ETV Bharat / bharat

ಏರ್ ಇಂಡಿಯಾ ಹೂಡಿಕೆ ಹಿಂತೆಗೆತ ಪ್ರಕ್ರಿಯೆ: ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾ

author img

By

Published : Jan 6, 2022, 1:41 PM IST

Subramanian Swamy
ಸುಬ್ರಮಣಿಯನ್ ಸ್ವಾಮಿ

ಏರ್​ ಇಂಡಿಯಾ ವಿಮಾನಯಾನ ಕಂಪನಿಯಿಂದ ಕೇಂದ್ರ ಸರ್ಕಾರ ಹೂಡಿಕೆ ಹಿಂಪಡೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ನವದೆಹಲಿ: ಏರ್ ಇಂಡಿಯಾ ಹೂಡಿಕೆ ಹಿಂತೆಗೆತ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ.

2021ರ ಅಕ್ಟೋಬರ್‌ನಲ್ಲಿ ಏರ್ ಇಂಡಿಯಾದ ಬಿಡ್ ಅನ್ನು ಟಾಟಾ ಗ್ರೂಪ್‌ ಗೆದ್ದ ನಂತರ ಕೇಂದ್ರ ಸರ್ಕಾರವು ಟಾಟಾ ಗ್ರೂಪ್‌ನೊಂದಿಗೆ 18,000 ಕೋಟಿ ರೂಪಾಯಿಗಳ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಹರಾಜು ಪ್ರಕ್ರಿಯೆ ಭ್ರಷ್ಟವಾಗಿದೆ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಟಾಟಾ ಸಮೂಹದ ಪರವಾಗಿ ಸಜ್ಜುಗೊಂಡಿದೆ ಎಂದು ಸ್ವಾಮಿ ಪಿಐಎಲ್‌ನಲ್ಲಿ ಆರೋಪಿಸಿದ್ದರು.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೂಡಿಕೆ ಹಿಂಪಡೆಯುವಿಕೆಯು ಏರ್ ಇಂಡಿಯಾಕ್ಕೆ ಆಗಿರುವ ಭಾರೀ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡ ನಿರ್ಧಾರವಾಗಿದೆ ಎಂದು ಪ್ರತಿಪಾದಿಸಿದರು. 2017 ರಲ್ಲೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಯಾವಾಗ ಹೂಡಿಕೆ ಹಿಂತೆಗೆತ ಪ್ರಕ್ರಿಯೆ ನಡೆಯುತ್ತದೆಯೋ ಆ ದಿನಾಂಕದವರೆಗೆ ಸರ್ಕಾರವು ನಷ್ಟವನ್ನು ಭರಿಸುತ್ತದೆ ಮತ್ತು ಆ ದಿನಾಂಕದ ನಂತರ ಬಿಡ್ಡರ್ ನಷ್ಟವನ್ನು ಭರಿಸುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಏರ್​ ಇಂಡಿಯಾ ಬಂಡವಾಳ ಹಿಂಪಡೆತ ಪ್ರಕ್ರಿಯೆ ಟಾಟಾ ಪರವಾಗಿದೆ: ದೆಹಲಿ ಹೈಕೋರ್ಟ್​​ನಲ್ಲಿ ಸುಬ್ರಮಣಿಯನ್ ಸ್ವಾಮಿ ಹೇಳಿಕೆ

ಟಾಟಾ ಗ್ರೂಪ್ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಬೃಹತ್ ವಹಿವಾಟುಗಳನ್ನು ಒಳಗೊಂಡಿರುವ ಕಾರಣ ಪ್ರಕ್ರಿಯೆಯನ್ನು ಬಾಕಿ ಇರಿಸಬೇಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ವಾದ - ವಿವಾದ ಆಲಿಸಿದ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಯನ್ನು ವಜಾಗೊಳಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.