ETV Bharat / bharat

ಬಿಹಾರದಲ್ಲಿ ಸವಾಲಾಗುತ್ತಿದೆ ಕ್ಯಾಚ್ ಮ್ಯಾರೇಜ್ : ಇಲ್ಲಿದೆ ಸಂಪೂರ್ಣ ವಿವರ!

author img

By

Published : Feb 4, 2022, 5:00 PM IST

Updated : Feb 4, 2022, 5:50 PM IST

ಬಿಹಾರದಲ್ಲಿ ಬಲವಂತದ ಮದುವೆ ಪ್ರಕರಣ ಹೆಚ್ಚಾಗಲು ಕಾರಣ ಅಲ್ಲಿನ ಬಡತನ ಮತ್ತು ವರದಕ್ಷಿಣೆ ಸಮಸ್ಯೆಗಳು ಎನ್ನುತ್ತಾರೆ ತಜ್ಞರು. ಬಲವಂತದ ಮದುವೆಯನ್ನು ಬೆಂಬಲಿಸುವ ಒಂದು ವರ್ಗವೂ ಅಲ್ಲಿದೆ..

big-challenge-of-pakadua-vivaah-in-bihar
ಬಿಹಾರದಲ್ಲಿ ಸವಾಲಾಗುತ್ತಿದೆ ಕ್ಯಾಚ್ ಮ್ಯಾರೇಜ್: ಮನೆಯಿಂದ ಹೊರಗೆ ತೆರಳಲು ಯುವಕರಿಗೆ ಭಯ!

ಪಾಟ್ನಾ,ಬಿಹಾರ : ಬಿಹಾರದಲ್ಲಿ ಕ್ಯಾಚ್ ಮ್ಯಾರೇಜ್ ಅಥವಾ ಬಲವಂತದ ವಿವಾಹ ಸಮಸ್ಯೆಯಾಗಿ ಕಾಡುತ್ತಿದೆ. ಬಿಹಾರದ ಉತ್ತರ ಭಾಗದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಪ್ರತಿ ವರ್ಷಕ್ಕೆ ಸುಮಾರು 3 ಸಾವಿರ ಪ್ರಕರಣ ದಾಖಲಾಗಿವೆ.

ಮೊಕಾಮಾ, ಪಂಡರಕ್, ಬರ್ಹ್, ಭಕ್ತಿಯಾರ್ಪುರ್ ಮತ್ತು ಖಗರಿಯಾ ನಗರಗಳಲ್ಲಿ ಇಂತಹ ವಿವಾಹಗಳು ಹೆಚ್ಚಾಗಿ ನಡೆಯುತ್ತವೆ. ಕೆಲವು ಪ್ರಕರಣಗಳಲ್ಲಿ ಶ್ರೀಮಂತ ಕುಟುಂಬದ ಯುವಕನನ್ನು ಅಪಹರಿಸಿ, ಬೇರೊಂದು ಯುವತಿಯೊಂದಿಗೆ ವಿವಾಹ ಮಾಡಿಸಲಾಗುತ್ತದೆ. ಈ ವಿವಾಹವನ್ನು ವಿರೋಧಿಸಿದರೆ, ಅಂತಹ ಯುವಕರನ್ನು ಅನೇಕ ಬಾರಿ ಥಳಿಸಲಾಗಿದೆ.

ಇವು ಕ್ಯಾಚ್‌ ಮ್ಯಾರೇಜ್‌ಗಳು :

1.ಜನವರಿ 30ರಂದು ಸಮಸ್ತಿಪುರದ ಯುವಕನೊಬ್ಬ ತನ್ನ ಅತ್ತಿಗೆಯ ಮನೆಗೆ ಹೋಗಿದ್ದನು. ಅಲ್ಲಿ ಆತನಿಗೆ ಬಲವಂತವಾಗಿ ವಿವಾಹ ಮಾಡಲಾಗಿತ್ತು. ಅವನ ಸೋದರ ಮಾವನ ಸಹೋದರಿಯನ್ನೇ ಈತನಿಗೆ ಬಲವಂತವಾಗಿ ಮದುವೆ ಮಾಡಲಾಗಿತ್ತು.

