ETV Bharat / bharat

ದೆಹಲಿ ಮದ್ಯ ನೀತಿ ಹಗರಣ: ಇಂದು ಇಡಿ ವಿಚಾರಣೆಗೆ ಹಾಜರಾಗದ ಕೆಸಿಆರ್​ ಪುತ್ರಿ ಕವಿತಾ

author img

By

Published : Mar 16, 2023, 3:46 PM IST

ದೆಹಲಿ ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇಡಿ ವಿಚಾರಣೆಗೆ ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿ ಕವಿತಾ ಹಾಜರಾಗಿಲ್ಲ.

brs-leader-kavitha-skips-ed-summons-in-delhi-excise-policy-case
ದೆಹಲಿ ಮದ್ಯ ನೀತಿ ಹಗರಣ: ಇಂದು ಇಡಿ ವಿಚಾರಣೆಗೆ ಹಾಜರಾಗದ ಕೆಸಿಆರ್​ ಪುತ್ರಿ ಕವಿತಾ

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರಿ, ಬಿಆರ್​​ಎಸ್​ ಪಕ್ಷದ ವಿಧಾನ ಪರಿಷತ್​ ಸದಸ್ಯೆ ಕವಿತಾ ಇಂದು ಜಾರಿ ನಿರ್ದೇಶನಾಲಯ (ಇಡಿ)ದ ವಿಚಾರಣೆಗೆ ಹಾಜರಾಗಿಲ್ಲ. ದೆಹಲಿ ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳ ಮುಂದೆ ಇಂದು ಕವಿತಾ ಹಾಜರಾಗಬೇಕಿತ್ತು. ಆದರೆ, ಆರೋಗ್ಯದ ಕಾರಣದಿಂದ ಹಾಜರಾಗಲು ಸಾಧ್ಯವಿಲ್ಲ ಎಂದು ಬಿಆರ್​​ಎಸ್​ ನಾಯಕಿ ಇಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಹೊಸ ಮದ್ಯ ನೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ ಅಕ್ರಮ ನಡೆದಿರುವ ಆರೋಪಗಳು ಕೇಳಿ ಬಂದಿವೆ. ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿಯಾಗಿರುವ ಕವಿತಾ ಕಿಕ್​ಬ್ಯಾಕ್​ ಪಡೆದ ಆರೋಪ ಎದುರಿಸುತ್ತಿದ್ದಾರೆ. ಮದ್ಯ ನೀತಿಯ ವಂಚನೆಯ ಸಮಯದಲ್ಲಿ ಬಿಆರ್‌ಎಸ್ ನಾಯಕಿ ಕವಿತಾ ಅನೇಕ ಮೊಬೈಲ್ ಫೋನ್‌ ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಅಲ್ಲದೇ, ಕವಿತಾ ಬೇನಾಮಿ ಸಂಸ್ಥೆ ಹೊಂದಿದ್ದಾರೆ ಎಂಬ ಆರೋಪವೂ ಇದೆ. ಇದರ ಸಂಬಂಧ ಹೈದರಾಬಾದ್​ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಎಂಬುವರನ್ನು ಇಡಿ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ.

ಇದೀಗ ಈ ಹಗರಣಕ್ಕೆ ಸಂಬಂಧಿಸಿದ ವಹಿವಾಟುಗಳ ಬಗ್ಗೆ ಕವಿತಾ ಅವರನ್ನು ತನಿಖಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಮಾರ್ಚ್ 11ರಂದು ಒಂಬತ್ತು ಗಂಟೆಗಳ ಕಾಲ ಕವಿತಾ ಇಡಿ ವಿಚಾರಣೆ ಎದುರಿಸಿದ್ದರು. ಅಲ್ಲದೇ, ಇಂದು ಕೂಡ ಇಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಇಂದಿನ ವಿಚಾರಣೆಯಿಂದ ಅವರು ದೂರ ಉಳಿದಿದ್ದಾರೆ.

