ETV Bharat / bharat

ಕೇರಳದಲ್ಲಿ ಮತ್ತೊಂದು ಆನೆಯ ಕೊಲೆ... ಬೆಳಕಿಗೆ ಬಂತು ಅಮಾನವೀಯ ಘಟನೆ!

author img

By

Published : Jun 3, 2020, 5:23 PM IST

ಕೇರಳದಲ್ಲಿನ ಗರ್ಭಿಣಿ ಆನೆ ಕೊಲೆ ಪ್ರಕರಣ ದೇಶಾದ್ಯಂತ ತೀವ್ರ ಖಂಡನೆಗೆ ಗುರಿಯಾಗಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಆನೆ ಅದೇ ರೀತಿಯಲ್ಲಿ ಹತ್ಯೆಗೀಡಾಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

Pregnant elephant dies in Kerala, Silent Valley Forest  Pathanapuram, Pathanapuram forest range,  Kerala Forest Minister, ಕೇರಳದಲ್ಲಿ ಗರ್ಭಿಣಿ ಆನೆ ಸಾವು, ಕೇರಳದಲ್ಲಿ ಮತ್ತೊಂದು ಗರ್ಭಿಣಿ ಆನೆ ಸಾವು, ಕೇರಳದಲ್ಲಿ ಗರ್ಭಿಣಿ ಆನೆ ಸಾವು ಸುದ್ದಿ,
ಗರ್ಭಿಣಿ ಆನೆ ಕೊಲೆ

ಕೊಲ್ಲಂ(ಕೇರಳ): ಗರ್ಭಿಣಿ ಆನೆ ಕೊಲೆ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದರ ವಿರುದ್ಧ ಪ್ರಾಣಿ ಪ್ರಿಯರು ಧ್ವನಿ ಎತ್ತಿದ್ದು, ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದರ ಬೆನ್ನಲ್ಲೇ ಕೊಲ್ಲಂ ಜಿಲ್ಲೆಯಲ್ಲೂ ಅದೇ ರೀತಿಯ ಮತ್ತೊಂದು ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೆಣ್ಣಾನೆಯೊಂದು ತೀವ್ರ ರೀತಿಯ ಗಾಯಗಳಿಂದಾಗಿ ಮೃತಪಟ್ಟಿರುವ ವಿಚಾರ ತಡವಾಗಿ ತಿಳಿದುಬಂದಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಗರ್ಭಿಣಿ ಆನೆಗೆ ಕೆಲ ಕಿಡಿಗೇಡಿಗಳು ಪಟಾಕಿ ತುಂಬಿದ್ದ ಅನಾನಸ್​ ನೀಡಿದ್ದರಿಂದ ಅದು ಸ್ಫೋಟಗೊಂಡು ನೀರಿನಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿತ್ತು.

15 ವರ್ಷದ ಗರ್ಭಿಣಿ ಕಾಡಾನೆಯೊಂದು ಆಹಾರ ಹುಡುಕುತ್ತ ನಾಡಿಗೆ ಬಂದಿತ್ತು. ಗ್ರಾಮದ ಬೀದಿಗಳಲ್ಲಿ ಆನೆಯನ್ನು ನೋಡಿದ ಸ್ಥಳೀಯ ಕಿಡಿಗೇಡಿಗಳು ಅನಾನಸ್​​ನಲ್ಲಿ ಪಟಾಕಿಯನ್ನು ಆನೆಯ ಬಾಯಿಗಿಟ್ಟಿದ್ದಾರೆ. ಆನೆ ಈ ಅನಾನಸ್​ ಜಗಿದ ತಕ್ಷಣ ಅದು ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ಆನೆಯ ಬಾಯಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ನೋವು ತಾಳಲಾರದೆ ಅದು ತಕ್ಷಣವೇ ವೆಲ್ಲಿಯಾರ್​​ ನದಿಯಲ್ಲಿ ಹೋಗಿ ನಿಂತಿದ್ದು, ಅಲ್ಲೇ ಕೊನೆಯುಸಿರೆಳೆದಿತ್ತು. ಈ ಬಗ್ಗೆ ಮಲ್ಲಪ್ಪುರಂ ಜಿಲ್ಲೆಯ ಅರಣ್ಯಾಧಿಕಾರಿ ಮೋಹನನ್​​ ಕೃಷ್ಣನ್​​ ಎಂಬುವರು ಆನೆಯ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರವಾದ ಪೋಸ್ಟ್​​ ಹಾಕಿದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು.

ಈಗ ಕೊಲ್ಲಂ ಜಿಲ್ಲೆಯ ಪುನಾಲೂರ್ ವಿಭಾಗದ ಪಠಾಣಪುರಂ ಅರಣ್ಯ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಇದೇ ರೀತಿಯಲ್ಲಿ ಮತ್ತೊಂದು ಹೆಣ್ಣಾನೆಯೊಂದು ಕೊಲೆಯಾಗಿರುವುದಾಗಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನು ತಿನ್ನದಂತೆ ಹಲ್ಲುಗಳನ್ನು ಮುರಿದಿರುವ, ದೇಹದ ಮೇಲೆ ಗಾಯಗಳಾಗಿರುವ ಆನೆಯೊಂದು ಹಿಂಡಿನಿಂದ ದೂರವಾಗಿ ನರಳುತ್ತಿರುವುದು ಕಂಡುಬಂದಿತ್ತು. ಅದರ ಹತ್ತಿರ ಅರಣ್ಯಾಧಿಕಾರಿಗಳು ತೆರಳಿದಾಗ ಅದು ಮತ್ತೆ ಕಾಡಿಗೆ ಓಡಿ ಹೋಗಿತ್ತು. ಆದರೆ, ಮರುದಿನ ಆನೆಯನ್ನು ಮತ್ತೆ ತನ್ನ ಹಿಂಡಿನಿಂದ ದೂರವಿರಿಸಲಾಯಿತು. ಸರಿಯಾದ ಚಿಕಿತ್ಸೆ ನೀಡಲಾಯಿತು. ಆದರೆ ದುರದೃಷ್ಟವಶಾತ್ ಅದು ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಈ ಮಧ್ಯೆ ಆನೆಗಳ ದುರಂತ ಸಾವಿನ ಬಗ್ಗೆ ಅರಣ್ಯಾಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದು ಅರಣ್ಯ ಸಚಿವ ಕೆ. ರಾಜು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.