ETV Bharat / bharat

ಕ್ರಿಮಿನಲ್ ರಾಜಕೀಯಕ್ಕೆ ಸಮಗ್ರ ಚಿಕಿತ್ಸೆ: ರಾಜಕೀಯವಾಗಿ ‘ಸ್ವಚ್ಛ ಭಾರತ್’ ಆಗುವುದೆಂದು!?

author img

By

Published : Feb 9, 2020, 2:16 PM IST

ಅಪರಾಧ ಹಿನ್ನೆಲೆ ಇರುವ ಜನರನ್ನು ತಮ್ಮ ಪಕ್ಷಗಳಿಗೆ ಸೇರಿಸಿಕೊಳ್ಳಲು ಮತ್ತು ರಾಷ್ಟ್ರ ಮುನ್ನಡೆಸಲು ರಾಜಕೀಯ ನಾಯಕರು ಖುದ್ದು ಆಹ್ವಾನ ನೀಡುತ್ತಿದ್ದಾರೆ. ಭಾರತೀಯ ಸಂವಿಧಾನದ 324ನೇ ವಿಧಿಯ ಪ್ರಕಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಅಧಿಕಾರ ಮತ್ತು ಹೊಣೆಗಾರಿಕೆ ದೇಶದ ಚುನಾವಣಾ ಆಯೋಗಕ್ಕಿದೆ. ಇಷ್ಟಾದರೂ ಎಲ್ಲರೂ ಬಲ್ಲ ವಾಸ್ತವ ಎಂದರೆ ದೇಶದ ರಾಜಕೀಯ ರಂಗ ಪ್ರವೇಶಿಸುವ ಅಪರಾಧ ಹಿನ್ನೆಲೆಯ ಮಂದಿಗೆ ನಿರ್ಬಂಧ ಹೇರಲು ಈ ಬಗೆಯ ಅಧಿಕಾರ ಸಾಕಾಗುವುದಿಲ್ಲ.

Comprehensive Treatment to Criminal Politic
ಕ್ರಿಮಿನಲ್ ರಾಜಕೀಯಕ್ಕೆ ಸಮಗ್ರ ಚಿಕಿತ್ಸೆ

ಇತ್ತೀಚಿನ ದಿನಗಳಲ್ಲಿ ಭಾರತದ ರಾಜಕಾರಣ ಮತ್ತು ಆ ಮೂಲಕ ದೇಶದ ಪ್ರಜಾಪ್ರಭುತ್ವ ಎಂತಹ ಭ್ರಷ್ಟ ವ್ಯವಸ್ಥೆಯಾಗಿ ಮಾರ್ಪಾಟು ಹೊಂದಿದೆ ಎಂದರೆ, ಅಪರಾಧ ಹಿನ್ನೆಲೆಯ ಜನರನ್ನು ತಮ್ಮ ಪಕ್ಷಗಳಿಗೆ ಸೇರಿಸಿಕೊಳ್ಳಲು ಮತ್ತು ರಾಷ್ಟ್ರ ಮುನ್ನಡೆಸಲು ರಾಜಕೀಯ ನಾಯಕರು ಖುದ್ದು ಆಹ್ವಾನ ನೀಡುತ್ತಿದ್ದಾರೆ.

