ETV Bharat / bharat

ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ಲಾಸ್ಮಾ ವಿರಳ; ರೇಡಿಯೋ ತರಂಗಗಳ ಸಂಪರ್ಕ ಕಷ್ಟವಿಲ್ಲ: ಇಸ್ರೋ ಹೊಸ ಮಾಹಿತಿ

author img

By ETV Bharat Karnataka Team

Published : Aug 31, 2023, 9:23 PM IST

Updated : Aug 31, 2023, 10:52 PM IST

ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್​ನಲ್ಲಿ ಅಳವಡಿಸಲಾಗಿರುವ 'ರಂಭಾ ಎಲ್​ಪಿ' ಪೇಲೋಡ್​ ಮೊಟ್ಟಮೊದಲ ಬಾರಿಗೆ ಪ್ಲಾಸ್ಮಾ ಪರಿಸರದ ಮಾಪನ ಮಾಡಿದೆ ಎಂದು ಇಸ್ರೋ ತಿಳಿಸಿದೆ.

Etv Bharat
Etv Bharat

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ವೈಜ್ಞಾನಿಕ ಅನ್ವೇಷನೆಗಳು ಮುಂದುವರೆದಿವೆ. ವಿಕ್ರಮ್​ ಲ್ಯಾಂಡರ್​ ಹಾಗೂ ಪ್ರಜ್ಞಾನ್​ ರೋವರ್​ ತಮ್ಮಲ್ಲಿರುವ ಅತ್ಯಾಧುನಿಕ ಉಪಕರಣಗಳ ಮೂಲಕ ಹೊಸ-ಹೊಸ ವಿಷಯಗಳನ್ನು ಅಧ್ಯಯನ ಮಾಡಿ ಪತ್ತೆ ಹಚ್ಚುತ್ತಿವೆ. ಇದೇ ಮೊದಲ ಬಾರಿಗೆ ಚಂದ್ರನ ಮೇಲ್ಮೈಯಲ್ಲಿ ಪ್ಲಾಸ್ಮಾ ಪರಿಸರದ ಬಗ್ಗೆ ಲ್ಯಾಂಡರ್​ನ 'ರಂಭಾ ಎಲ್​ಪಿ' ಪೇಲೋಡ್​ ಅಧ್ಯಯನ ಮಾಡಿದೆ ಎಂದು ಇಸ್ರೋ ಗುರುವಾರ ಮಾಹಿತಿ ಹಂಚಿಕೊಂಡಿದೆ.

  • Chandrayaan-3 Mission:
    In-situ Scientific Experiments

    Radio Anatomy of Moon Bound Hypersensitive Ionosphere and Atmosphere - Langmuir Probe (RAMBHA-LP) payload onboard Chandrayaan-3 Lander has made first-ever measurements of the near-surface Lunar plasma environment over the… pic.twitter.com/n8ifIEr83h

    — ISRO (@isro) August 31, 2023 " class="align-text-top noRightClick twitterSection" data=" ">

ಈ ಕುರಿತು ಇಸ್ರೋ ಟ್ವೀಟ್​ ಮಾಡಿದ್ದು, ''ಚಂದ್ರಯಾನ-3ರ ಪ್ರದೇಶದಲ್ಲಿ ವೈಜ್ಞಾನಿಕ ಅನ್ವೇಷನೆಗಳು ನಡೆಯುತ್ತಿವೆ. ಲ್ಯಾಂಡರ್​ನಲ್ಲಿರುವ ಪ್ಲಾಸ್ಮಾ ಪರಿಸರ ಅಧ್ಯಯನ ಮಾಡುವ 'ರಂಭಾ ಎಲ್​ಪಿ' (Radio Anatomy of Moon Bound Hypersensitive Ionosphere and Atmosphere - Langmuir Probe, RAMBHA-LP) ಇದೇ ಪ್ರಥಮ ಬಾರಿಗೆ ಪ್ಲಾಸ್ಮಾವನ್ನು ಮಾಪನ ಮಾಡಿದೆ. ಇದು ಚಂದ್ರನ ಮೇಲ್ಮೈಯಲ್ಲಿ ಬಹುತೇಕ ವಿರಳವಾಗಿದೆ ಎಂಬುದನ್ನು ಹೇಳುತ್ತಿದೆ'' ಎಂದು ತಿಳಿಸಿದೆ.

