ETV Bharat / bharat

ಸ್ನೂಪಿಂಗ್ ಕೇಸ್: ಮನೀಶ್ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಎಫ್‌ಐಆರ್ ದಾಖಲಿಸಿದ ಸಿಬಿಐ

author img

By

Published : Mar 16, 2023, 4:20 PM IST

ಸ್ನೂಪಿಂಗ್ ಕೇಸ್​ನಲ್ಲಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿ ಹಲವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

cbi-books-sisodia-in-case-connected-to-delhi-govts-feedback-unit
ಸ್ನೂಪಿಂಗ್ ಕೇಸ್: ಮನೀಶ್ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಎಫ್‌ಐಆರ್ ದಾಖಲಿಸಿದ ಸಿಬಿಐ

ನವದೆಹಲಿ: ಆಮ್​ ಆದ್ಮಿ ಪಕ್ಷದ ಮುಖಂಡ, ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೆಹಲಿ ಸರ್ಕಾರದ ಫೀಡ್‌ಬ್ಯಾಕ್‌ ಯೂನಿಟ್‌ (Feedback Unit -FBU) ರಾಜಕೀಯವಾಗಿ ಸ್ನೂಪಿಂಗ್ ನಡೆಸುತ್ತಿದೆ ಎಂಬ ಆರೋಪದಡಿ ಮನೀಶ್ ಸಿಸೋಡಿಯಾ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಡಿ ಡಿಸಿಎಂ ಸಿಸೋಡಿಯಾ, ಈ ಹಿಂದೆ ವಿಜಿಲೆನ್ಸ್ ಕಾರ್ಯದರ್ಶಿಯಾಗಿದ್ದ 1992ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಸುಕೇಶ್ ಕುಮಾರ್ ಜೈನ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರ ವಿಶೇಷ ಸಲಹೆಗಾರ ಮತ್ತು ಎಫ್‌ಬಿಯು ಜಂಟಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಸಿಐಎಸ್‌ಎಫ್ ಡಿಐಜಿ ರಾಕೇಶ್ ಕುಮಾರ್ ಸಿನ್ಹಾ ವಿರುದ್ಧ ತನಿಖಾ ಸಂಸ್ಥೆ ಪ್ರಕರಣ ದಾಖಲಿಸಿದೆ.

ಅಲ್ಲದೇ, ಇಂಟೆಲಿಜೆನ್ಸ್ ಬ್ಯೂರೋದ ಮಾಜಿ ಜಂಟಿ ಉಪ ನಿರ್ದೇಶಕ ಪ್ರದೀಪ್ ಕುಮಾರ್ ಪುಂಜ್, ಫೀಡ್‌ಬ್ಯಾಕ್‌ ಯೂನಿಟ್​ನ ಉಪ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸಿಐಎಸ್‌ಎಫ್‌ನ ನಿವೃತ್ತ ಸಹಾಯಕ ಕಮಾಂಡೆಂಟ್ ಸತೀಶ್ ಖೇತ್ರಪಾಲ್ ಮತ್ತು ಕೇಜ್ರಿವಾಲ್‌ ಅವರ ಭ್ರಷ್ಟಾಚಾರ ವಿರೋಧಿ ಸಲಹೆಗಾರರಾಗಿದ್ದ ಗೋಪಾಲ್ ಮೋಹನ್ ವಿರುದ್ಧವೂ ಸಿಬಿಐ ಕೇಸ್​ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ: ಇಂದು ಇಡಿ ವಿಚಾರಣೆಗೆ ಹಾಜರಾಗದ ಕೆಸಿಆರ್​ ಪುತ್ರಿ ಕವಿತಾ

ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (Government of National Capital Territory of Delhi - GNCTD) ಸರ್ಕಾರದ ವ್ಯಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳು, ಸಂಸ್ಥೆಗಳು ಹಾಗೂ ಘಟಕಗಳ ಕಾರ್ಯನಿರ್ವಹಣೆಯ ಕುರಿತು ಸಂಬಂಧಿತ ಮಾಹಿತಿ ಮತ್ತು ಕ್ರಿಯೆಯ ಪ್ರತಿಕ್ರಿಯೆಯನ್ನು ಸಂಗ್ರಹಿಸಲು 2015ರಲ್ಲಿ ಫೀಡ್‌ಬ್ಯಾಕ್‌ ಯೂನಿಟ್​ನನ್ನು ಆಪ್​​ ಸ್ಥಾಪಿಸಲು ಪ್ರಸ್ತಾಪಿಸಿತ್ತು. 2016ರಲ್ಲಿ ಇದು ಕಾರ್ಯನಿರ್ವಹಿಸಲು ಪ್ರಾರಂಭಿಸಿತ್ತು. ಅಲ್ಲದೇ, ಟ್ರ್ಯಾಪ್ ಕೇಸ್​ಗಳನ್ನೂ ಈ ಯೂನಿಟ್​ ಮಾಡಿದ್ದು, ರಹಸ್ಯ ಸೇವಾ ವೆಚ್ಚಕ್ಕಾಗಿ 1 ಕೋಟಿ ರೂ. ಒದಗಿಸಲಾಗಿತ್ತು ಎಂದು ಸಿಬಿಐ ಹೇಳಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2015ರಲ್ಲಿ ನಡೆದ ಸಂಪುಟ ಸಭೆಯಲ್ಲಿ ಇದರ ಪ್ರಸ್ತಾವನೆಯನ್ನು ಮಂಡಿಸಿದ್ದರು. ಆದರೆ, ಈ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡಿಲ್ಲ. ಫೀಡ್‌ಬ್ಯಾಕ್‌ ಯೂನಿಟ್​ನಲ್ಲಿನ ನೇಮಕಾತಿಗಳಿಗೆ ಲೆಫ್ಟಿನೆಂಟ್ ಗವರ್ನರ್‌ ಅವರಿಂದಲೂ ಯಾವುದೇ ಅನುಮತಿಯನ್ನು ತೆಗೆದುಕೊಂಡಿರಲಿಲ್ಲ ಎಂದು ಕೇಂದ್ರೀಯ ತನಿಖಾ ದಳ ಆರೋಪಿಸಿದೆ.

ಮುಂದುವರೆದು, ಫೀಡ್‌ಬ್ಯಾಕ್‌ ಯೂನಿಟ್​ ಕಡ್ಡಾಯ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ರಾಜಕೀಯ ಗುಪ್ತಚರದ ವಿವಿಧ ವಿಷಯಗಳನ್ನು ಸಂಗ್ರಹಿಸಿದೆ ಎಂದು ಸಿಬಿಐ ತನ್ನ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದೆ. ಇದಲ್ಲಿನ ಅಕ್ರಮಗಳನ್ನು ಪತ್ತೆ ಹಚ್ಚಿದ ದೆಹಲಿ ಸರ್ಕಾರದ ವಿಜಿಲೆನ್ಸ್ ಇಲಾಖೆಯ ಉಲ್ಲೇಖದ ಮೇರೆಗೆ ಸಿಬಿಐ ಕೇಸ್​ ದಾಖಲಿಸಿದೆ. ಇನ್ನು, ದೆಹಲಿ ಮದ್ಯ ನೀತಿ ಹಗರಣದಲ್ಲಿ ಈಗಾಗಲೇ ಮನೀಶ್ ಸಿಸೋಡಿಯಾ ಜೈಲು ಸೇರಿದ್ದು, ಈ ಪ್ರಕರಣದ ಬಗ್ಗೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಅಬಕಾರಿ ಹಗರಣ.. ಸಿಬಿಐ ಅಧಿಕಾರಿಗಳಿಂದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.