ETV Bharat / bharat

ದೆಹಲಿ ಮದ್ಯ ನೀತಿ ಹಗರಣದಲ್ಲಿ ಆಪ್​ಅನ್ನು 'ಆರೋಪಿ'ಯನ್ನಾಗಿ ಮಾಡುವಂತೆ ಕೇಳಿತ್ತಾ ಸುಪ್ರೀಂ ಕೋರ್ಟ್​​?.. ಸ್ಪಷ್ಟನೆ ಹೀಗಿದೆ..

author img

By ETV Bharat Karnataka Team

Published : Oct 5, 2023, 4:38 PM IST

ವಿವಾದಿತ ಅಬಕಾರಿ ನೀತಿ ಹಗರಣದಲ್ಲಿ ಬಂಧಿತ ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ, ಫಲಾನುಭವಿ ಎನ್ನಲಾದ ರಾಜಕೀಯ ಪಕ್ಷವನ್ನು ಯಾಕೆ ಆರೋಪಿಯನ್ನಾಗಿ ಹೆಸರಿಸಿಲ್ಲ ಎಂದು ಇಡಿಗೆ ಪ್ರಶ್ನಿಸಿದ್ದ ಬಗ್ಗೆ ಇಂದು ಸ್ವತಃ ಸುಪ್ರೀಂ ಕೋರ್ಟ್​ ಸ್ಪಷ್ಟನೆ ಕೊಟ್ಟಿದೆ.

a-legal-question-not-to-implicate-anyone-says-sc-clarifies-on-making-aap-an-accused-during-manish-sisodia-bail-hearing
ದೆಹಲಿ ಮದ್ಯ ನೀತಿ ಹಗರಣದಲ್ಲಿ ಆಪ್​ಅನ್ನು 'ಆರೋಪಿ'ಯನ್ನಾಗಿ ಮಾಡುವಂತೆ ಕೇಳಿತ್ತಾ ಸುಪ್ರೀಂ ಕೋರ್ಟ್​​?... ಸ್ಪಷ್ಟನೆ ಹೀಗಿದೆ..

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಆಮ್​ ಆದ್ಮಿ ಪಕ್ಷವನ್ನು 'ಆರೋಪಿ'ಯನ್ನಾಗಿ ಮಾಡುವ ಕುರಿತಂತೆ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಬುಧವಾರ ಪ್ರಶ್ನಿಸಿದ್ದ ಬಗ್ಗೆ ಸುಪ್ರೀಂ ಕೋರ್ಟ್​ ಗುರುವಾರ ಸ್ಪಷ್ಟನೆ ನೀಡಿದೆ. ''ಇದು ಯಾವುದೇ ರಾಜಕೀಯ ಪಕ್ಷವನ್ನೂ ಉದ್ದೇಶಿಸಿ ಹೇಳಿದ್ದಲ್ಲ. ಬದಲಿಗೆ ಕಾನೂನಾತ್ಮಕ ಪ್ರಶ್ನೆಯಾಗಿತ್ತು'' ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

ವಿವಾದಿತ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸಿತ್ತು. ಈ ವೇಳೆ, ಹಗರಣದ ಫಲಾನುಭವಿ ಎನ್ನಲಾದ ರಾಜಕೀಯ ಪಕ್ಷವನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಯಾಕೆ ಆರೋಪಿಯನ್ನಾಗಿ ಹೆಸರಿಸಿಲ್ಲ ಎಂದು ಇಡಿಗೆ ಸುಪ್ರೀಂ ಕೋರ್ಟ್​ ಪ್ರಶ್ನಿಸಿತ್ತು.

