ETV Bharat / assembly-elections

ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳಲ್ಲಿ ಎಐಎಡಿಎಂಕೆ ಸ್ಪರ್ಧೆ ಸಾಧ್ಯತೆ

author img

By

Published : Apr 3, 2023, 2:42 PM IST

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಐಎಡಿಎಂಕೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

AIADMK planning to contest 3 Assembly seats in Karnataka
AIADMK planning to contest 3 Assembly seats in Karnataka

ಚೆನ್ನೈ : ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ನೆರೆಯ ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎರಡರಿಂದ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜಿಸುತ್ತಿದೆ. ಕರ್ನಾಟಕದ ಕೆಲ ಕ್ಷೇತ್ರಗಳಲ್ಲಿನ ತಮಿಳು ವೋಟ್ ಬ್ಯಾಂಕ್ ಮೇಲೆ ಎಐಎಡಿಎಂಕೆ ಕಣ್ಣಿಟ್ಟಿದೆ. ಎಐಎಡಿಎಂಕೆಯ ಹಿರಿಯ ನಾಯಕರೊಬ್ಬರ ಪ್ರಕಾರ, ಕರ್ನಾಟಕದ ಕನಿಷ್ಠ 10 ಕ್ಷೇತ್ರಗಳಲ್ಲಿ ತಮಿಳು ಮತದಾರರು ಗಣನೀಯ ಪ್ರಮಾಣದಲ್ಲಿದ್ದಾರೆ ಮತ್ತು ಮೇ 10 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಈ ಅಂಶದ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಕರ್ನಾಟಕದ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಎಐಎಡಿಎಂಕೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಳ್ಳಲು ತಮಿಳುನಾಡಿನ ಬಿಜೆಪಿ ನಾಯಕತ್ವದೊಂದಿಗೆ ಎಐಡಿಎಂಕೆ ನಾಯಕರು ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಐಎಡಿಎಂಕೆ ನಾಯಕ ಭಕ್ತವತ್ಸಲಂ ಈ ಹಿಂದೆ ಸಾಕಷ್ಟು ತಮಿಳು ಜನಸಂಖ್ಯೆಯನ್ನು ಹೊಂದಿರುವ ಕೋಲಾರ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದನ್ನು ಸ್ಮರಿಸಬಹುದು. ಮತ್ತೊಬ್ಬ ಎಐಎಡಿಎಂಕೆ ನಾಯಕ ಮುನಿಯಪ್ಪ ಕರ್ನಾಟಕದ ಗಾಂಧಿನಗರ ಕ್ಷೇತ್ರದಿಂದ ಗೆದ್ದಿದ್ದರು.

ಒಂದೊಮ್ಮೆ ಎಐಎಡಿಎಂಕೆಯಿಂದ ಒಂಬತ್ತು ಸದಸ್ಯರು ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾಗಿದ್ದರು. ಕರ್ನಾಟಕದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಮತ್ತು ಭ್ರಷ್ಟಾಚಾರ ಆರೋಪಗಳ ವಿರುದ್ಧ ಹೋರಾಡುತ್ತಿದೆ. ಇಂಥ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅದು ಎಐಎಡಿಎಂಕೆಗೆ ಸ್ಥಾನಗಳನ್ನು ಬಿಟ್ಟು ಕೊಡಲಿದೆಯಾ ಎಂಬುದನ್ನು ನೋಡಬೇಕಿದೆ.

ಬಿಜೆಪಿ - ಎಐಎಡಿಎಂಕೆ ಮೈತ್ರಿ ಮುಂದುವರಿಕೆ: ಬಿಜೆಪಿಯೊಂದಿಗಿನ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಮೈತ್ರಿ ಮುಂದುವರೆಯಲಿದೆ ಎಂದು ನೂತನವಾಗಿ ನೇಮಕಗೊಂಡ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕರುಪ್ಪ ಪಳನಿಸ್ವಾಮಿ ಅವರು ಗುರುವಾರ (ಮಾ.30) ಹೇಳಿದ್ದಾರೆ. ಈರೋಡ್ ಪೂರ್ವ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಮೈತ್ರಿ ಮಾಡಿಕೊಂಡಿದ್ದೆವು. ಸದ್ಯಕ್ಕೆ 2024 ರ ಲೋಕಸಭಾ ಚುನಾವಣೆಯಲ್ಲೂ ನಾವು ಒಟ್ಟಾಗಿ ಸಾಗಲಿದ್ದೇವೆ ಎಂದು ಪಳನಿಸ್ವಾಮಿ ಹೇಳಿದರು. ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಕೂಡ ತಮಿಳುನಾಡಿನಲ್ಲಿ ಎಐಎಡಿಎಂಕೆಯೊಂದಿಗೆ ತಮ್ಮ ಪಕ್ಷದ ಮೈತ್ರಿ ಮುಂದುವರಿಯುವ ಬಗ್ಗೆ ಒತ್ತಿ ಹೇಳಿದ್ದು ಗಮನಾರ್ಹ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಚುನಾವಣೆಯ ಫಲಿತಾಂಶಕ್ಕೆ ತಡೆ ಕೋರಿ ಓ ಪನ್ನೀರಸೆಲ್ವಂ (OPS) ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಎಐಎಡಿಎಂಕೆ ಔಪಚಾರಿಕವಾಗಿ ಇ ಕೆ ಪಳನಿಸ್ವಾಮಿ (ಇಪಿಎಸ್) ಅವರನ್ನು ತನ್ನ ಪ್ರಧಾನ ಕಾರ್ಯದರ್ಶಿ ಎಂದು ಘೋಷಿಸಿದೆ. ನ್ಯಾಯಾಲಯದ ಆದೇಶದ ನಂತರ, ಇಪಿಎಸ್ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು ಮತ್ತು ತಮ್ಮನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಘೋಷಿಸಲಾಗಿದೆ ಎಂದು ಹೇಳಿದರು.

ಎಐಎಡಿಎಂಕೆಯ ಜಿಲ್ಲಾ ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಪದಾಧಿಕಾರಿಗಳ ಸಭೆ ಏಪ್ರಿಲ್ 7 ರಂದು ಚೆನ್ನೈನ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಈ ಕುರಿತು ಶನಿವಾರ ಪ್ರಕಟಣೆ ಬಿಡುಗಡೆ ಮಾಡಿದ ಪಳನಿಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ತಾವು ಈ ಸಭೆಯ ಅಧ್ಯಕ್ಷತೆ ವಹಿಸಲಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.