ETV Bharat / bharat

ಜಯಲಲಿತಾ ಸಾವು.. ಪ್ರಧಾನಿ ಮೋದಿ ವಿರುದ್ಧ ಬೊಟ್ಟು ತೋರಿಸಿದ ಡಿಎಂಕೆ ಶಾಸಕ

author img

By

Published : Jan 8, 2023, 4:14 PM IST

Updated : Jan 8, 2023, 5:27 PM IST

ತಮಿಳುನಾಡು ಸಿಎಂ ಜಯಲಲಿತಾ ನಿಧನ ಪ್ರಕರಣಕ್ಕೆ ಮತ್ತೆ ಮುನ್ನಲೆಗೆ - ಎಐಎಡಿಎಂಕೆ ಅಧಿನಾಯಕಿಯಾಗಿದ್ದು ಸಾವಲ್ಲ, ಹತ್ಯೆ ಎಂದ ಶಾಸಕ ಮಾರ್ಕಂಡೇಯನ್ - ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ

dmk-mla-new-alleges-on-jayalalithas-death-case
ಜಯಲಲಿತಾ ಸಾವು... ಪ್ರಧಾನಿ ಮೋದಿ ವಿರುದ್ಧ ಬೊಟ್ಟು ತೋರಿಸಿದ: ಡಿಎಂಕೆ ಶಾಸಕ

ಚೆನ್ನೈ (ತಮಿಳುನಾಡು): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಅಧಿನಾಯಕಿಯಾಗಿದ್ದ ಜಯಲಲಿತಾ ನಿಧನದ ಕುರಿತಂತೆ ತಮಿಳುನಾಡು ಆಡಳಿತಾರೂಢ ಡಿಎಂಕೆ ಪಕ್ಷದ ಶಾಸಕ ಮಾರ್ಕಂಡೇಯನ್ ಸಂಚಲನಕಾರಿ ಹೇಳಿಕೆ ನೀಡಿದ್ದಾರೆ. ಜಯಲಲಿತಾ ಅವರದ್ದು ಸಾವಲ್ಲ, ಅದೊಂದು ಹತ್ಯೆ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.

ಇತ್ತೀಚೆಗೆ ತೂತುಕುಡಿಯ ವಿಲತ್ತಿಕುಲಂನಲ್ಲಿ ಪ್ರೊ.ಅನ್ಬಳಗನ್ ಶತಮಾನೋತ್ಸವದ ನಿಮಿತ್ತ ಡಿಎಂಕೆ ವತಿಯಿಂದ ಬೃಹತ್ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ವಿಲತ್ತಿಕುಲಂ ಕ್ಷೇತ್ರದ ಡಿಎಂಕೆ ಶಾಸಕರಾದ ಮಾರ್ಕಂಡೇಯನ್ ಮತ್ತು ಪಕ್ಷದ ಪದಾಧಿಕಾರಿಗಳು, ಸ್ವಯಂಸೇವಕರು ಮತ್ತು ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು. ಈ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಮಾರ್ಕಂಡೇಯನ್, ಜಯಲಲಿತಾ ಅವರ ನಿಧನ ಕುರಿತು ಉಲ್ಲೇಖಿಸಿದ್ದಾರೆ. ಪ್ರಧಾನಿ ಮೋದಿ ಅವರು ಜಯಲಲಿತಾ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ.

ಜಯಲಲಿತಾ ಬಗ್ಗೆ ಶಾಸಕ ಹೇಳಿದ್ದೇನು?: ಎಐಎಡಿಎಂಕೆ ಮಾಜಿ ಕಾರ್ಯನಿರ್ವಾಹಕರಾದ ಮಾರ್ಕಂಡೇಯನ್ ಹಾಲಿ ಡಿಎಂಕೆ ಶಾಸಕರಾಗಿದ್ದಾರೆ. ವಿಲತ್ತಿಕುಲಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಮಾಜಿ ಸಿಎಂ ಜಯಲಲಿತಾ ಜೀವಂತವಾಗಿರುವವರೆಗೂ ನಾನು ಎಐಎಡಿಎಂಕೆ ಪಕ್ಷದಲ್ಲೇ ಇದ್ದೆ. ಅವರು ನಿಧನರಾದರು. ಆದರೆ, ಅವರದ್ದು ಸಾವಲ್ಲ. ಮೋದಿ ಅವರು ಜಯಲಲಿತಾ ಅವರನ್ನು ಹತ್ಯೆ ಮಾಡಿಸಿದ್ದಾರೆ. ಏಕೆಂದರೆ, ಜಯಲಲಿತಾ ಅವರು ತಾವು ಪ್ರಧಾನಿ ಅಭ್ಯರ್ಥಿಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ಅವರನ್ನು ಬಿಜೆಪಿಯವರು ಹತ್ಯೆ ಮಾಡಿದರು. ನಾನು ಇದನ್ನು ಬಹಿರಂಗವಾಗಿಯೇ ಆರೋಪ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇತ್ತ, ಈ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಇದನ್ನೂ ಓದಿ: ಜಯಲಲಿತಾ ಸಾವಿನ ವಿಚಾರ.. ಶಶಿಕಲಾ ವಿರುದ್ಧ ತನಿಖೆಗೆ ಆಯೋಗದ ಶಿಫಾರಸು.. ಒಪಿಎಸ್​​​ ಬಣಕ್ಕೆ ಹಿನ್ನಡೆ

