ETV Bharat / bharat

ಆಪ್ ಮುಖಂಡ ಸತ್ಯೇಂದರ್​ ಜೈನ್​ಗೆ ಆರು ವಾರಗಳ ಜಾಮೀನು ಮಂಜೂರು

author img

By

Published : May 26, 2023, 3:42 PM IST

ದೆಹಲಿ ಸರ್ಕಾರದ ಮಾಜಿ ಸಚಿವ ಸತ್ಯೇಂದರ್ ಜೈನ್ ಅವ​ರಿಗೆ ವೈದ್ಯಕೀಯ ಜಾಮೀನು ಮಂಜೂರಾಗಿದೆ. ಜಾಮೀನು ಅವಧಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡದಂತೆ ಅವರಿಗೆ ಸೂಚಿಸಲಾಗಿದೆ.

SC grants AAPs Satyendar Jain six weeks interim bail on medical grounds
SC grants AAPs Satyendar Jain six weeks interim bail on medical grounds

ನವದೆಹಲಿ : ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್‌ಗೆ ವೈದ್ಯಕೀಯ ಕಾರಣಗಳನ್ನು ಆಧರಿಸಿ ಸುಪ್ರೀಂಕೋರ್ಟ್ ಶುಕ್ರವಾರ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಸತ್ಯೇಂದ್ರ ಜೈನ್ ತಲೆತಿರುಗುವಿಕೆಯಿಂದ ತಿಹಾರ್ ಜೈಲಿನಲ್ಲಿ ಕುಸಿದು ಬಿದ್ದು, ಸರ್ಕಾರಿ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾರೆ. ಅದಾಗಿ ಒಂದು ದಿನದ ನಂತರ ಅವರಿಗೆ ಜಾಮೀನು ಸಿಕ್ಕಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಜೈನ್ ಆಗಿನಿಂದಲೂ ತಿಹಾರ್ ಜೈಲಿನಲ್ಲಿದ್ದಾರೆ.

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಪಿ.ಎಸ್. ನರಸಿಂಹ ಅವರನ್ನೊಳಗೊಂಡ ಪೀಠವು 58ರ ಹರೆಯದ ಜೈನ್ ತಮ್ಮ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಿದೆ ಮತ್ತು ಜುಲೈ 10 ರೊಳಗೆ ವೈದ್ಯಕೀಯ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದೆ. ಜೈನ್ ಅವರ ಮಧ್ಯಂತರ ಜಾಮೀನು ಅವಧಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡದಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಜಾಮೀನು ಅವಧಿ ಜುಲೈ 11 ರಂದು ಕೊನೆಗೊಳ್ಳುತ್ತದೆ.

ಜೈನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮಾಜಿ ಸಚಿವರು 35 ಕೆಜಿ ತೂಕ ಕಳೆದುಕೊಂಡಿದ್ದು, ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಜೈನ್ ಅವರಿಗೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಅಥವಾ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯರ ಸಮಿತಿಯಿಂದ ವೈದ್ಯಕೀಯ ಪರೀಕ್ಷೆ ನಡಸುವಂತೆ ಹಾಗೂ ಒಂದು ವೇಳೆ ವೈದ್ಯಕೀಯ ವರದಿಗಳು ಚಿಕಿತ್ಸೆ ಸೂಚಿಸಿದರೆ ಇಡಿ ಅದನ್ನು ವಿರೋಧಿಸುವುದಿಲ್ಲ ಎಂದು ಇಡಿ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಹೇಳಿದರು.

ಜೈನ್ ಅವರು ಈ ಹಿಂದೆಯೂ ಈ ಪ್ರಕರಣದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ, ಇಡಿ ಏಮ್ಸ್​ ಅಥವಾ ಆರ್​ಎಂಎಲ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಯಿಂದ ಅವರ ಪರೀಕ್ಷೆ ನಡೆಸುವಂತೆ ಕೋರಿದ್ದರಿಂದ ಅರ್ಜಿಗಳನ್ನು ಹಿಂತೆಗೆದುಕೊಂಡಿದ್ದರು ಎಂಬ ಮಾಹಿತಿಯನ್ನು ರಾಜು ನ್ಯಾಯಾಲಯದ ಗಮನಕ್ಕೆ ತಂದರು. "ಅವರು ದೆಹಲಿಯ ಆರೋಗ್ಯ ಸಚಿವ ಮತ್ತು ಜೈಲು ಸಚಿವರಾಗಿದ್ದರು. ಅವರ ಅಧಿಕಾರದ ವ್ಯಾಪ್ತಿಯಲ್ಲಿಲ್ಲದ ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಬೇಕಾಗಿದೆ" ಎಂದು ರಾಜು ಹೇಳಿದರು. ಈ ಹಿಂದೆ ಅವರನ್ನು ಪರೀಕ್ಷಿಸಿದ ಆಸ್ಪತ್ರೆಗಳ ವರದಿಗಳು ನಕಲಿ ಎಂದು ಕಂಡುಬಂದಿದೆ ಎಂದು ಅವರು ತಿಳಿಸಿದರು.

ಜೈನ್ ಅವರನ್ನು ವೈದ್ಯಕೀಯ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಪರಿಗಣಿಸುತ್ತಿದೆ. ಆದರೆ, ಮುಂದಿನ ವಿಚಾರಣೆಯ ದಿನಾಂಕದಂದು ಏಮ್ಸ್​ ಅಥವಾ ಆರ್​ಎಂಎಲ್ ಆಸ್ಪತ್ರೆಯ ವೈದ್ಯರಿಂದ ಅವರ ಆರೋಗ್ಯ ತಪಾಸಣೆ ವಿಷಯವನ್ನು ಪರಿಶೀಲಿಸುವುದಾಗಿ ಪೀಠ ಹೇಳಿದೆ. ಗುರುವಾರ ಜೈನ್ ಅವರನ್ನು ಮೊದಲು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಉಸಿರಾಟದ ತೊಂದರೆಯಿಂದಾಗಿ ಅವರನ್ನು ಲೋಕನಾಯಕ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಎಎಪಿ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ : ಚೇತರಿಕೆಯತ್ತ ಅದಾನಿ ಸಮೂಹ: ಷೇರು ಬೆಲೆ ಏರಿಕೆ, ಗೌತಮ್ ಅದಾನಿ ಸಂಪತ್ತು ಮತ್ತೆ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.