2.ಜನವರಿ 29ರಂದು ಯುವಕನೊಬ್ಬ ತನ್ನ ಗೆಳತಿಯನ್ನು ಬೇಗುಸರಾಯ್‌ನಲ್ಲಿ ಭೇಟಿಯಾಗಲು ಹೋಗಿದ್ದಾಗ ಸ್ಥಳೀಯರು ಆತನಿಗೆ ಬಲವಂತವಾಗಿ ವಿವಾಹ ಮಾಡಿದ್ದರು. ಹುಡುಗಿಗೆ ಏನಾದರೂ ಕಷ್ಟ ಕೊಟ್ಟರೆ, ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದರು.

3.2021ರಲ್ಲಿ ಛತ್ ಪೂಜೆ ಸಮಯದಲ್ಲಿ ಯುವಕನೊಬ್ಬ ಪ್ರಸಾದ ನೀಡಲು ತನ್ನ ಸಹೋದರಿಯ ಮನೆಗೆ ತೆರಳಿದ್ದನು. ಈ ವೇಳೆ ಆತನ ಸಂಬಂಧಿಕರು, ಅವನಿಗೆ ಬಲವಂತದ ಮದುವೆ ಮಾಡಿದ್ದರು.

4.ನಾವಡಾ ನಗರದಲ್ಲಿ ಮದುವೆಗೆ ತೆರಳಿದ್ದ ಯುವಕನನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಆತನನ್ನು ಥಳಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲೇ ಮದುವೆ ಮಾಡಲಾಗಿತ್ತು. ಅವನಿಗೆ ಪ್ರಜ್ಞೆ ಬಂದಾಗ ಆಸ್ಪತ್ರೆಯಲ್ಲಿದ್ದನು. ಸಂಬಂಧಿಗಳೇ ಆತನಿಗೆ ವಿವಾಹ ಮಾಡಿದ್ದರೆಂಬ ಆರೋಪವಿದ್ದು, 2019ರಲ್ಲಿ ಈ ಪ್ರಕರಣ ನಡೆದಿತ್ತು.

ಬಿಹಾರದಲ್ಲಿ ಬಲವಂತದ ವಿವಾಹ

ಯುವಕರು ಮನೆಯಿಂದ ಹೊರ ಬರುತ್ತಿರಲಿಲ್ಲ : ಬಹುತೇಕ ಪ್ರಕರಣಗಳಲ್ಲಿ ಯುವಕರನ್ನು ಆಯುಧಗಳಿಂದ ಬೆದರಿಸಲಾಗಿದೆ. 1970ರಿಂದ 1990ರೊಳಗೆ ಇಂತಹ ಮದುವೆ ಪ್ರಮಾಣ ಹೆಚ್ಚಿದ್ದವು. ಗ್ರಾಮದಲ್ಲಿ ಬ್ರಹ್ಮಚಾರಿಯೊಬ್ಬರು ಉದ್ಯೋಗದಲ್ಲಿದ್ದರೆ, ಆತ ಒಬ್ಬಂಟಿಯಾಗಿ ತಿರುಗಾಡಲು ಮತ್ತು ಸಂಬಂಧಿಕರ ಮನೆಗೆ ಹೋಗಿ ಬರಲೂ ಆತನ ಮನೆಯ ಸದಸ್ಯರು ಒಪ್ಪುತ್ತಿರಲಿಲ್ಲ. ಈ ಮೂಲಕ ಬಲವಂತದ ವಿವಾಹದ ಗಾಢತೆಯನ್ನು ನೀವು ಊಹಿಸಬಹುದು.