ಮಾರ್ಕಂಡೇಯನ್ 2011ರಲ್ಲಿ ಎಐಎಡಿಎಂಕೆ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2019-2020ರ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷವು ಅವರಿಗೆ ಟಿಕೆಟ್​ ನೀಡಲು ನಿರಾಕರಿಸಿತ್ತು. ಆದ್ದರಿಂದ ಮಾರ್ಕಂಡೇಯನ್ ಬಂಡಾಯವೆದ್ದು, ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ, ವಿಲತ್ತಿಕುಲಂ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಂತರ ಎಐಎಡಿಎಂಕೆ ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಿ ಮಾರ್ಕಂಡೇಯನ್ ಗೆದ್ದು ಬಂದಿದ್ದರು. ಬಳಿಕ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿ, 2021ರ ಚುನಾವಣೆಯಲ್ಲೂ ಗೆದ್ದು ಶಾಸಕರಾಗಿದ್ದಾರೆ.

ಜಯಲಲಿತಾ ಸಾವಿನ ತನಿಖೆ: ದೇಶದ ವರ್ಚಸ್ಸಿನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಜಯಲಲಿತಾ 2016ರ ಡಿಸೆಂಬರ್​ನಲ್ಲಿ ನಿಧನರಾಗಿದ್ದರು. ಇದು ತಮಿಳುನಾಡು ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಜಯಲಲಿತಾ ಸಾವಿನ ಕಾರಣ ಮತ್ತು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅನುಸರಿಸಿದ ವೈದ್ಯಕೀಯ ವಿಧಾನಗಳ ಬಗ್ಗೆಯೇ ಅನುಮಾನಗಳನ್ನು ಹುಟ್ಟು ಹಾಕಿತ್ತು. ಹೀಗಾಗಿ ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ಮಾಜಿ ಸಿಎಂ ಪನ್ನೀರ್​ಸೆಲ್ವಂ ಮನವಿ ಮಾಡಿದ್ದರು. ಹೀಗಾಗಿ ನಿವೃತ್ತ ನ್ಯಾ. ಆರುಮುಘಸ್ವಾಮಿ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿತ್ತು.

ನ್ಯಾ. ಆರುಮುಘಸಾಮಿ ಆಯೋಗವು ತಮಿಳಿನಲ್ಲಿ 608 ಪುಟಗಳ ಅಂತಿಮ ವರದಿ ಹಾಗೂ ಇಂಗ್ಲಿಷ್‌ನಲ್ಲಿ 500 ಪುಟಗಳ ವರದಿಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ ವೈದ್ಯಕೀಯ ಲೋಪವಾಗಿದೆ ಎಂಬ ಗಂಭೀರ ವಿಚಾರವನ್ನು ಪ್ರಸ್ತಾಪಿಸಲಾಗಿತ್ತು. ಜಯಲಲಿತಾ ಅನಾರೋಗ್ಯಕ್ಕೀಡಾದಾಗ ಯಾವ ಚಿಕಿತ್ಸೆ ನೀಡಲಾಗುತ್ತಿತ್ತು ಮತ್ತು ಅವರಿಗೆ ಏನಾಗಿತ್ತು ಎಂಬುದರ ಬಗ್ಗೆ ಗೌಪ್ಯತೆ ಕಾಪಾಡಲಾಗಿದೆ ಎಂಬುದು ಸೇರಿ ಹಲವಾರು ವೈದ್ಯಕೀಯ ದೋಷಗಳು ಕಂಡುಬಂದಿವೆ ಎಂದು ಹೇಳಲಾಗಿತ್ತು. ಅಲ್ಲದೇ, ಜಯಲಲಿತಾ ಸಾವಿನ ವಿಷಯದಲ್ಲಿ ಆಪ್ತ ಸ್ನೇಹಿತೆ ಶಶಿಕಲಾ ಸೇರಿ ಇತರರ ಹೆಸರು ಸಹ ಕೇಳಿ ಬಂದಿದ್ದವು.

ಇದನ್ನೂ ಓದಿ: ಜಯಲಲಿತಾ ಸಾವಿನ ವರದಿ.. ನನ್ನ ವಿರುದ್ಧದ ಆರೋಪ ಸುಳ್ಳು, ತನಿಖೆಗೆ ಸಿದ್ಧ: ಶಶಿಕಲಾ

Last Updated : Jan 8, 2023, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.