ಈ ನೆಲೆಯಲ್ಲಿ ಎಲ್ಲ ಪಕ್ಷಗಳು ಒಂದೇ ದೋಣಿ ಏರಿದಂತೆ ತೋರುತ್ತಿವೆ. ಇಂತಹ ಸ್ಥಿತಿಗೆ ಅವರೆಲ್ಲ ಸಮಾನ ಹೊಣೆಗಾರರು. ಭಾರತೀಯ ಸಂವಿಧಾನದ 324ನೇ ವಿಧಿಯ ಪ್ರಕಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಅಧಿಕಾರ ಮತ್ತು ಹೊಣೆಗಾರಿಕೆ ದೇಶದ ಚುನಾವಣಾ ಆಯೋಗಕ್ಕಿದೆ. ಇಷ್ಟಾದರೂ ಎಲ್ಲರೂ ಬಲ್ಲ ವಾಸ್ತವ ಎಂದರೆ ದೇಶದ ರಾಜಕೀಯ ರಂಗ ಪ್ರವೇಶಿಸುವ ಅಪರಾಧ ಹಿನ್ನೆಲೆಯ ಮಂದಿಗೆ ನಿರ್ಬಂಧ ಹೇರಲು ಈ ಬಗೆಯ ಅಧಿಕಾರ ಸಾಕಾಗುವುದಿಲ್ಲ. ಸುಧಾರಣೆ ಮತ್ತು ನೀತಿಗಳ ಪ್ರಸ್ತಾಪಕ್ಕೆ ಹಾಗೂ ಪರಿಚಯಕ್ಕೆ ಮಾತ್ರ ಈ ಬಗೆಯ ಅಧಿಕಾರ ಸೀಮಿತ ಆಗಿದೆ ಎಂಬ ಮಾತುಗಳಿವೆ. ರಾಜಕೀಯ ಅಪರಾಧೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಂತರದ ದಿನಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ. ಅವುಗಳು ದೂರಿರುವಂತೆ ಸುಲಭ ಫಲಿತಾಂಶ ಬಯಸುವ ಸರ್ಕಾರಗಳು ಅಪರಾಧ ಹಿನ್ನೆಲೆ ಉಳ್ಳವರು ಮತ್ತು ಅವರ ಕಾರ್ಯತಂತ್ರಗಳಿಗೆ ಸಮ್ಮತಿ ನೀಡಿ ತಮ್ಮ ಅನುಕೂಲಕ್ಕೆ ತಕ್ಕಂತೆ ಸುಧಾರಣಾ ಕ್ರಮಗಳನ್ನು ಬದಿಗೆ ಸರಿಸುತ್ತಿವೆ.

ರಾಜಕೀಯ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಅಪರಾಧಿಗಳು ಮತ್ತು ಅವರನ್ನು ಪ್ರೋತ್ಸಾಹಿಸುವ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಚುನಾವಣಾ ಆಯೋಗ ಅಂತಹುದೇ ಪ್ರಕರಣವೊಂದರ ವಿಚಾರಣೆ ವೇಳೆ ಪ್ರತಿಪಾದಿಸಿದೆ. ಆದರೂ ವಾದ ತಳ್ಳಿ ಹಾಕಿದ ಸುಪ್ರೀಂಕೋರ್ಟ್, ಅಪರಾಧ ಹಿನ್ನೆಲೆಯ ವ್ಯಕ್ತಿಯ ಸದಸ್ಯತ್ವ ಪಡೆಯುವ ಯಾವುದೇ ಪಕ್ಷ ತನ್ನ ಕ್ರಮ ಸರಿ ಎಂದು ವಿವರಿಸುವಷ್ಟು ಮತ್ತು ಅದಕ್ಕೆ ಕಾರಣ ತಿಳಿಸುವಷ್ಟು ಸಮರ್ಥ ಇರಬೇಕು ಎಂದು ಸೂಚಿಸಿದೆ.

ಅಂತಹ ಸಮರ್ಥನೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂಬ ಸಲಹೆಯನ್ನೂ ಅದು ಎತ್ತಿದೆ. ಅಭ್ಯರ್ಥಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಜತೆಗೆ ಅವರ ಪ್ರಸ್ತುತ ಗಳಿಸಿರುವ ಆಸ್ತಿ, ಸಾಲದ ಮಾಹಿತಿ, ಅದರೊಟ್ಟಿಗೆ ಹಿಂದಿನ ಸ್ವತ್ತುಗಳ ವಿವರಗಳನ್ನು ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಪಕ್ಷದ ಜಾಲತಾಣಗಳ ಮೂಲಕ ಬಹಿರಂಗಪಡಿಸಿ ನಿರ್ದಿಷ್ಟ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬುದರ ವಿವರಣೆ ನೀಡಬೇಕೆಂದು ನ್ಯಾಯಾಲಯ ಹೇಳಿದೆ. ‘ಅಪರಾಧ ಸಾಬೀತಾಗುವವರೆಗೂ ಯಾವುದೇ ವ್ಯಕ್ತಿ ನಿರಪರಾಧಿ' ಎಂಬ ತತ್ವವನ್ನು ಕೂಡ ಪರಿಗಣಿಸಿರುವ ನ್ಯಾಯಾಲಯ ಮತ್ತಷ್ಟು ತೊಡಕುಗಳಿಗೆ ಕಾರಣವಾಗುವ ಹಿನ್ನೆಲೆಯಲ್ಲಿ ಸಣ್ಣ ಮತ್ತು ದೊಡ್ಡ ಪ್ರಕರಣಗಳ ನಡುವಿನ ವ್ಯತ್ಯಾಸ ಗುರುತಿಸಬಾರದು ಎಂದು ಹೇಳಿದೆ. ಮುಂದುವರಿದು ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳು ಸಾರ್ವಜನಿಕ ಜೀವನ ಪ್ರವೇಶಿಸುವಂತಿಲ್ಲ ಮತ್ತು ಶಾಸನ ರೂಪಿಸುವಂತಿಲ್ಲ ಎಂದು ಸಂಸತ್ತು ಕಾನೂನು ಜಾರಿಗೆ ತರಬೇಕು ಎಂದು ತಿಳಿಸಿದೆ.

