ETV Bharat / bharat

ಕಂಪ್ಯೂಟರ್​ಗಿಂತ ಚುರುಕು ಈ ಅಭಯ್; 3 ಗಿನ್ನೆಸ್ ದಾಖಲೆ ಸೃಷ್ಟಿ!

author img

By ETV Bharat Karnataka Team

Published : Dec 8, 2023, 9:36 PM IST

Abhay Kumar's Guinness World Record: ಕ್ರಿಸ್ತಶಕ ಒಂದರಿಂದ ಮುಂದಿನ ಹತ್ತು ಸಾವಿರ ವರ್ಷಗಳವರೆಗಿನ ಯಾವುದೇ ತಾರೀಖಿನ ದಿನವನ್ನು (ವಾರ) ಕೇಳಿದರೂ ಹೇಳುವ ಬಿಹಾರ ಮೂಲದ ಅಭಯ್ ಕುಮಾರ್ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

bihars-abhay-kumar-brain-is-faster-than-a-computer-got-his-name-registered-in-the-guinness-world-record-for-the-third-time
ಲಾಕ್‌ಡೌನ್​ನಲ್ಲಿ ಚಿಗುರೊಡೆದ ನೆನಪಿನ ಶಕ್ತಿ: ಕಂಪ್ಯೂಟರ್​ಗಿಂತ ಚುರುಕು ಈ ಅಭಯ್, ಒಂದೇ ಹೆಸರಿಗೆ ಮೂರು ಗಿನ್ನೆಸ್ ರೆಕಾರ್ಡ್ಸ್!

ವೈಶಾಲಿ(ಬಿಹಾರ): ಬಿಹಾರದ ವೈಶಾಲಿ ಜಿಲ್ಲೆಯ ಅಭಯ್ ಕುಮಾರ್ ಎಂಬವರು ತಮ್ಮ ನೆನಪಿನ ಶಕ್ತಿಯ ಮೂಲಕವೇ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ 3 ಬಾರಿ ತಮ್ಮ ಹೆಸರು ದಾಖಲಿಸಿದ್ದಾರೆ. ಮೈಂಡ್ ಮತ್ತು ಮೆಮೊರಿ ಕೋಚ್ ಆಗಿರುವ ಇವರು, ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತಿದ್ದಾಗ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ ಇಂತಹ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ ಎಂಬುದು ವಿಶೇಷ.

ಹಾಜಿಪುರದ ನಿವಾಸಿ 30 ವರ್ಷದ ಅಭಯ್ ಕುಮಾರ್ ವೃತ್ತಿಯಲ್ಲಿ ಪ್ರಾಧ್ಯಾಪಕರು. ಇವರು ಸಹೇಂದ್ರ ಪಾಸ್ವಾನ್ ಹಾಗೂ ಪ್ರೇಮ್ ಶೀಲಾಕುಮಾರಿ ದಂಪತಿಯ ಪುತ್ರ. ಉನ್ನತ ಶಿಕ್ಷಣದ ನಂತರ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿದ್ದಾರೆ. ಇವರ ನೆನಪಿನ ಶಕ್ತಿ ಹೇಗಿದೆ ಎಂದರೆ, ಕಂಪ್ಯೂಟರ್​ಗಿಂತ ಇವರ ಮೆದುಳು ತುಂಬಾ ವೇಗವಾಗಿ ಓಡುತ್ತದೆ ಮತ್ತು ಕೆಲಸ ಮಾಡುತ್ತದೆ. ಇದರಿಂದಾಗಿಯೇ ಇವರು ತಮ್ಮ ಮೂರು ಗಿನ್ನೆಸ್​ ದಾಖಲೆಗಳಲ್ಲಿ ತಮ್ಮದೇ ಆದ ಒಂದು ದಾಖಲೆ ಮುರಿದು ಮತ್ತೊಂದು ಸೇರ್ಪಡೆ ಮಾಡಿದ್ದಾರೆ. ಈ ಮೂಲಕ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಭಯ್ ಈಗ ಅಸಾಮಾನ್ಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

ಅಭಯ್​ ಗಿನ್ನೆಸ್ ದಾಖಲೆಗಳೇನು?: ಅಭಯ್ ಕುಮಾರ್ ಮೆದುಳು ಅತ್ಯಂತ ಚುರುಕವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಎಷ್ಟರ ಮಟ್ಟಿಗೆ ಎಂದರೆ, ಕ್ರಿಸ್ತಶಕ ಒಂದರಿಂದ ಮುಂದಿನ ಹತ್ತು ಸಾವಿರ ವರ್ಷಗಳವರೆಗಿನ ಯಾವುದೇ ತಾರೀಖಿನ ದಿನವನ್ನು ಕೇಳಿದರೂ ಕ್ಷಣ ಮಾತ್ರದಲ್ಲೇ ಹೇಳಲು ಪ್ರಯತ್ನಿಸುವ ಸಾಮರ್ಥ್ಯ ಇವರಿಗಿದೆ. ಮೊದಲ ಬಾರಿಗೆ 16 ಕ್ಯಾಲೆಂಡರ್ ತಾರೀಕುಗಳ ದಿನವನ್ನು (ಯಾವ ವಾರ ಎಂಬುವುದು) ಒಂದೇ ನಿಮಿಷದಲ್ಲಿ ನೀಡಿ ಗಿನ್ನೆಸ್​ ಪುಟದಲ್ಲಿ ತಮ್ಮ ಹೆಸರು ದಾಖಲಿಸಿದ್ದರು. ಉದಾಹರಣೆಗೆ, 4621ನೇ ಇಸ್ವಿಯ ಫೆಬ್ರವರಿ 14, ಯಾವ ವಾರ ಅಥವಾ ಯಾವ ದಿನವಾಗುತ್ತದೆ? ಎಂದು ಕೇಳಿದರೆ, ಇದನ್ನು ಅಭಯ್​ ತಕ್ಷಣವೇ ಭಾನುವಾರ ಎಂದು ಹೇಳಿಬಿಡುತ್ತಾರೆ.

