ETV Bharat / bharat

ಭಾರತ - ಪಾಕಿಸ್ತಾನ ಗಡಿಯಲ್ಲಿ ಬಿಎಸ್​ಎಫ್​ ಪಡೆಯಿಂದ 'ಆಪರೇಷನ್​ ಸರ್ದ್​ ಹವಾ'

author img

By ETV Bharat Karnataka Team

Published : Jan 16, 2024, 10:28 PM IST

ಗಣರಾಜ್ಯೋತ್ಸವ ಮತ್ತು ರಾಮಮಂದಿರ ಉದ್ಘಾಟನೆಗೆ ಭಯೋತ್ಪಾದನೆ ಭೀತಿ ಹಿನ್ನೆಲೆ ದೇಶದ ಗಡಿಯಲ್ಲಿ ಸೇನಾ ಭದ್ರತೆ ಹೆಚ್ಚಿಸಲಾಗಿದೆ.

ಆಪರೇಷನ್​ ಸರ್ದ್​ ಹವಾ
ಆಪರೇಷನ್​ ಸರ್ದ್​ ಹವಾ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳು ನಡೆಯದಂತೆ ತಡೆಯಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) 'ಆಪರೇಷನ್ ಸರ್ದ್ ಹವಾ' ಎಂಬ ಕಾರ್ಯಾಚರಣೆ ಆರಂಭಿಸಿದೆ. ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಗುಜರಾತ್ ಮತ್ತು ರಾಜಸ್ಥಾನದಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ.

ಗುಪ್ತಚರ ವರದಿ ಮಾಹಿತಿಯ ಪ್ರಕಾರ, ಜನವರಿ 26 ರ ಮೊದಲು ಭಾರತ-ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದಕ ಬೆದರಿಕೆಗಳು ಬಂದಿವೆ. ಪಾಕಿಸ್ತಾನ ಸೇನೆ ಮತ್ತು ಐಎಸ್​ಐ ಭಯೋತ್ಪಾದಕರಿಗೆ ನೆರವು ನೀಡಿ, ಅವರನ್ನು ದೇಶದ ಗಡಿಯೊಳಕ್ಕೆ ನುಗ್ಗಿಸಲು ಸಂಚು ರೂಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಲು ವಿದೇಶಿ ಭಯೋತ್ಪಾದಕರಿಗೆ ಲಾಂಚ್ ಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ.

ಹೀಗಾಗಿ ಗಡಿ ರಾಜ್ಯಗಳಲ್ಲಿ ಎಚ್ಚರಿಕೆ ರವಾನಿಸಲಾಗಿದೆ. ಗಣರಾಜ್ಯೋತ್ಸವದ 10 ದಿನಗಳ ಮುಂಚಿತವಾಗಿಯೇ ತೀವ್ರ ನಿಗಾ ವಹಿಸಲಾಗಿದೆ. ಇದರ ಜೊತೆಗೆ ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠಾಪನೆಯೂ ನಡೆಯಲಿದೆ. ಗಣರಾಜ್ಯೋತ್ಸವದ 15 ದಿನಗಳ ಮುಂಚಿತವಾಗಿಯೇ ಎಚ್ಚರಿಕೆಯನ್ನು ನೀಡಲಾಗಿತ್ತು ಎಂದು ಸೇನಾ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

ಚೀನಾ ನಿರ್ಮಿತ ಡ್ರೋನ್‌ಗಳನ್ನು ಬಳಸಿ ಪಾಕಿಸ್ತಾನ ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಅಕ್ರಮವಾಗಿ ರವಾನೆ ಮಾಡುತ್ತಿದೆ. ಪಾಕಿಸ್ತಾನದ ಗುಪ್ತಚರ ದಳವಾದ ಐಎಸ್‌ಐ ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡುತ್ತಿದೆ. ಭಾರತ-ಪಾಕಿಸ್ತಾನ ಗಡಿಯಾದ ಅಟ್ಟಾರಿ, ಕರ್ತಾರ್‌ಪುರ ಕಾರಿಡಾರ್ ಮತ್ತು ಹುಸೇನಿವಾಲಾ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಯೋತ್ಪಾದಕರ ಒಳನುಸುಳುವಿಕೆ ಹೆಚ್ಚುತ್ತಿರುವ ಜಮ್ಮು ಮತ್ತು ಪಂಜಾಬ್‌ನ ನದಿ ಪ್ರದೇಶಗಳ ಸುತ್ತಲೂ ಬಿಎಸ್‌ಎಫ್ ಯೋಧರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಭದ್ರತಾ ಉಲ್ಲಂಘನೆ ಅಥವಾ ಭಯೋತ್ಪಾದಕ ದಾಳಿಯನ್ನು ತಡೆಯಲು ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಪಂಜಾಬ್​ನಲ್ಲಿನ ನದಿ ಪ್ರದೇಶಗಳಲ್ಲೂ ಇದೇ ರೀತಿಯ ಜಾಗರೂಕತೆಯನ್ನು ವಹಿಸಲಾಗಿದೆ. ಗುಜರಾತ್ ಮೂಲಕ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಒಳನುಸುಳಬಹುದು ಎಂದು ಗುಪ್ತಚರ ಮಾಹಿತಿ ಬಂದಿದೆ. ಇದರ ನಂತರ ಬಿಎಸ್‌ಎಫ್ ಪಡೆಯ ಆಲ್ ಟೆರೈನ್ ವೆಹಿಕಲ್ಸ್ (ಎಟಿವಿ) ಗಸ್ತು ಪಡೆಯನ್ನು ಗುಜರಾತ್‌ನಲ್ಲಿ ನಿಯೋಜಿಸಲಾಗಿದೆ.

ಅಪಘಾತದಲ್ಲಿ ಯೋಧ ಸಾವು: ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಗಡಿ ಪ್ರದೇಶದ ಕಸ್ಸಾಲಿಯನ್‌ನಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿ ಓರ್ವ ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಇನ್ನೊಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ. ಸೇನಾ ವಾಹನ ಸಾಗುತ್ತಿದ್ದಾಗ ಆಯತಪ್ಪಿ ದೊಡ್ಡ ಕಂದಕಕ್ಕೆ ಬಿದ್ದಿದೆ. ಇದರಿಂದ ಸ್ಥಳದಲ್ಲೇ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆ ಮಟ್ಟಹಾಕಲು ಭಾರತೀಯ ಸೇನೆಯಿಂದ 'ಆಪರೇಷನ್​ ಸರ್ವಶಕ್ತಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.