ಉತ್ತರಕಾಶಿ: ಸುರಂಗದೊಳಗೆ 9 ದಿನಗಳಿಂದ 41 ಕಾರ್ಮಿಕರ ಜೀವನ್ಮರಣದ ಹೋರಾಟ; ಭರದಿಂದ ಸಾಗಿದ ಪರ್ಯಾಯ ರಕ್ಷಣಾ ಕಾರ್ಯ
Published: Nov 20, 2023, 11:06 AM


ಉತ್ತರಕಾಶಿ: ಸುರಂಗದೊಳಗೆ 9 ದಿನಗಳಿಂದ 41 ಕಾರ್ಮಿಕರ ಜೀವನ್ಮರಣದ ಹೋರಾಟ; ಭರದಿಂದ ಸಾಗಿದ ಪರ್ಯಾಯ ರಕ್ಷಣಾ ಕಾರ್ಯ
Published: Nov 20, 2023, 11:06 AM

ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ಸುರಂಗ ಕುಸಿದು ಪ್ರಾಣಭಯದಲ್ಲಿ ಸಿಲುಕಿರುವ ಹಲವು ಕಾರ್ಮಿಕರ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.
ಉತ್ತರಕಾಶಿ(ಉತ್ತರಾಖಂಡ): ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದ ಮಣ್ಣು ಕುಸಿದು ಅದರೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಅಧಿಕಾರಿಗಳು ಪರ್ಯಾಯ ರಕ್ಷಣಾ ಯೋಜನೆಗಳ ಮೊರೆ ಹೋಗಿದ್ದಾರೆ. ಬಂಡೆಗಳನ್ನು ಕೊರೆಯಲು ಅಪಘಾತ ಸ್ಥಳಕ್ಕೆ ಹೊಸ ಡ್ರಿಲ್ಲಿಂಗ್ ಯಂತ್ರ ಆಗಮಿಸಿದೆ. ಸಿಕ್ಕಿಬಿದ್ದ ಕಾರ್ಮಿಕರನ್ನು ಪೈಪ್‌ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರಲು ಡ್ರಿಲ್ ಯಂತ್ರ ಬಳಕೆ ಮಾಡಲಾಗುತ್ತಿದೆ.
ಅಧಿಕಾರಿಗಳು ಇಲ್ಲಿಯವರೆಗೆ ಕಲ್ಲು, ಮಣ್ಣು ಮತ್ತು ಅವಶೇಷಗಳನ್ನು 24 ಮೀಟರ್ (79 ಅಡಿ)ವರೆಗೆ ಕೊರೆದಿದ್ದಾರೆ. ಆದರೆ, ಕಾರ್ಮಿಕರನ್ನು ಹೊರತೆಗೆಯಲು ಇನ್ನೂ 60 ಮೀಟರ್ (197 ಅಡಿ)ವರೆಗೆ ಕೊರೆಯುವ ಅಗತ್ಯವಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ಮಾಹಿತಿ ನೀಡಿದರು.
ಸರ್ಕಾರದ ವಕ್ತಾರ ದೀಪಾ ಗೌರ್ ಪ್ರತಿಕ್ರಿಯಿಸಿ, ''ಅಧಿಕಾರಿಗಳು ಕಾರ್ಮಿಕರನ್ನು ಹೊರತೆಗೆಯಲು ಹೊಸ ಮಾರ್ಗಗಳನ್ನು ಅನುಸರಿಸಲು ಮುಂದಾಗಿದ್ದಾರೆ. ಬಹುಶಃ ಹೊಸ ಯಂತ್ರವನ್ನು ಬಳಸಿಕೊಂಡು ಬೆಟ್ಟದ ತುದಿಯಿಂದ ಕೊರೆಯಲಾಗುತ್ತದೆ. ಇದರಿಂದ ಸುರಂಗದೊಳಗೆ ಸಿಲುಕಿಕೊಂಡ ಕಾರ್ಮಿಕರ ರಕ್ಷಣೆ ಸಾಧ್ಯವಿದೆ. ಈ ವಿಧಾನ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚುವರಿ ನಾಲ್ಕು ಅಥವಾ ಐದು ದಿನಗಳನ್ನು ಬೇಕಾಗಬಹುದು'' ಎಂದರು.
"ಇದಕ್ಕೂ ಮುನ್ನ ಸುರಂಗದೊಳಗೆ ಜೋರಾಗಿ ಬಿರುಕು ಬಿಡುವ ಶಬ್ದ ಕೇಳಿಬಂದಾಗ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿತ್ತು. ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದವರು ತಮ್ಮ ಕೊರೆಯುವಿಕೆ ಕಾರ್ಯಕ್ಕೆ ವಿರಾಮ ಹೇಳಿದ್ದರು. ಈ ವೇಳೆ ಯಂತ್ರದ ಭಾಗಗಳು ಹಾನಿಗೊಳಗಾದವು" ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ತರುಣ್ ಕುಮಾರ್ ಬೈದ್ಯ ಮಾಹಿತಿ ನೀಡಿದರು.
ನವೆಂಬರ್ 12ರಂದು ಕಾರ್ಮಿಕರು ಸುರಂಗದಲ್ಲಿ ಸಿಕ್ಕಿಬಿದ್ದಿದ್ದಾರೆ. ಭೂಕುಸಿತದಿಂದ ನಿರ್ಮಾಣ ಹಂತದಲ್ಲಿದ್ದ 4.5 ಕಿಲೋಮೀಟರ್ (2.8-ಮೈಲಿ) ಸುರಂಗದ ಒಂದು ಭಾಗ, ಪ್ರವೇಶದ್ವಾರದಿಂದ ಸುಮಾರು 200 ಮೀಟರ್ (650 ಅಡಿ)ವರೆಗೆ ಭೂಕುಸಿತ ಸಂಭವಿಸಿತ್ತು. ಈ ತಾಣವು ಉತ್ತರಾಖಂಡದಲ್ಲಿದೆ. ಇದು ಅನೇಕ ಯಾತ್ರಿಕರು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಹಿಂದೂ ದೇವಾಲಯಗಳಿಂದ ಕೂಡಿದ ಪರ್ವತ ರಾಜ್ಯ. ಸುರಂಗವು ಕಾರ್ಯನಿರತ ಚಾರ್ಧಾಮ್ ಆಲ್-ವೆದರ್ ರಸ್ತೆಯ ಭಾಗ. ಇದು ವಿವಿಧ ಹಿಂದೂ ತೀರ್ಥಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ಸರ್ಕಾರದ ಪ್ರಮುಖ ಯೋಜನೆಯಾಗಿದೆ.