ಇಂದು, ಮುಂದುವರೆದ ವಿಚಾರಣೆ ಸಮಯದಲ್ಲಿ ಮನೀಶ್​ ಸಿಸೋಡಿಯಾ ಪರ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್​ವಿಎನ್​ ಭಟ್ಟಿ ಅವರನ್ನೊಳಗೊಂಡ ಪೀಠದ ಮುಂದೆ ರಾಜಕೀಯ ಪಕ್ಷವನ್ನು ಯಾಕೆ ಆರೋಪಿಯನ್ನಾಗಿ ಮಾಡಿಲ್ಲ ಎಂಬ ಸುದ್ದಿವಾಹಿನಿಗಳ ನಿರೂಪಣೆಯನ್ನು ಪ್ರಸ್ತಾಪಿಸಿದರು. ಅಲ್ಲದೇ, ನ್ಯಾಯಾಲಯವು ಆಮ್​ ಆದ್ಮಿ ಪಕ್ಷವನ್ನು ಆರೋಪಿಯನ್ನಾಗಿ ಹೆಸರಲು ಬಯಸುತ್ತದೆಯೇ ಎಂದು ನ್ಯಾಯಪೀಠವನ್ನು ಕೇಳಿದರು.

''ಆರೋಪಿಯಾಗಿ ಆಪ್​ ಹೆಸರು ಯಾಕಿಲ್ಲ ಎಂದು ಇಡಿಗೆ ಕೋರ್ಟ್​ ಪ್ರಶ್ನಿಸಿದೆ ಎಂಬ ತಲೆಬಹರಗಳ ಮೂಲಕ ಸುದ್ದಿಯಾಗಿದೆ. ಇಂದು ಬೆಳಗ್ಗೆ ಎಲ್ಲ ವಾಹಿನಿಗಳು, ಆಪ್​ಅನ್ನು ಆರೋಪಿಯನ್ನಾಗಿ ಮಾಡಲು ಇಡಿ ಬಯಸಿದೆ ಎಂಬಂತೆ ಸೂಚಿಸುವ ವರದಿಗಳನ್ನು ಬಿತ್ತರಿಸುತ್ತಿವೆ'' ಎಂದು ನ್ಯಾಯ ಪೀಠದ ಗಮನಕ್ಕೆ ಸಿಂಘ್ವಿ ತಂದರು. ಇದಕ್ಕೆ ನ್ಯಾ. ಖನ್ನಾ ಪ್ರತಿಕ್ರಿಯಿಸಿ, ಸಿಂಘ್ವಿ ಇದರಲ್ಲಿ ಎರಡು ವಿಷಯಗಳಿವೆ ಎಂದು ಹೇಳಿದರು.

''ಮೊದಲನೆಯದು, ನಾವು ಪ್ರಶ್ನೆಗಳನ್ನು ಕೇಳುತ್ತೇವೆ ಮತ್ತು ನಾವು ಉತ್ತರಗಳನ್ನೂ ಬಯಸುತ್ತೇವೆ. ಏಕೆಂದರೆ, ಅವರು (ಇಡಿ) ನಮಗೆ ಚಾರ್ಟ್​ವೊಂದನ್ನು ತೋರಿಸಿದಾಗ ಅದರಲ್ಲಿ ಒಂದು ಹೆಸರಿತ್ತು. ಎರಡನೆಯದು, ನಾವು ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗುವುದಿಲ್ಲ'' ಎಂದು ನ್ಯಾ. ಖನ್ನಾ ಸ್ಪಷ್ಟಪಡಿಸಿದರು. ಆಗ ಸಿಂಘ್ವಿ, ಕೋರ್ಟ್​ ಹೇಳಿಕೆಯ ಆಧಾರದ ಮೇಲೆಯೇ ಅವರು (ಇಡಿ) ಆಪ್​​ಅನ್ನು ಆರೋಪಿಯನ್ನಾಗಿ ಮಾಡುತ್ತಿದ್ದಾರೆ ಎಂದು ಸುದ್ದಿಯಲ್ಲಿದೆ'' ಎಂದು ಹೇಳಿದರು. ಇದಕ್ಕೆ, ''ಇದು ನನ್ನ ಹೇಳಿಕೆಯಲ್ಲ. ಇಂದೊಂದು ನಾನು ಕೇಳಿದ ಪ್ರಶ್ನೆ'' ಎಂದು ನ್ಯಾ. ಖನ್ನಾ ತಿಳಿಸಿದರು.

