ಸಚಿವ ಶಿವಾನಂದ ಪಾಟೀಲ್ ಅವರು ಮಾತನಾಡಿದರು ಬಾಗಲಕೋಟೆ : ''ನಾನು ಸಂಘರ್ಷದಿಂದ ಟಿಕೆಟ್ ತೆಗೆದುಕೊಳ್ಳುವುದಿಲ್ಲ. ಸಾಮರಸ್ಯದಿಂದ ಕೊಟ್ಟರೆ ಮಾತ್ರ ತಗೋತಿನಿ'' ಎಂದು ಜವಳಿ ಸಚಿವರಾದ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಶಿವಾನಂದ ಪುತ್ರಿ ಸಂಯುಕ್ತಾ ಪಾಟೀಲ್ ಅವರ ಹೆಸರು ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಸಚಿವರು ಬಾಗಲಕೋಟೆ ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದರು.
''ಅವಳು (ಪುತ್ರಿ ಸಂಯುಕ್ತ ಪಾಟೀಲ್) ನನ್ನ ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಹಾಕುವಂತೆ ಸ್ಥಳೀಯರು ಹೇಳಿದ್ದರು. ನೀನು ಕೊಡು, ನಾನು ಬಿಡುತ್ತೇನೆ ಅಂದೆ. ಆದರೆ ಅವಳೇ ಇಲ್ಲ, ಇದೊಂದು ಸಾರಿ ನೀವು ನಿಲ್ಲಿ ಅಂದಳು. ಈಗ ಆಕಸ್ಮಾತ್ (ಬಾಗಲಕೋಟೆ) ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಅಂತ ನಿಮ್ಮ ಎದುರಿಗೆ ಹೇಳಿದ್ದೇನೆ. ನಮ್ಮಲ್ಲಿ ಯಾರಿಗೆ ಅವಕಾಶ ಕೊಟ್ಟರೂ ಸಮರ್ಥರಿದ್ದಾರೆ. ಅಜಯ್ ಕುಮಾರ್ ಸಾರನಾಯಕ್ ಅವರು ಹಿರಿಯರು. ಹೋದ ಸಲ ನಾನೇ ವೀಣಾ ಕಾಶಪ್ಪನವರ್ ಜವಾಬ್ದಾರಿ ತಗೊಂಡು ಕೆಲಸ ಮಾಡಿದ್ದೀನಿ. ಅವರಿಗೆ ಕೊಟ್ಟರೂ ಕೆಲಸ ಮಾಡುತ್ತೇವೆ'' ಎಂದರು.
''ನಾನು ವಿಜಯಪುರ, ಬಾಗಲಕೋಟೆ ಬೇರೆ ಅಂತ ಮಾಡಿಯೇ ಇಲ್ಲ. ಈ ಜಿಲ್ಲೆಯನ್ನು ಒಡೆಯುವ ಸಮಯದಲ್ಲಿ ನಾವು ಒಡಿಬೇಡಿ ಅಂತ ಹೇಳಿದ್ದೇವೆ. ಡಿಸಿಸಿ ಬ್ಯಾಂಕ್ ಒಡೆದು ಕೊಡಿ ಎಂದರು, ಹೀಗಾಗಿ ಕೊಟ್ಟೆವು'' ಎಂದ ಸಚಿವರು, ''ಕಾಂಗ್ರೆಸ್ ಪಕ್ಷದ ಪಟ್ಟಿ ಬಿಡುಗಡೆ ಯಾವಾಗ ಆಗುತ್ತದೆಂದು ಗೊತ್ತಿಲ್ಲ. ನನಗೆ ತಿಳಿದಂತೆ ಮಾರ್ಚ್ 17ರಂದು ಅಂತ ಹೇಳುತ್ತಿದ್ದಾರೆ'' ಎಂದು ತಿಳಿಸಿದರು.
ಬಿಜೆಪಿ ಲೋಕಸಭೆ ಟಿಕೆಟ್ ವಂಚಿತರು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ''ಎಲ್ಲ ನಿಮ್ಮ ಕಣ್ಣೆದುರಿಗೆ ಕಾಣುತ್ತಿದೆ. ನಮ್ಮ ಪಕ್ಷಕ್ಕೆ ಬಂದೇ ಬರ್ತಾರೆ. ರಾಜಕೀಯ ಧೃವೀಕರಣ ಯಾವಾಗಲೂ ಆಗುತ್ತದೆ. ಅದು ನಿರಂತರ. ಈ ಸಾರಿ ಬಿಜೆಪಿಯಲ್ಲಿ ಸಾಕಷ್ಟು ಹಿನ್ನಡೆ ಆಗುತ್ತಿದೆ'' ಎಂದು ಹೇಳಿದರು. ಮೈಸೂರು ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಸಿಗುತ್ತಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿ, ''ಅಲ್ಲಿ ಅಭ್ಯರ್ಥಿಗಳು ಜಾಸ್ತಿ ಇದ್ದಾರೆ. ಆದರೆ, ನಿರ್ಣಯ ಇನ್ಮೇಲೆ ಮಾಡುತ್ತಾರೆ. ಮೈಸೂರು ಮಾತ್ರ ಸಿದ್ದರಾಮಯ್ಯ ಅವರ ಪ್ರತಿಷ್ಟೆಯಲ್ಲ. ಇಡೀ ರಾಜ್ಯವೇ ಪ್ರತಿಷ್ಠೆ. ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಅಲ್ವಾ?'' ಎಂದರು.
''ಯದುವೀರ್ ಮಹಾರಾಜ ಅವರು ಅಭ್ಯರ್ಥಿ ಆಗಿರುವುದರಿಂದ ಕಾಂಗ್ರೆಸ್ಗೆ ಇನ್ನೂ ಸ್ವಲ್ಪ ಸಹಾಯವೇ ಆಗಬಹುದು. ಮಹಾರಾಜರು, ಸಾಮಾನ್ಯ ಜನರ ಜೊತೆ ಬೆರೆತಿಲ್ಲ ಎಂದು ಪ್ರತಾಪ್ ಸಿಂಹ ಅವರೇ ಹೇಳುತ್ತಿದ್ದಾರಲ್ಲ. ನಾವ್ಯಾಕೆ ಅದನ್ನು ಹೇಳೋದು. ಯದುವೀರ್ ಸಾಮಾನ್ಯ ಜನರಾಗಿ ಬರುತ್ತಿದ್ದರೆ ನಾನು ಸಂತೋಷದಿಂದ ಸ್ವೀಕರಿಸುತ್ತೇನೆ ಅಂತ ಪಾಪ ಪ್ರತಾಪ್ ಸಿಂಹ ಅವರೇ ಹೇಳಿದ್ದಾರೆ'' ