ETV Bharat / bharat

'ಕೇರಳದಲ್ಲಿ ಬಿಜೆಪಿ ಸೇರಿದ ಕ್ರಿಶ್ಚಿಯನ್ನರ ಮೇಲೆ ದಾಳಿ'

author img

By PTI

Published : Jan 1, 2024, 9:45 AM IST

Updated : Jan 1, 2024, 11:52 AM IST

ಬಿಜೆಪಿ
ಬಿಜೆಪಿ

ಕಳೆದ ಎರಡು ದಿನಗಳ ಹಿಂದೆ ಕೇರಳದಲ್ಲಿ ಬಿಜೆಪಿ ಸೇರಿದ ಕ್ರಿಶ್ಚಿಯನ್ನರ ಸುಮಾರು 50 ಕುಟುಂಬಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ತಿರುವನಂತಪುರಂ(ಕೇರಳ): ಕೇರಳದಲ್ಲಿ ಇತ್ತೀಚೆಗೆ ಪಕ್ಷ ಸೇರ್ಪಡೆಗೊಂಡ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಕಾಂಗ್ರೆಸ್ ಮತ್ತು ಸಿಪಿಐ(ಎಂ) ಬೆಂಬಲಿಗರಿಂದ ಆನ್‌ಲೈನ್ ದಾಳಿಗಳನ್ನು ಎದುರಿಸುತ್ತಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ. ಕ್ರಿಶ್ಚಿಯನ್ ಪಾದ್ರಿ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಸುಮಾರು 50 ಕುಟುಂಬಗಳು ಬಿಜೆಪಿ ಸೇರಿದ ಒಂದು ದಿನದ ನಂತರ ಇಂತಹ ಆರೋಪ ಕೇಳಿಬಂದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, "ಬಿಜೆಪಿ ಸೇರಿದಾಗಿನಿಂದ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ. ನಾವು ಯಾವುದೇ ಬೆಲೆ ತೆತ್ತಾದರೂ ಅವರನ್ನು ರಕ್ಷಿಸುತ್ತೇವೆ. ಈ ಅಲ್ಪಸಂಖ್ಯಾತ ಸಮುದಾಯಕ್ಕೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.

"ಬಿಜೆಪಿ ಸೇರ್ಪಡೆಗೊಂಡ ಅರ್ಚಕರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದವರಿಗೆ ಬೆದರಿಕೆ ಹಾಕಲಾಗುತ್ತಿದೆ. ವಿವಿಧ ವಿಧಾನಗಳ ಮೂಲಕ ವೈಯಕ್ತಿಕವಾಗಿ ಅವರನ್ನು ಅವಮಾನಿಸಲು ಮತ್ತು ಆಕ್ರಮಣ ಮಾಡಲು ಪ್ರಯತ್ನಿಸಿದರೆ ತೀವ್ರ ಸ್ವರೂಪದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಅವರು ಎಚ್ಚರಿಕೆ ನೀಡಿದರು.

ದಕ್ಷಿಣ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಆರ್ಥೊಡಾಕ್ಸ್ ಚರ್ಚ್ ನಿಲಕ್ಕಲ್ ಭದ್ರಾಸನಂನ ಕಾರ್ಯದರ್ಶಿ ಫಾದರ್ ಶೈಜು ಕುರಿಯನ್ ಸೇರಿದಂತೆ ಸುಮಾರು ಐವತ್ತು ಕ್ರಿಶ್ಚಿಯನ್ ಕುಟುಂಬಗಳು ಶನಿವಾರ ಕೇಂದ್ರ ಸಚಿವ ವಿ.ಮುರಳೀಧರನ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡವು. ಹಾಗೆಯೇ, ಶನಿವಾರ ಮಧ್ಯ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಕೇರಳ ಕಾಂಗ್ರೆಸ್ (ಜೇಕಬ್) ಬಣದ ಅನೇಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಾಯಕತ್ವದಲ್ಲಿ ಅಭಿವೃದ್ಧಿ ದೃಷ್ಟಿಕೋನದಿಂದ ಅಲ್ಪಸಂಖ್ಯಾತರು ಬಿಜೆಪಿಗೆ ಸೇರಿದ್ದಾರೆ. ಕಳೆದ ದಶಕದಲ್ಲಿ ಮೋದಿ ಸರ್ಕಾರವು ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿದೆ. ಇದು ಅಲ್ಪಸಂಖ್ಯಾತರನ್ನು ಬೆಂಬಲಿಸಲು ಮತ್ತು ಬಿಜೆಪಿಗೆ ಸೇರಲು ಪ್ರೇರೇಪಿಸುವಲ್ಲಿ ಮಹತ್ವದ ಅಂಶವಾಗಿದೆ. ಸುಳ್ಳು ಪ್ರಚಾರದಿಂದ ಅಲ್ಪಸಂಖ್ಯಾತರನ್ನು ಪಕ್ಷದಿಂದ ದೂರವಿಡಬಹುದು ಎಂಬ ಕಲ್ಪನೆಯನ್ನು ಬಿಜೆಪಿ ಹೊರಹಾಕುತ್ತಿದೆ" ಎಂದು ಬಿಜೆಪಿ ಹೇಳಿದೆ.

ಕೇಸರಿ ಪಕ್ಷವು ತನ್ನ 'ಸ್ನೇಹ ಯಾತ್ರೆ' ಅನ್ನು ಪುನರಾರಂಭಿಸಿದ ಸ್ವಲ್ಪ ಸಮಯದ ನಂತರ ಈ ಬೆಳವಣಿಗೆ ಕಂಡುಬಂದಿದೆ. 'ಸ್ನೇಹ ಯಾತ್ರೆಯಂತಹ ಕಾರ್ಯಕ್ರಮಗಳ ಮೂಲಕ ಅಲ್ಪಸಂಖ್ಯಾತರಲ್ಲಿರುವ ತಪ್ಪು ಕಲ್ಪನೆಗಳನ್ನು ಬಿಜೆಪಿ ಹೋಗಲಾಡಿಸಲು ಪ್ರಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ರಾಜಕಾರಣದ ಭಾಗವಾಗಲು ಇನ್ನಷ್ಟು ಮಂದಿ ಬಿಜೆಪಿ ಸೇರುವುದು ಖಚಿತ' ಎಂದು ಪಕ್ಷ ತಿಳಿಸಿದೆ.

ಇದನ್ನೂ ಓದಿ: 'ಉತ್ತಮ ಶಿಕ್ಷಣ, ಉಚಿತ ಚಿಕಿತ್ಸೆ ಬಗ್ಗೆ ಮಾತನಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ'

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, "ಸಂಘ ಪರಿವಾರವು ಭಾರತದಾದ್ಯಂತ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ಚಳವಳಿ ಪ್ರಾರಂಭಿಸಿದೆ" ಎಂದು ಆರೋಪಿಸಿದೆ. ಕೊಚ್ಚಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, "ಕೇರಳದ ಬಿಜೆಪಿಯು ಕುರಿಗಳ ರೀತಿ ಬಟ್ಟೆತೊಟ್ಟ ತೋಳದಂತೆ ಕ್ರಿಶ್ಚಿಯನ್ನರ ಮನೆಗಳಿಗೆ ನುಸುಳುತ್ತಿದೆ. ಆದರೆ, ಕೇರಳದ ಕ್ರಿಶ್ಚಿಯನ್ನರು ತಮ್ಮ ನಿಜವಾದ ಉದ್ದೇಶಗಳನ್ನು ಗುರುತಿಸುವ ಬುದ್ಧಿವಂತಿಕೆ ಹೊಂದಿದ್ದಾರೆ. ಕಾಂಗ್ರೆಸ್ ಜಾತ್ಯತೀತ ನಿಲುವು ಹೊಂದಿದೆ" ಎಂದು ಹೇಳಿದರು.

Last Updated :Jan 1, 2024, 11:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.