ಅಲ್ಲದೇ, ''ವಾದಗಳ ಸಮಯದಲ್ಲಿ ಸ್ಪಷ್ಟನೆ ನೀಡುತ್ತ.. ನೀವು ನಮಗೆ ಚಾರ್ಟ್ ತೋರಿಸುತ್ತೀರಿ. ಅಷ್ಟಕ್ಕೆ ನಾವು ಏನನ್ನೂ ತೀರ್ಮಾನಿಸಿಲ್ಲ. ಇದು ನಿಮ್ಮ ತಕರಾರು ಎಂದು ನಾವು ಹೇಳಿದ್ದೇವೆ'' ಎಂದು ನ್ಯಾಯಪೀಠ ಹೇಳಿತು. ಇದೇ ಸಂದರ್ಭದಲ್ಲಿ ಇಡಿ ಹಾಗೂ ಸಿಬಿಐ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್​​ ಜನರಲ್​ ಎಸ್​ವಿ ರಾಜು, ''ಇಂದು ಬೆಳಗ್ಗೆ ಮಾಧ್ಯಮಗಳು ನನಗೆ ಪ್ರಶ್ನಿಸಿದವು. ಸಾಕ್ಷ್ಯಗಳು ಇದ್ದರೆ, ನಾವು ಯಾರನ್ನೂ ಬಿಡುವುದಿಲ್ಲ. ಹಾಗೆ, ಯಾವುದೇ ಪುರಾವೆಗಳು ಇಲ್ಲವಾದಲ್ಲಿ ನಾವು ಯಾರಿಗೆ ಕಿರುಕುಳ ನೀಡುವುದಿಲ್ಲ ಎಂದು ನಾನು ಹೇಳಿಕೆ ನೀಡಿದ್ದೇನೆ'' ಎಂದು ವಿವರಿಸಿದರು.

ಮತ್ತೊಂದೆಡೆ, ಸಿಂಘ್ವಿ ಮುಂದುವರೆದು, ಆಪ್​ಅನ್ನು ಯಾಕೆ ಏಕೆ ಆರೋಪಿಯನ್ನಾಗಿ ಮಾಡಲಿಲ್ಲ ಎಂಬ ಕುರಿತ ನ್ಯಾಯಾಲಯದ ಪ್ರಶ್ನೆಯನ್ನು ಸಂಪೂರ್ಣವಾಗಿ ವಿರೂಪಗೊಳಿಸಲಾಗಿದೆ. ಇಂದು ಸಮಾಜದಲ್ಲಿ ಉತ್ತಮ ನೆಲೆ ಹೊಂದಿರುವ ವ್ಯಕ್ತಿಗೆ ವಿಮಾನದಲ್ಲೂ ಅಪಾಯ ಇರಲ್ಲ. ಅವರು (ಮನೀಶ್​ ಸಿಸೋಡಿಯಾ) ಎಂಟು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಸ್ಪಷ್ಟವಾದ ಲೋಪದೋಷಗಳಿದ್ದು, ಅವರು ಖುಲಾಸೆಗೊಳ್ಳಲು ಉತ್ತಮ ಅವಕಾಶವಿದೆ ಎಂದು ಹೇಳುತ್ತಾ ತಮ್ಮ ವಾದ ಮುಕ್ತಾಯಗೊಳಿಸಿದರು.

ಆಗ ಮತ್ತೊಮ್ಮೆ ನ್ಯಾಯಪೀಠವು, ''ನಿನ್ನೆ ಪ್ರಶ್ನೆಯು ಯಾರನ್ನೂ ಉದ್ದೇಶಿಸಿ ಹೇಳಿದ್ದಲ್ಲ. ಪ್ರಾಸಿಕ್ಯೂಷನ್ ಪ್ರಕಾರ, 'ಎ' ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ, 'ಬಿ' ಅಥವಾ 'ಸಿ' ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದೇ?, ಆ ಸಂದರ್ಭದಲ್ಲಿ ಕಾನೂನಾತ್ಮಕವಾಗಿ ಪ್ರಶ್ನೆ ಕೇಳಲಾಗಿತ್ತು ಎಂಬುವುದಾಗಿ ಸ್ಪಷ್ಟಪಡಿಸಲು ಬಯಸಿದೆ'' ಎಂದು ತಿಳಿಸಿತು.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ: ಆಪ್‌ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.