ಕರ್ನಾಟಕ

karnataka

ಶೇ.95ರಷ್ಟು ಖಾಸಗಿ ನೀರಿನ ಟ್ಯಾಂಕರ್​ಗಳ ನೋಂದಣಿ ಕಾರ್ಯ ಪೂರ್ಣ : ಉಚಿತವಾಗಿ ನೀರು ಪೂರೈಕೆ

By ETV Bharat Karnataka Team

Published : Mar 17, 2024, 6:06 PM IST

ಕಾವೇರಿ ನೀರಿನ ಸಂಪರ್ಕ ಇರುವಂತಹ ಪ್ರದೇಶಗಳಲ್ಲಿ ಈಗಾಗಲೇ ಸಮರ್ಪಕವಾದ ವಿತರಣೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.

ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್
ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್

ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್

ಬೆಂಗಳೂರು :ಬೆಂಗಳೂರು ನಗರದಲ್ಲಿ ಖಾಸಗಿ ನೀರಿನ ಟ್ಯಾಂಕರ್​ಗಳ ನೋಂದಣಿ ಕಾರ್ಯ ಮುಗಿದಿದ್ದು, ಶೇ. 95ರಷ್ಟು ಈಗಾಗಲೇ ನೋಂದಾಯಿಸಲಾಗಿದೆ. ನೋಂದಣಿ ಆಗದೆ ಇರುವಂತಹ ಖಾಸಗಿ ನೀರಿನ ಟ್ಯಾಂಕರ್​ಗಳ ಮೇಲೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.

ಭಾನುವಾರ ನಗರದ ಕೊಳಚೆ ಪ್ರದೇಶಗಳಾದ ಭಾಶ್ಯಾಂ ಪಾರ್ಕ್, ದೀನ ಬಂಧು ನಗರ, ಶ್ರೀ ರಾಮ ನಗರ ಸೇರಿದಂತೆ ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಿಗೆ ಭೇಟಿ ನೀಡಿ, ನಾಗರಿಕರೊಂದಿಗೆ ನೀರಿನ ವಿತರಣೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಸಂಪರ್ಕ ಇರುವಂತಹ ಪ್ರದೇಶಗಳಲ್ಲಿ ಈಗಾಗಲೇ ಸಮರ್ಪಕವಾದ ವಿತರಣೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನಗರದ ಎಲ್ಲಾ ಭಾಗದಲ್ಲಿ ಟ್ಯಾಂಕ್​ಗಳನ್ನು ಅಳವಡಿಸುವ ಮೂಲಕ ಉಚಿತವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರು ಪೂರೈಸುವ ಖಾಸಗಿ ಟ್ಯಾಂಕರ್​ಗಳ ನೋಂದಣಿ ಪ್ರಕ್ರಿಯೆಯ ಗಡುವು ದಿನಾಂಕ ಮಾರ್ಚ್ 15 ಕ್ಕೆ ಮುಗಿದಿದೆ. ಶೇಕಡಾ 95 ರಷ್ಟು ನೀರಿನ ಖಾಸಗಿ ಟ್ಯಾಂಕರ್ ಗಳನ್ನು ನೋಂದಾಯಿಸಲಾಗಿದೆ. ಕೆಲವೆಡೆ ಟ್ರಾಕ್ಟರ್ ಮಾರ್ಪಡಿಸಿ ನೀರಿನ ಟ್ಯಾಂಕರ್​ಗಳಾಗಿ ಪರಿವರ್ತಿಸಲಾಗಿದೆ. ಇವುಗಳ ಮೇಲೆಯೂ ನಿಗಾ ಇಡಲಾಗುವುದು. ನೋಂದಣಿಗೆ ಗಡುವು ನೀಡಿದ ಸಮಯದಲ್ಲಿ ನೋಂದಣಿ ಮಾಡದೆ ಇರುವಂತಹ ಖಾಸಗಿ ನೀರಿನ ಟ್ಯಾಂಕರ್​ಗಳ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದ ಹೊರಭಾಗದಲ್ಲಿ ಇರುವಂತಹ ಗ್ರಾಮಗಳಿಗೆ ಇನ್ನು ಕಾವೇರಿ ನೀರಿನ ಸಂಪರ್ಕ ನೀಡಲಾಗಿಲ್ಲ. ಈ ಭಾಗ ಅಂತರ್ಜಲದ ಮೇಲೆ ಹೆಚ್ಚಿನ ಅವಲಂಬನೆ ಇದೆ. ಈ ಪ್ರದೇಶದಲ್ಲಿ ಬಿಬಿಎಂಪಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಹೊರಭಾಗದ ಗ್ರಾಮಗಳಿಗೂ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ದಿನದ 24 ಗಂಟೆಗಳ ಕಾಲ ನಗರದ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ನಡೆಯುವಂತೆ ಮಂಡಳಿ ವತಿಯಿಂದ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಮಾರ್ಚ್ 7ರೊಳಗೆ ನೀರಿನ ಟ್ಯಾಂಕರ್ ನೋಂದಣಿ ಕಡ್ಡಾಯ: ಬಿಬಿಎಂಪಿ ಆಯುಕ್ತ

ABOUT THE AUTHOR

...view details