ಕಾರಣವೇನು?: ಅನಾರೋಗ್ಯದ ಕಾರಣ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಇರುವ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಇಡಿ ಅಧಿಕಾರಿಗಳಿಗೆ ಕವಿತಾ ಮೇಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇಡಿ ಮುಂದೆ ಮುಂದೆ ಇನ್ನೊಂದು ದಿನ ವಿಚಾರಣೆಗೆ ಹಾಜರಾಗುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ತಮ್ಮ ನಿವಾಸಕ್ಕೆ ಬಂದು ಅಧಿಕಾರಿಗಳು ತನಿಖೆ ನಡೆಸಬೇಕೆಂದು ವಕೀಲರ ಮೂಲಕ ಕೇಳಿಕೊಂಡಿದ್ದಾರೆ. ಇಡಿ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ತಮ್ಮ ವಕೀಲ ಭರತ್ ಮೂಲಕ ಕವಿತಾ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾ.20ಕ್ಕೆ ಹಾಜರಾಗುವಂತೆ ನೋಟಿಸ್​: ಇದರ ನಡುವೆ ಇಡಿ ಅಧಿಕಾರಿಗಳು ಮತ್ತೊಂದು ನೋಟಿಸ್​ಅನ್ನು ಕವಿತಾ ಅವರಿಗೆ ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ. ಇದೇ ಮಾರ್ಚ್​ 20ರಂದು ವಿಚಾರಣೆಗೆ ಹಾಜರಾಗಬೇಕೆಂದು ಇಡಿ ನೋಟಿಸ್​ನಲ್ಲಿ ತಿಳಿಸಲಾಗಿದೆ. ಮತ್ತೊಂದೆಡೆ, ಕವಿತಾ ಪರ ವಕೀಲರು ಜಾರಿ ನಿರ್ದೇಶನಾಲಯದ ಸಮನ್ಸ್‌ನಿಂದ ಮುಕ್ತಿ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಸೆಕ್ಷನ್ 160ರ ನಿಬಂಧನೆಗಳ ವಿರುದ್ಧ ಖುದ್ದು ಹಾಜರಾಗುವಂತೆ ಇಡಿ ನೀಡಿರುವ ಸಮನ್ಸ್​ ರದ್ದುಗೊಳಿಸಬೇಕೆಂದು ಕವಿತಾ ಅರ್ಜಿಯಲ್ಲಿ ಕೋರಿದ್ದಾರೆ.

ಬುಧವಾರ ಈ ಅರ್ಜಿಯನ್ನು ಆಲಿಸುವಂತೆ ನ್ಯಾಯಾಲಯಕ್ಕೆ ವಕೀಲರು ಮನವಿ ಮಾಡಿದ್ದರು. ಕವಿತಾ ಅವರಿಗೆ ಅಧಿಕಾರಿಗಳು ಚಿತ್ರಹಿಂಸೆ ನೀಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದ ವಕೀಲರು, ಅವರ ವಿರುದ್ಧ ಇಡಿ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು. ಈ ಮನವಿಯನ್ನು ಆಲಿಸಿದ್ದ ಸುಪ್ರೀಂಕೋರ್ಟ್​​ ಕವಿತಾ ಅರ್ಜಿ ವಿಚಾರಣೆಯನ್ನು ಮಾರ್ಚ್​ 24ಕ್ಕೆ ನಿಗದಿ ಮಾಡಿದೆ.

ದೆಹಲಿಯಲ್ಲಿ ಬಿಆರ್​​ಎಸ್ ದಂಡು: ಸದ್ಯ ಕವಿತಾಳ ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಇದ್ದಾರೆ. ತೆಲಂಗಾಣದ ಸಚಿವರಾದ ಕೆಟಿಆರ್, ಹರೀಶ್ ರಾವ್, ದಯಾಕರ್ ರಾವ್, ಶ್ರೀನಿವಾಸ್ ಗೌಡ್, ಸತ್ಯವತಿ ರಾಥೋಡ್ ಸೇರಿದಂತೆ ಬಿಆರ್‌ಎಸ್ ಪಕ್ಷದ ಹಲವು ನಾಯಕರು ದೆಹಲಿಗೆ ತೆರಳಿದ್ದಾರೆ.

ಇದನ್ನೂ ಓದಿ: ಕೆಸಿಆರ್​ ಪುತ್ರಿ ಕವಿತಾಗೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂ ನಕಾರ: ನಾಳೆ ಇಡಿ ಅಧಿಕಾರಿಗಳಿಂದ ಮತ್ತೆ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.