ಕರ್ನಾಟಕ

karnataka

ಅಂದು ಕರ ಸೇವೆಗೆ ತೆರಳಿದ್ದಾಗ ಪೊಲೀಸರ ಏಟು; ಇಂದು ಅಯೋಧ್ಯಾ ವೈಭವ ಕಂಡು ಭಾವುಕ

By ETV Bharat Karnataka Team

Published : Jan 22, 2024, 7:12 AM IST

Updated : Jan 22, 2024, 10:51 AM IST

2002ರಲ್ಲಿ ಅಯೋಧ್ಯೆಗೆ ಕರ ಸೇವಕರಾಗಿ ಸೇವೆ ಸಲ್ಲಿಸಲು ತೆರಳಿದ್ದಾಗ ಲಾಠಿ ಏಟಿನಿಂದ ನೊಂದು ಬಂದಿದ್ದ ವಿಶ್ವ ಹಿಂದೂ ಪರಿಷತ್‌ನ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ಏಕನಾಥ‌ ಶೆಟ್ಟಿ ಅವರು ಇದೀಗ ಅಯೋಧ್ಯೆಯ ವಿಜಯೋತ್ಸವವನ್ನು ಸಂಭ್ರಮಿಸುತ್ತಿದ್ದಾರೆ.

ಗೋಪಾಲಕೃಷ್ಣ ಏಕನಾಥ‌ ಶೆಟ್ಟಿ
ಗೋಪಾಲಕೃಷ್ಣ ಏಕನಾಥ‌ ಶೆಟ್ಟಿ

ಗೋಪಾಲಕೃಷ್ಣ ಏಕನಾಥ‌ ಶೆಟ್ಟಿ ಪ್ರತಿಕ್ರಿಯೆ

ಕಾರವಾರ:ಕರ ಸೇವಕರಾಗಿ ಕಾರವಾರದಿಂದ ಅಯೋಧ್ಯೆಗೆ ತೆರಳಿ ಗಲಭೆ ವೇಳೆ ಪೊಲೀಸರಿಂದ ಲಾಠಿ ಏಟು ತಿಂದು ಗಾಯಗಳೊಂದಿಗೆ ಬೇಸರದಿಂದ ತವರಿಗೆ ಮರಳಿದ್ದ ಅಂದಿನ ವಿಶ್ವ ಹಿಂದೂ ಪರಿಷತ್​ ಕಾರ್ಯದರ್ಶಿ ಗೋಪಾಲಕೃಷ್ಣ ಏಕನಾಥ‌ ಶೆಟ್ಟಿ ಅವರು ಇದೀಗ ಅಯೋಧ್ಯಾ ವೈಭವ ಕಂಡು ಪುಳಕಗೊಂಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ಟಿವಿ ಮೂಲಕ ಕಣ್ತುಂಬಿಕೊಳ್ಳುತ್ತಿರುವ ಅವರು ತಮ್ಮ ಹೋರಾಟದ ಸಾರ್ಥಕತೆಯನ್ನು ಮೆಲುಕು ಹಾಕುತ್ತಿದ್ದಾರೆ.

ಏಕನಾಥ‌ ಶೆಟ್ಟಿ ವಿಶ್ವ ಹಿಂದೂ ಪರಿಷತ್​​ನಲ್ಲಿ ಮುಂಚೂಣಿಯಲ್ಲಿದ್ದ ಸಂದರ್ಭವದು. ಸಂಘದ ಯಾವುದೇ ಕಾರ್ಯ ಚಟುವಟಿಕೆಗಳಿದ್ದರೂ ಮುಂದೆ ನಿಂತು ಮಾಡುತ್ತಿದ್ದ ಶೆಟ್ಟಿ, 2002ರ ವೇಳೆಗೆ ಅಯೋಧ್ಯೆಗೆ ಕರ ಸೇವಕರನ್ನು ಕೊಂಡೊಯ್ಯಲು ತೀರ್ಮಾನಿಸಿದಾಗ ಸಜ್ಜಾಗಿದ್ದರು. ಅಲ್ಲದೇ ಗೋಪಾಲಕೃಷ್ಣರ ಜೊತೆಗೆ ಮೋಹನ್ ದಾಸ್ ಶಾನುಭಾಗ, ಶ್ರೀಮತಿ ಠಾಣೇಕರ್ ಸೇರಿದಂತೆ ಮತ್ತಿಬ್ಬರು ತೆರಳಿದ್ದರು.

"ಕರ ಸೇವಕರಾಗಿ ತಮ್ಮ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಮುಂದಿದ್ದ ಅವರು ಈ ವೇಳೆ ಗಲಭೆ ಉಂಟಾದಾಗ ಲಾಠಿ ಏಟು ತಿಂದು ಗದ್ದೆಗಳಲ್ಲಿ ಓಡಿದ್ದರು. ಅಲ್ಲಿಂದ 40 ಕಿ.ಮೀ ಮೂರ್ನಾಲ್ಕು ಊರುಗಳನ್ನು ಕಾಲ್ನಡಿಗೆಯಲ್ಲೇ ಸಾಗಿದ್ದರು. ಆದರೆ ಟಿವಿಯಲ್ಲಿ ಗಲಭೆ ವೀಕ್ಷಿಸಿದ್ದ ನಮಗೆ ಆತಂಕ ಕಾಡಿತ್ತು. ಬಳಿಕ ಗಾಯಗಳೊಂದಿಗೆ ಮನೆಗೆ ಆಗಮಿಸಿದ್ದರು" ಎಂದು ಪತ್ನಿ ರಾಧಾ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ತಾನು ಗಟ್ಟಿ ಇದ್ದರೆ ಇಷ್ಟೊತ್ತಿಗಾಗಲೇ ಅಯೋಧ್ಯೆಯಲ್ಲಿ ಇರುತ್ತಿದ್ದೆ ಎನ್ನುವ ಗೋಪಾಲಕೃಷ್ಣ ಅವರು ಸದ್ಯ ಅನಾರೋಗ್ಯದಿಂದ ಮನೆಯಲ್ಲಿದ್ದಾರೆ. ಟಿವಿ ಮುಂದೆ ಕುಳಿತು ಅಯೋಧ್ಯೆಯಲ್ಲಿನ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್​ನಲ್ಲಿ 8-10 ವರ್ಷ ಕಾರ್ಯದರ್ಶಿಯಾಗಿದ್ದ ಅವರು ಕಾರವಾರದಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಸಂಬಂಧ ಹೋಮ, ಹಮನ ನಡೆಸಿ ಶ್ರೀರಾಮ ನಿರ್ಮಾಣಕ್ಕಾಗಿ ಕಾತುರತೆಯಿಂದ ಕಾದಿದ್ದರು. ಮುಂದೊಂದು ದಿನ ಅವರಿಗೂ ಮಂದಿರದ ದರ್ಶನ ಮಾಡಿಸುವ ಇಚ್ಚೆ ಇದೆ ಎನ್ನುತ್ತಾರೆ ಮಗ ರಾಘವೇಂದ್ರ ಶೆಟ್ಟಿ.

ಇದನ್ನೂ ಓದಿ:ರಾಮ ಮಂದಿರ: ಸೌಹಾರ್ದತೆ, ಶಾಂತಿಗಾಗಿ ಭರತವರ್ಷ ಪುನರ್​ನಿರ್ಮಾಣ ಅಭಿಯಾನದ ಆರಂಭ - ಆರ್​ಎಸ್​​ಎಸ್

Last Updated :Jan 22, 2024, 10:51 AM IST

ABOUT THE AUTHOR

...view details