ವರ್ಷಕ್ಕೆ ಸರಾಸರಿ 3 ಸಾವಿರ ಕೇಸ್ : ಬಿಹಾರ ಪೊಲೀಸ್ ಪ್ರಧಾನ ಕಚೇರಿಯ ಅಂಕಿ-ಅಂಶಗಳ ಪ್ರಕಾರ, 2014ರಲ್ಲಿ 2,526 ಪ್ರಕರಣ ದಾಖಲಾಗಿವೆ. 2015ರಲ್ಲಿ 3 ಸಾವಿರ ಪ್ರಕರಣ, 2016ರಲ್ಲಿ 3,070 ಪ್ರಕರಣ, 2017ರಲ್ಲಿ ವಿವಾಹಕ್ಕಾಗಿ 3,405 ಅಪಹರಣ ಪ್ರಕರಣ ದಾಖಲಾಗಿವೆ. ಬಿಹಾರದಲ್ಲಿ ವರ್ಷಕ್ಕೆ ಸರಾಸರಿ ಮೂರು ಸಾವಿರ ಬಲವಂತದ ವಿವಾಹಗಳು ನಡೆಯುತ್ತವೆ.

ಇದನ್ನೂ ಓದಿ: ಪೋರ್ನ್​ ವಿಡಿಯೋ ದಂಧೆ : ಬಂಧನದಿಂದ ನಟಿ ಶೆರ್ಲಿನ್​ ಚೋಪ್ರಾಗೆ ಸುಪ್ರೀಂಕೋರ್ಟ್​​ ರಕ್ಷಣೆ

ಬೆಳ್ಳಿತೆರೆಯ ಮೇಲೆ ಬಲವಂತದ ವಿವಾಹ : 2010ರಲ್ಲಿ ಅಂತರ್ದ್ವಂದ್ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಯುವಕನನ್ನು ಅಪಹರಿಸಿ ವಿವಾಹ ಮಾಡಲು ಯತ್ನಿಸಲಾಗುತ್ತದೆ. ಆದರೆ, ಈ ಸಿನಿಮಾದಲ್ಲಿ ವಧು ಕೂಡ ವಿರೋಧ ವ್ಯಕ್ತಪಡಿಸುತ್ತಾಳೆ. ಸುಶೀಲ್ ರಾಜ್​ಪಾಲ್ ನಿರ್ದೇಶನದ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡ ಒಲಿದು ಬಂದಿತ್ತು.

ಬಲವಂತದ ಮದುವೆಗೆ ಕಾರಣ? : ಬಿಹಾರದಲ್ಲಿ ಬಲವಂತದ ಮದುವೆ ಪ್ರಕರಣಗಳು ಹೆಚ್ಚಾಗಲು ಕಾರಣ ಅಲ್ಲಿನ ಬಡತನ ಮತ್ತು ವರದಕ್ಷಿಣೆ ಸಮಸ್ಯೆಗಳು ಎನ್ನುತ್ತಾರೆ ತಜ್ಞರು. ತಮ್ಮ ಮನೆಯ ಹೆಣ್ಮಕ್ಕಳಿಗೆ ವಿವಾಹ ಮಾಡಲು ಹಣವಿಲ್ಲದ ಕಾರಣದಿಂದ ಇಂತಹ ಬಲವಂತದ ಮದುವೆಗಳನ್ನು ಅಲ್ಲಿನ ಜನರು ಮಾಡುತ್ತಾರೆ.

ಬಲವಂತದ ಮದುವೆಯನ್ನು ಬೆಂಬಲಿಸುವ ಒಂದು ವರ್ಗವೂ ಅಲ್ಲಿದೆ. ಅತ್ತೆಯ ಮನೆಯನ್ನು ತಲುಪಿದ ಯುವತಿಗೂ ಅಲ್ಲಿ ಕಷ್ಟಗಳು ಎದುರಾಗುತ್ತವೆ. ಸಾಮಾನ್ಯವಾಗಿ ಈ ವಿವಾಹಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ. ಅಲ್ಲಿಯೇ ಮುರಿದು ಬೀಳುವ ಸಾಧ್ಯತೆ ದಟ್ಟವಾಗಿರುತ್ತವೆ.

Last Updated : Feb 4, 2022, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.