ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ ಮಂಡ್ಯ : ವಿಶ್ವ ವಿಖ್ಯಾತ ವೈರಮುಡಿ ಉತ್ಸವದ ಹಿನ್ನೆಲೆ ವಜ್ರ ಖಚಿತ ವೈರಮುಡಿ ಹಾಗೂ ರಾಜಮುಡಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಿದ್ಧ ಯಾತ್ರಾಸ್ಥಳ ಮೇಲುಕೋಟೆಗೆ ಗುರುವಾರ ಕೊಂಡೊಯ್ಯಲಾಯಿತು. ನಗರದ ಜಿಲ್ಲಾ ಖಜಾನೆಯಲ್ಲಿದ್ದ ವಜ್ರ ಖಚಿತ ವೈರಮುಡಿ ಮತ್ತು ರಾಜಮುಡಿಯನ್ನು ಬೆಳಗ್ಗೆ ಹೊರತೆಗೆದು ವಿಶೇಷ ಪೂಜೆ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೈಸೂರಿನ ಶ್ರೀಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ವಾಹನ ವೈರಮುಡಿ, ರಾಜಮುಡಿ ಮತ್ತು ವಜ್ರಾಭರಣಗಳನ್ನು ಹೊತ್ತು ಸಾಗಿತು.
ನಗರದ ಶ್ರೀ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ವೈರಮುಡಿ ಮತ್ತು ರಾಜಮುಡಿಗೆ ಮೊದಲ ಪೂಜೆ ಸಮರ್ಪಿಸಲಾಯಿತು. ಸಂಪ್ರದಾಯದಂತೆ ಮೇಲುಕೋಟೆಯತ್ತ ಹೊರಟ ವಜ್ರ ಖಚಿತ ವೈರಮುಡಿಗೆ ಮಾರ್ಗದ ಉದ್ದಕ್ಕೂ ಹಳ್ಳಿ ಹಳ್ಳಿಗಳಲ್ಲಿ ಜನತೆ ಪೂಜೆ ಸಲ್ಲಿಸಿ, ಪಾನಕ ವಿತರಿಸಿದರು.
ವೈರಮುಡಿ ಉತ್ಸವದ ನಿಮಿತ್ತ ವರ್ಷಕ್ಕೊಮ್ಮೆ ವೈರಮುಡಿ ಕಿರೀಟವನ್ನು ಖಜಾನೆಯಿಂದ ಹೊರ ತೆಗೆಯಲಾಗುತ್ತದೆ. ವೈರಮುಡಿಯ ದಿನ ಸಂಜೆಯ ಶುಭ ಮುಹೂರ್ತದಲ್ಲಿ ಪ್ರಧಾನ ಅರ್ಚಕರು ಕಣ್ಣಿಗೆ ರೇಷ್ಮೆ ವಸ್ತ್ರ ಕಟ್ಟಿಕೊಂಡು ವೈರಮುಡಿ ಪೆಟ್ಟಿಗೆಯಿಂದ ಹೊರತೆಗೆದು, ಶ್ರೀ ಚಲುವನಾರಾಯಣಸ್ವಾಮಿ ಶಿರದ ಮೇಲಿಟ್ಟು ಇತರ ಆಭರಣಗಳಿಂದ ಅಲಂಕರಿಸುತ್ತಾರೆ.
ಶ್ರೀದೇವಿ ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣನ ವೈರಮುಡಿ ಉತ್ಸವ ಮಹಾಮಂಗಳಾರತಿಯೊಂದಿಗೆ ಆರಂಭಗೊಂಡು ಮುಂಜಾನೆವರೆಗೆ ನಡೆಯಲಿದ್ದು, ಅಪಾರ ಸಂಖ್ಯೆಯ ಭಕ್ತರು ಶ್ರೀ ಚೆಲುವ ನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಕಣ್ತುಂಬಿಕೊಳ್ಳಲಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ, ವೈರಮುಡಿ ಉತ್ಸವದ ನಿಮಿತ್ತ ಈಗಾಗಲೇ ಜಿಲ್ಲಾಡಳಿತದಿಂದ ಎಲ್ಲ ಉತ್ಸವಗಳನ್ನು ಕೂಡಾ ಮಾಡಿಕೊಳ್ಳಲಾಗಿದೆ. ಇವತ್ತು ಬೆಳಗ್ಗೆ 7:30ರವರೆಗೆ ನಮ್ಮ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಕೂಡಾ ಸೇರಿ, ನಮ್ಮ ಖಜಾನೆಯಲ್ಲಿಟ್ಟಿರತಕ್ಕಂತಹ ವಜ್ರಖಚಿತ ವೈರಮುಡಿಯನ್ನ ನಾವು ಶಿಷ್ಟಾಚಾರದಂತೆ ಭದ್ರತೆಯೊಂದಿಗೆ ಹಸ್ತಾಂತರ ಮಾಡಿ, ಇಲ್ಲಿಂದ ನಾವು ಮೇಲುಕೋಟೆ ದೇವಸ್ಥಾನಕ್ಕೆ ಕಳುಹಿಸಿಕೊಟ್ಟಿದ್ದೇವೆ. ಇವತ್ತು ಉತ್ಸವಕ್ಕೆ ಬರುವಂತಹ ಭಕ್ತರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಈ ಉತ್ಸವದ ಯಶಸ್ಸಿಗೆ ಸಾರ್ವಜನಿಕರು ಸಹಕರಿಸಬೇಕು ಎಂದಿದ್ದಾರೆ.
ಇದನ್ನೂ ಓದಿ :ಮೇಲುಕೋಟೆ ವೈರಮುಡಿ ಉತ್ಸವ ಬಿಗಿಭದ್ರತೆಯಲ್ಲಿ ಜಿಲ್ಲಾ ಖಜಾನೆಯಿಂದ ವಜ್ರಖಚಿತ ಕಿರೀಟ ರವಾನೆ