ಬಳಿಕ ಎರಡನೇ ಗಿನ್ನೆಸ್​ ದಾಖಲೆಯನ್ನು ಪಾಸ್‌ಪೋರ್ಟ್‌ಗಳ ಚಿಹ್ನೆಗಳನ್ನು ಗುರುತಿಸುವ ಮೂಲಕ ಸೃಷ್ಟಿಸಿದ್ದರು. ಇದರಲ್ಲಿ ಅವರು ಒಂದೇ ನಿಮಿಷದಲ್ಲಿ 91 ಪಾಸ್‌ಪೋರ್ಟ್‌ಗಳ ಚಿಹ್ನೆಗಳನ್ನು ಗುರುತಿಸಿ ಸೈ ಎನಿಸಿಕೊಂಡಿದ್ದರು. ಇದೀಗ 19 ಕ್ಯಾಲೆಂಡರ್ ತಾರೀಖುಗಳ ದಿನವನ್ನು ಹೇಳುವ ಮೂಲಕ ತಮ್ಮ ಹಿಂದಿನ ದಾಖಲೆ ಮುರಿದು ತಮ್ಮದೇ ಹೆಸರಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಈ ಮೂಲಕ ಅಭಯ್ ಕುಮಾರ್ ಕಂಪ್ಯೂಟರ್​ ಅನ್ನೇ ಸೋಲಿಸಿದ ಮಾನವ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತನ್ನ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಇವರ ಸಾಧನೆಯನ್ನು ಪ್ರಕಟಿಸಿದೆ.

ಈ ಕುರಿತು ಮಾತನಾಡಿದ ಅಭಯ್ ಕುಮಾರ್, "ಕಂಪ್ಯೂಟರೀಕರಣದಿಂದ ರ‍್ಯಾಂಡಂ ಆಗಿ ಕೇಳುವ ತಾರೀಕಿನ ದಿನ ಹೇಳುವುದು ಸವಾಲು. ಮೊದಲ ಬಾರಿ ನಿಮಿಷದಲ್ಲಿ 16 ಕ್ಯಾಲೆಂಡರ್ ದಿನಗಳನ್ನು ಹೇಳಿದ್ದೇನೆ. ಈಗ 19 ತಾರೀಖಿನ ದಿನಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ಮೂರನೆಯ ಗಿನ್ನೆಸ್ ದಾಖಲೆ 2023ರ ಜುಲೈ 16ರಂದು ನಿರ್ಮಾಣವಾಗಿದೆ" ಎಂದು ತಿಳಿಸಿದರು.

"ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತಿದ್ದಾಗ ನೆನಪಿನ ಶಕ್ತಿ ಹೆಚ್ಚಿಸಬೇಕೆಂಬ ಆಲೋಚನೆ ಚಿಗುರೊಡೆಯಿತು. ಇದಕ್ಕಾಗಿ ಅನೇಕ ಪುಸ್ತಕಗಳನ್ನು ಓದುವುದು, ಅನೇಕ ತಜ್ಞರೊಂದಿಗೆ ಚರ್ಚೆ ಮಾಡುತ್ತಿದ್ದೆ. ಸಾಮಾಜಿಕ ಮಾಧ್ಯಮಗಳ ಸಹಾಯವನ್ನೂ ಪಡೆದೆ. ಈಗ ನನ್ನದೇ ವೆಬ್‌ಸೈಟ್ ಮೂಲಕ ಶಾಲಾ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವ ಕುರಿತು ಪ್ರೋತ್ಸಾಹಿಸಿದ್ದೇನೆ. ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಹೆಚ್ಚಿಸುವ ಸಲಹೆಗಳನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದೇನೆ" ಎಂದು ವಿವರಿಸಿದರು.

ಇದನ್ನೂ ಓದಿ: Rubik's cube: ಕೇವಲ 3.13 ಸೆಕೆಂಡುಗಳಲ್ಲಿ ರೂಬಿಕ್ಸ್ ಕ್ಯೂಬ್ ಬಗೆಹರಿಸಿ ಗಿನ್ನೆಸ್ ದಾಖಲೆ ಬರೆದ ಆಟಿಸಂ ಪೀಡಿತ ಹುಡುಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.