ETV Bharat / bharat

Delhi AIIMS: ನಿರಂತರ 9 ಗಂಟೆ ಶಸ್ತ್ರಚಿಕಿತ್ಸೆ! ಸಯಾಮಿ ಸಹೋದರಿಯರನ್ನು ಯಶಸ್ವಿಯಾಗಿ ಬೇರ್ಪಡಿಸಿದ ದೆಹಲಿ ಏಮ್ಸ್‌ ವೈದ್ಯರು

author img

By

Published : Jul 28, 2023, 9:10 AM IST

Updated : Jul 28, 2023, 9:16 AM IST

Conjoined twins separated: ಎದೆ ಮತ್ತು ಹೊಟ್ಟೆಯ ಭಾಗ ಪರಸ್ಪರ ಸೇರಿಕೊಂಡಿದ್ದ ಅವಳಿ ಮಕ್ಕಳಾದ ರಿದ್ಧಿ ಮತ್ತು ಸಿದ್ಧಿಯನ್ನು ದೆಹಲಿಯ ಏಮ್ಸ್‌ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.

twins Riddhi Siddhi
ಯಶಸ್ವಿ ಶಸ್ತ್ರಚಿಕಿತ್ಸೆ

ನವದೆಹಲಿ : ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್​- AIIMS) ತಜ್ಞ ವೈದ್ಯರು ಸತತ 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಒಂದು ವರ್ಷದ ಸಯಾಮಿ ಮಕ್ಕಳನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿ ಮೂಲದ ದೀಪಿಕಾ ಮತ್ತು ಅಂಕುರ್ ಗುಪ್ತಾ ದಂಪತಿಗೆ ರಿದ್ಧಿ ಮತ್ತು ಸಿದ್ಧಿ ಎಂಬ ಅವಳಿ ಹೆಣ್ಣು ಮಕ್ಕಳು ಜನಿಸಿದ್ದರು. ಈ ಮಕ್ಕಳ ಎದೆ ಮತ್ತು ಹೊಟ್ಟೆ ಭಾಗಗಳು ಕೂಡಿಕೊಂಡಿದ್ದವು.

ರಿದ್ಧಿ ಮತ್ತು ಸಿದ್ಧಿ ಸುಮಾರು 1 ವರ್ಷದ ಅವಳಿ ಸಹೋದರಿಯರು. ಹುಟ್ಟಿನಿಂದಲೇ ಪರಸ್ಪರ ಅಂಟಿಕೊಂಡಿದ್ದರು. ದೇಹದ ಹಲವು ಭಾಗಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದವು.

"ಬರೇಲಿಯಲ್ಲಿ ದೀಪಿಕಾ ಗುಪ್ತಾ ಅವರ ಗರ್ಭಧಾರಣೆಯ ನಾಲ್ಕನೇ ತಿಂಗಳಲ್ಲಿ ಥೋರಾಕೊ-ಆಂಫಾಲೋಪಾಗಸ್ ಸಂಯೋಜಿತ ಅವಳಿಗಳೆಂದು ಜನನದ ಮೊದಲೇ ಗುರುತಿಸಲಾಗಿತ್ತು. ಕಳೆದ ವರ್ಷ ಜುಲೈ 7ರಂದು ಜನಿಸಿದ ಮಕ್ಕಳು ಐದು ತಿಂಗಳ ಕಾಲ ಐಸಿಯುನಲ್ಲಿದ್ದರು. ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ಜೂನ್ 8ರಂದು ಮಕ್ಕಳನ್ನು ಬೇರ್ಪಡಿಸಲಾಯಿತು. ಅವಳಿಗಳು ತಮ್ಮ ಮೊದಲ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲೇ ಆಚರಿಸಿಕೊಂಡರು" ಎಂದು ಪೀಡಿಯಾಟ್ರಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಮಿನು ಬಾಜ್ಪೈ ಹೇಳಿದ್ದಾರೆ.