ಮುಂದುವರೆದು, ''ಈ ಪರಿಮಾಣಾತ್ಮಕ ಮಾಪನಗಳು ಚಂದ್ರನಲ್ಲಿರುವ ಪ್ಲಾಸ್ಮಾಗಳಿಂದ ಹೊರಬರುವ ರೇಡಿಯೋ ತರಂಗಗಳ ತೀವ್ರತೆಯನ್ನು ತಗ್ಗಿಸಲು ಸಹಕರಿಸುತ್ತವೆ. ಇದರ ಜೊತೆಗೆ, ಮುಂದಿನ ಚಂದ್ರಯಾನ ಸಾಧನಗಳಿಗೆ ಮತ್ತಷ್ಟು ಸ್ಪಷ್ಟವಾದ ವಿನ್ಯಾಸ ಒದಗಿಸುತ್ತದೆ'' ಎಂದು ಹೇಳಿದೆ. ರಂಭಾ ಎಲ್​ಪಿ ಉಪಕರಣವನ್ನು ಇಸ್ರೋದ ತಿರುವನಂತಪುರಂ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

  • Chandrayaan-3 Mission:
    In-situ Scientific Experiments

    Instrument for the Lunar Seismic Activity (ILSA) payload on Chandrayaan 3 Lander
    -- the first Micro Electro Mechanical Systems (MEMS) technology-based instrument on the moon --
    has recorded the movements of Rover and other… pic.twitter.com/Sjd5K14hPl

    — ISRO (@isro) August 31, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಚಂದ್ರನ ಮೇಲ್ಮೈ ಸಂಶೋಧನೆಗೆ ಮೊದಲ ಆದ್ಯತೆ, ಬದುಕಿನ ಬಗ್ಗೆ ಯಾವುದೇ ಖಾತ್ರಿ ಇಲ್ಲ: ವಿಜ್ಞಾನಿ ವೆಂಕಟೇಶ್ವರನ್​

ರೋವರ್​ ಚಲನೆ ದಾಖಲು: ಲ್ಯಾಂಡರ್​ನಲ್ಲಿರುವ ಮತ್ತೊಂದು ಉಪಕರಣವು ರೋವರ್ ಚಲನೆಯ ಮಾಪನವನ್ನು ದಾಖಲಿಸಿದೆ. ಚಂದ್ರನಲ್ಲಿ ಭೂಕಂಪನ ಚಟುವಟಿಕೆಗಳನ್ನು ಅಧ್ಯಯನ ಮಾಡುವ ಐಎಲ್​ಎಸ್​ಎ (Instrument for the Lunar Seismic Activity - ILSA) ಚಂದ್ರನ ಮೇಲಿನ ಪ್ರಥಮ ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ತಂತ್ರಜ್ಞಾನ ಆಧಾರಿತ ಸಾಧನವಾಗಿದ್ದು, ಇದು ರೋವರ್ ಮತ್ತು ಇತರ ಪೇಲೋಡ್‌ಗಳ ಚಲನೆಯನ್ನು ದಾಖಲಿಸಿದೆ ಎಂದು ಇಸ್ರೋ ತಿಳಿಸಿದೆ. ಹೆಚ್ಚುವರಿಯಾಗಿ ಇದು ಆಗಸ್ಟ್ 26ರಂದು ಸಹಜವಾದ ಚಟುವಟಿಕೆಯನ್ನು ದಾಖಲಿಸಿದ್ದು, ಇದರ ಅವಲೋಕನ ನಡೆಯುತ್ತಿದೆ ಎಂದು ಹೇಳಿದೆ.

ಮತ್ತೊಂದೆಡೆ, ಸುರಕ್ಷಿತ ಮಾರ್ಗದ ಹುಡುಕಾಟದಲ್ಲಿ ರೋವರ್​ ತೊಡಗಿರುವ ವಿಡಿಯೋವನ್ನೂ ಇಸ್ರೋ ಗುರುವಾರ ಬಿಡುಗಡೆ ಮಾಡಿದೆ. ಲ್ಯಾಂಡರ್ ಇಮೇಜರ್ ಕ್ಯಾಮರಾದಿಂದ ರೋವರ್​ ಸಂಚಾರವನ್ನು ಸೆರೆಹಿಡಿಯಲಾಗಿದ್ದು, ''ಚಂದಿರನ ಅಂಗಳದಲ್ಲಿ ಮಗು ತಮಾಷೆಯಾಗಿ ಕುಣಿದಾಡುತ್ತಿದ್ದು, ಇದನ್ನು ತಾಯಿ ಪ್ರೀತಿಯಿಂದ ನೋಡುತ್ತಿರುವಂತೆ ಭಾಸವಾಗುತ್ತಿದೆ, ಅಲ್ಲವೇ?" ಎಂದು ಇಸ್ರೋ ಟ್ವೀಟ್​ ಮಾಡಿದೆ.

ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಗಗನನೌಕೆಯನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಉಡಾಯಿಸಿದ್ದರು. ಇದಾದ 41 ದಿನಗಳ ನಂತರ ಎಂದರೆ, ಆಗಸ್ಟ್​ ​23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸಿದ್ದಾರೆ. ಲ್ಯಾಂಡರ್ ಹಾಗೂ ರೋವರ್​ ವೈಜ್ಞಾನಿಕ ಅಧ್ಯಯನಗಳನ್ನು​ ನಡೆಸುತ್ತಿವೆ.

ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್ ಪತ್ತೆ ಹಚ್ಚಿದ ಪ್ರಜ್ಞಾನ್​ ರೋವರ್.. ಹೈಡ್ರೋಜನ್​ಗಾಗಿ ಹುಡುಕಾಟ - ಇಸ್ರೋ ಹೊಸ ಮಾಹಿತಿ

Last Updated : Aug 31, 2023, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.