ಎರಡನೇ ಪತ್ನಿ ಹಾಗೂ ಆತನ ಅಣ್ಣ ಹಾಗೂ ಅತ್ತಿಗೆಗೂ ಈ ಎಲ್ಲ ಪ್ರಕ್ರಿಯೆಗಳ ಬಗ್ಗೆ ಅರಿವಿತ್ತು. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ದೂರು ದಾಖಲಿಸಿರಲಿಲ್ಲ. ಆದ್ದರಿಂದ ವಿಶೇಷ ಸೆಷನ್ಸ್ ನ್ಯಾಯಾಲಯ ಆರೋಪಿಯ ಸಂಬಂಧಿಕರಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿ, ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಸಂತ್ರಸ್ತ ಬಾಲಕಿಯರಿಗೆ ಪುನರ್ವಸತಿ: ಈ ಪ್ರಕರಣದ ಸಂತ್ರಸ್ತರು ಇಬ್ಬರೂ ಅಪ್ರಾಪ್ತ ವಯಸ್ಸಿನವರಾಗಿದ್ದು ಅವರ ಶಿಕ್ಷಣ ಹಾಗೂ ಸೂಕ್ತ ಪುನರ್ವಸತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ: ಯುವತಿಯ ನಗ್ನ ವಿಡಿಯೋಗಳನ್ನು ತೋರಿಸಿ ಕಿರುಕುಳ ನೀಡಿದ ಆರೋಪ: ಆಪ್ತ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರೇಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.