ಸಂಘ ಪರಿವಾರದವರ ಮನೆಗಳ ಮೇಲೆ ಪೆಟ್ರೋಲ್​ ಬಾಂಬ್ ದಾಳಿ.. 18 ಜನರ ಬಂಧನ

author img

By

Published : Sep 26, 2022, 7:16 PM IST

petrol-bomb-incident

ತಮಿಳುನಾಡಿನಲ್ಲಿ ಆರ್​​ಎಸ್​ಎಸ್​ ಸಂಘಟನೆ ವ್ಯಕ್ತಿಗಳ ಮನೆಯ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ ಮಾಡಿದ 18 ಜನರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.

ಚೆನ್ನೈ, ತಮಿಳುನಾಡು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್​ಐ) ಸಂಘಟನೆಯ ಮೇಲೆ ರಾಷ್ಟ್ರೀಯ ತನಿಖಾ ದಳದ ದಾಳಿಯಿಂದಾಗಿ ಕುಪಿತಗೊಂಡು ತಮಿಳುನಾಡಿನಲ್ಲಿ ಆರ್​ಎಸ್​ಎಸ್​ ಸಂಘಟನೆಗೆ ಸೇರಿದ ವ್ಯಕ್ತಿಗಳ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ 18 ಜನರನ್ನು ಬಂಧಿಸಲಾಗಿದೆ.

ಸೆಪ್ಟೆಂಬರ್​ 22 ರಂದು ಎನ್​ಐಎ ಅಧಿಕಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿ 11 ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದರ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಹಲವೆಡೆ ಬಸ್‌ಗಳ ಮೇಲೆ ಕಲ್ಲು ತೂರಾಟ ಕೂಡ ನಡೆದಿತ್ತು.

ಇದಲ್ಲದೇ, ಕೊಯಮತ್ತೂರು, ಮಧುರೈ, ದಿಂಡಿಗಲ್, ಈರೋಡ್, ರಾಮನಾಥಪುರಂ, ಕನ್ಯಾಕುಮಾರಿಯಲ್ಲಿ ಸಂಘ ಪರಿವಾರದ ವ್ಯಕ್ತಿಗಳ ಮನೆಗಳ ಮೇಲೆ ಒಂದೇ ದಿನದಲ್ಲಿ ಪೆಟ್ರೋಲ್​ ಬಾಂಬ್​ ದಾಳಿ ಮಾಡಲಾಗಿತ್ತು. ಘಟನೆಯಲ್ಲಿ ಪ್ರಾಣ ಹಾನಿ ಸಂಭವಿಸದಿದ್ದರೂ, ಆಸ್ತಿ ಪಾಸ್ತಿ ಹಾನಿ ಉಂಟಾಗಿತ್ತು.

ಪೆಟ್ರೋಲ್​ ಬಾಂಬ್​ ದಾಳಿ ತಮಿಳುನಾಡಿನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿದೆ. ಹೀಗಾಗಿ ಕಮಾಂಡೋಗಳು, ವಿಶೇಷ ಕಾರ್ಯಾಚರಣೆ ಪಡೆಗಳಿಂದ ರಾಜ್ಯದಲ್ಲಿ ಹಲವೆಡೆ ಭದ್ರತೆ ನೀಡಲಾಗಿದೆ.

ಪೆಟ್ರೋಲ್ ಬಾಂಬ್ ದಾಳಿ ಪ್ರಕರಣಗಳಲ್ಲಿ 100 ಮಂದಿಯ ಮೇಲೆ ತನಿಖೆ ನಡೆಸಲಾಗುತ್ತಿದೆ. ಘಟನೆಗಳಲ್ಲಿ ಭಾಗಿಯಾದವರು ಮತ್ತು ಅವರ ಸಹಚರರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗುವುದು. ಈಗಾಗಲೇ 18 ಜನರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಕೇರಳಕ್ಕೂ ಕಾಲಿಟ್ಟ ಹಿಜಾಬ್​ ವಿವಾದ.. ಸಮವಸ್ತ್ರ ಧರಿಸಲು ಸೂಚಿಸಿದ ಶಾಲೆಯ ವಿರುದ್ಧ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.