ಅಲ್ಲದೆ, ಸಾರ್ವಜನಿಕ ಚಟುವಟಿಕೆ ಎನಿಸಿರುವ ಚುನಾವಣೆಯಲ್ಲಿ ಯಾರ ಸ್ಪರ್ಧೆಯನ್ನೂ ನ್ಯಾಯಾಲಯ ನಿಷೇಧಿಸಲು ಸಾಧ್ಯ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿದೆ. ನಾಮಪತ್ರ ಸಲ್ಲಿಸಿದ ಕೊನೆಯ ದಿನದಂದು ರಾಜಕೀಯ ಎದುರಾಳಿ ಮೇಲೆ ದೇಶದ್ರೋಹದ ಆರೋಪ ಹೊರಿಸಿರುವ ಸ್ಥಿತಿಯನ್ನು ನ್ಯಾಯಾಂಗ ಮತ್ತಷ್ಟು ಪ್ರಶ್ನೆ ಮಾಡಿದೆ. ಇದೇ ವೇಳೆ, ಸಮಗ್ರ ಸುಧಾರಣೆ ಜಾರಿ ಮಾಡದ ಹೊರತು ಅಪರಾಧ ರಾಜಕಾರಣದ ಕಪಿಮುಷ್ಠಿಯಿಂದ ದೇಶಕ್ಕೆ ಮುಕ್ತಿ ಅಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.

" ಅಪರಾಧದ ಹಿನ್ನೆಲೆ ಇರುವವರು ವೈದ್ಯ, ಎಂಜಿನಿಯರ್, ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕ ಅಥವಾ ನ್ಯಾಯಾಧೀಶರಂತಹ ವೃತ್ತಿಗಳಿಗೆ ಬರುವಂತಿಲ್ಲ ಎಂಬ ನಿಯಮ ಇರುವಾಗ ಅವರು ಶಾಸಕ, ಸಂಸದ ಹಾಗೂ ಮಂತ್ರಿಯಾಗಲು ಅವಕಾಶ ನೀಡುವುದು ಅಸಮಂಜಸ ಮತ್ತು ಅಸಂಬದ್ಧ !!" ಎಂಬ ಕಾರಣ ನೀಡಿ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿದ್ದ ರಂಜನ್ ಗೊಗೊಯ್ ಅವರು ‘ಕೆಲವು ಮೊಕದ್ದಮೆಗಳ ಇತ್ಯರ್ಥಕ್ಕೆ ಸುಮಾರು 20 ವರ್ಷಗಳ ಕಾಲ ಕಾಯಬೇಕಾಗುತ್ತದೆ ಮತ್ತು ಆ ಅವಧಿಯಲ್ಲಿ ಆರೋಪಿಯೊಬ್ಬ ಕನಿಷ್ಠ ನಾಲ್ಕು ಬಾರಿ ಜನಪ್ರತಿನಿಧಿಯಾಗಿ ಆಯ್ಕೆ ಆಗಿಬಿಡಬಲ್ಲ’ ಎಂದು ನೇರವಾಗಿ ಬೊಟ್ಟು ಮಾಡಿದ್ದರು. 14 ನೇ ಲೋಕಸಭೆಯಲ್ಲಿ ಅಪರಾಧ ಹಿನ್ನೆಲೆ ಇರುವ ಸದಸ್ಯರ ಸಂಖ್ಯೆ ಶೇ 24. ಆದರೆ ಇದು 15 ನೇ ಲೋಕಸಭೆಯಲ್ಲಿ ಶೇ 30ರಷ್ಟು ಮತ್ತು 16 ನೇ ಲೋಕಸಭೆಯಲ್ಲಿ ಶೇ 34 ರಷ್ಟು ಹೆಚ್ಚಿದೆ ಹಾಗೂ ಪ್ರಸ್ತುತ ಅವಧಿಯಲ್ಲಿ ಶೇ 43 ಕ್ಕೆ ಏರಿಕೆ ಆಗಿದೆ.