ಇದನ್ನೂ ಓದಿ : ಬೆನ್ನಿಗೆ ಹೊಕ್ಕಿದ್ದ ಆರು ಇಂಚು ಉದ್ದದ ಚಾಕು ಹೊರಕ್ಕೆ : ಏಮ್ಸ್​ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಹೆರಿಗೆಗೂ ಮುನ್ನವೇ ಕುಟುಂಬಕ್ಕೆ ವಿಚಾರ ಗೊತ್ತಿತ್ತು : ಅವಳಿ ಮಕ್ಕಳ ದೈಹಿಕ ಸಮಸ್ಯೆ ಹುಟ್ಟುವ ಮೊದಲೇ ಕುಟುಂಬಕ್ಕೆ ತಿಳಿದಿತ್ತು. ಆದರೆ, ಕುಟುಂಬಕ್ಕೆ ಏಮ್ಸ್ ವೈದ್ಯರ ಮೇಲೆ ನಂಬಿಕೆ ಇತ್ತು. ಆದ್ದರಿಂದ ಮಹಿಳೆ ಮಗುವಿಗೆ ಜನ್ಮ ನೀಡಿದರು. ಅಂದಿನಿಂದ ಎರಡೂ ಮಕ್ಕಳ ಮೇಲೆ ಏಮ್ಸ್ ವೈದ್ಯರು ನಿಗಾ ವಹಿಸಿದ್ದರು. ಜನನದ ನಂತರ ವೈದ್ಯರು ರಿದ್ಧಿ ಮತ್ತು ಸಿದ್ಧಿ ಸ್ವಲ್ಪ ತೂಕ ಪಡೆದುಕೊಳ್ಳಲೆಂದು ಕಾಯುತ್ತಿದ್ದರು. ಸಹೋದರಿಯರು ಒಂದು ವರ್ಷದವರಾದಾಗ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಪ್ರಾರಂಭಿಸಿದರು.

ಇದನ್ನೂ ಓದಿ : ವೈದ್ಯಕೀಯ ಅಚ್ಚರಿ : ಭ್ರೂಣದ ದ್ರಾಕ್ಷಿ ಗಾತ್ರದ ಹೃದಯಕ್ಕೆ ಕವಾಟ ಚಿಕಿತ್ಸೆ, 90 ಸೆಕೆಂಡುಗಳಲ್ಲಿ ಪೂರ್ಣ !

ಆಪರೇಷನ್ ನಂತರ ಮಕ್ಕಳು ಆರೋಗ್ಯವಾಗಿದ್ದಾರೆ : "ಏಮ್ಸ್ ಆಸ್ಪತ್ರೆಯು ಕಳೆದ ಕೆಲವು ವರ್ಷಗಳಲ್ಲಿ ಇಂತಹ ಹಲವು ಆಪರೇಷನ್‌ಗಳನ್ನು ಮಾಡಿದೆ. ಇಬ್ಬರು ಸಹೋದರಿಯರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಈ ಶಸ್ತ್ರಚಿಕಿತ್ಸೆಯಿಂದ ಅವರು ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಹೀಗೆ ಅವಳಿ ಮಕ್ಕಳು ಜನಿಸುವುದು ಸಾವಿರದಲ್ಲಿ ಒಬ್ಬರಿಗೆ ಮಾತ್ರ. ಚಿಕಿತ್ಸೆಯ ನಂತರ ಪೋಷಕರು ತುಂಬಾ ಸಂತೋಷವಾಗಿದ್ದಾರೆ" ಎಂದು ವೈದ್ಯರು ತಿಳಿಸಿದ್ದಾರೆ.

ಇಂಥದ್ದೊಂದು ಅಪರೂಪದ ಶಸ್ತ್ರಚಿಕಿತ್ಸೆಯ ಮೂಲಕ ದೇಶದ ಅತಿದೊಡ್ಡ ಆಸ್ಪತ್ರೆಯಾದ ಏಮ್ಸ್ ವೈದ್ಯರು ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಏಮ್ಸ್‌ ಹೆಸರೇಕೆ ಮುಂಚೂಣಿಯಲ್ಲಿದೆ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ : ಅಂಗಾಂಗ ದಾನ ಮಾಡಿ ಹಲವು ಮಕ್ಕಳ ಬಾಳಿಗೆ ಬೆಳಕಾದ 16 ತಿಂಗಳ ಕಂದಮ್ಮ

Last Updated : Jul 28, 2023, 9:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.