ಅತ್ಯಾಚಾರ, ಕೊಲೆ ಮತ್ತು ಇತರ ಗಂಭೀರ ಅಪರಾಧಗಳ ಆರೋಪ ಹೊತ್ತಿರುವ ಸುಮಾರು ಶೇ 29 ರಷ್ಟು ಸದಸ್ಯರು ಪ್ರಸ್ತುತ ಲೋಕಸಭೆಯಲ್ಲಿ ಇದ್ದಾರೆ ಎಂಬುದು ವಿಷಾದಕರ ಸಂಗತಿ. ಇನ್ನೂ ದುಃಖಕರ ವಿಚಾರ ಎಂದರೆ, ಅಂತಹ ಸದಸ್ಯರ ಸಂಖ್ಯೆ ಮತ್ತಷ್ಟು ವೃದ್ಧಿಸಿ ಚುನಾವಣೆಯಲ್ಲಿ ಗೆದ್ದು ನಾಯಕರಾಗುವ ಸಾಧ್ಯತೆ ಇದೆ ಎಂಬುದು ! ಆದ್ದರಿಂದ, ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಕಠಿಣ ನಿಯಮ ಜಾರಿಗೆ ತಂದು ಅದರ ಅಡಿಯಲ್ಲಿ ಅಪರಾಧದ ಹಿನ್ನೆಲೆ ಇರುವ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು 1968 ರ ಚುನಾವಣಾ ಚಿಹ್ನೆ ಕುರಿತ ನಿಯಮ ಗ್ರಂಥದಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದ್ದಾರೆ.

5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯ ಎಸಗಿದಾಗ ಮತ್ತು ಚುನಾವಣೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಒಂದು ವರ್ಷದ ಮೊದಲು ಅಪರಾಧ ಎಸಗಿದ್ದರೆ ಮಾತ್ರ ಅಭ್ಯರ್ಥಿಯೊಬ್ಬನಿಗೆ ಅಪರಾಧದ ಹಿನ್ನೆಲೆ ಇದೆ ಎಂದು ಪರಿಗಣಿಸಬೇಕು ಎಂಬುದಾಗಿ ಅರ್ಜಿಯಲ್ಲಿ ಕೋರಲಾಗಿದೆ. ಸಾರ್ವಜನಿಕರಿಂದ ಇಂತಹ ಹಲವಾರು ಮನವಿಗಳು ಬಂದಿದ್ದರೂ, ‘ಕಾನೂನು ಉಲ್ಲಂಘಿಸುವವರು’ ಹಾಕಿದ ಬಲವಾದ ಗೋಡೆಯನ್ನು ಕೆಡವಲು ಎಂದಾದರೂ ಸಾಧ್ಯ ಇದೆಯೇ ಎಂಬ ಅನುಮಾನಗಳು ಇವೆ. ಅಪರಾಧಿಗಳು, ಪೊಲೀಸರು, ಸುಂಕಾಧಿಕಾರಿಗಳು ಮತ್ತು ರಾಜಕೀಯ ಅಪರಾಧಿಗಳ ಅನೈತಿಕ ಸಂಬಂಧಕ್ಕೆ ಸಾಕ್ಷಿ 1993 ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ. ಒಂದಿಡೀ ದಶಕದ ಕಾಲ ಹಲವು ಕಂತುಗಳಲ್ಲಿ ನಡೆದ ಈ ಪ್ರಹಸನದ ಪ್ರೇಕ್ಷಕರಾದರು ದೇಶದ ಜನ. ಭಾರತದಲ್ಲಿ ರಾಜಕೀಯದ ಅಪರಾಧೀಕರಣ ಅಧ್ಯಯನ ಮಾಡಲು ನೇಮಿಸಲಾದ ವೊಹ್ರಾ ಸಮಿತಿ, ದೊಡ್ಡ ನಗರಗಳ ಕ್ರಿಮಿನಲ್ ತಿಮಿಂಗಿಲಗಳು, ಅಧಿಕಾರಿಗಳು, ಪೊಲೀಸರು ಹಾಗೂ ರಾಜಕೀಯ ನಾಯಕರು ಹೀಗೆ ಎಲ್ಲರೂ ರಾಜಕೀಯ ಅಪರಾಧೀಕರಣದಲ್ಲಿ ಶಾಮೀಲಾಗಿದ್ದಾರೆ. ಮತ್ತು ರಾಜಕಾರಣಿಗಳಿಂದ ಬರುವ ಹಣ ಚುನಾವಣೆ ಸಮಯದಲ್ಲಿ ಈ ಜಾಲದ ವಿಸ್ತರಣೆಗೆ ಇಂಧನವಾಗಿ ಬಳಕೆ ಆಗುತ್ತಿದೆ ಎಂದು ಅದು ಸ್ಪಷ್ಟವಾಗಿ ತಿಳಿಸಿದೆ.

ವೈಯಕ್ತಿಕ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ಅಪರಾಧ ನ್ಯಾಯಾಂಗ ವ್ಯವಸ್ಥೆಗೆ ಮಾಫಿಯಾದ ಇಂತಹ ಬೃಹತ್ ಕೃತ್ಯಗಳನ್ನು ತಡೆಯಲು ಸಾಧ್ಯ ಇಲ್ಲ ಎಂಬುದಾಗಿ, ಎರಡು ದಶಕಗಳ ಹಿಂದೆಯೇ ಸಿದ್ಧಗೊಂಡಿರುವ ಈ ವರದಿ ಸ್ಪಷ್ಟಪಡಿಸಿದೆ. ಸರ್ಕಾರಗಳು ವೊಹ್ರಾ ಸಮಿತಿಯ ವರದಿ ಕುರಿತಂತೆ ನಿರ್ಲಕ್ಷ್ಯ ಧೋರಣೆ ತಳೆದಿದ್ದರೂ ಚುನಾವಣೆಯಲ್ಲಿನ ಕಪ್ಪುಹಣ ರಾಜಕೀಯ ಅಪರಾಧೀಕರಣಕ್ಕೆ ಕಾರಣ ಆಗಲಿದೆ ಎಂಬುದು ಸತ್ಯ.

ಇಂತಹ ಕೃತ್ಯಗಳಿಂದ ದೇಶವನ್ನು ರಕ್ಷಿಸಲು 1999, 2014 ರ ಅವಧಿಯಲ್ಲಿ ಸಲ್ಲಿಸಲಾದ ನ್ಯಾಯಾಧೀಶರ ಸಮಿತಿ ವರದಿಗಳು ಮತ್ತು 2004 ರಲ್ಲಿ ಚುನಾವಣಾ ಆಯೋಗ ಪ್ರಸ್ತಾಪಿಸಿದ ಸುಧಾರಣೆಗಳು, 2002 ರ ಸಾಂವಿಧಾನಿಕ ಪರಾಮರ್ಶನಾ ಸಮಿತಿಯ ವರದಿಗಳು ಮತ್ತು 2 ನೇ ಆಡಳಿತ ಸಮಿತಿಯ ಸಲಹೆಗಳು ವಿವಿಧ ಉಪಾಯಗಳನ್ನು ಕಂಡುಹಿಡಿದಿವೆ. ಅಧಿಕಾರಕ್ಕೆ ಬರಬೇಕೆಂಬ ಸ್ವಾರ್ಥ ಉದ್ದೇಶದಿಂದ ರಾಜಕೀಯ ಪಕ್ಷಗಳು ಅಪರಾಧಿಗಳನ್ನು ಶಾಸನಸಭೆಗಳಿಗೆ ಕಳಿಸುತ್ತಿದ್ದು, ದೇಶದ ಒಳಿತಿನ ಮೇಲೆ ಇದು ಸವಾರಿ ಮಾಡುತ್ತಿದೆ. ರಾಜಕಾರಣಕ್ಕೆ ಅಪರಾಧ ಹಿನ್ನೆಲೆ ಉಳ್ಳವರನ್ನು ಕರೆತರುವ ಮನೋಭಾವಕ್ಕೆ ಲಗಾಮು ಹಾಕದೆ ಇದ್ದರೆ ಮತ್ತು ರಾಜಕೀಯ ಪಕ್ಷಗಳ ಸಂಕುಚಿತ ಧೋರಣೆಗಳಿಗೆ ಕಡಿವಾಣ ಬೀಳದೆ ಇದ್ದರೆ ವಿಶಾಲ ಅರ್ಥದಲ್ಲಿ ಸ್ವಚ್ಛ ಭಾರತ್ ಯೋಜನೆ ಸಾಕಾರಗೊಳ್ಳದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.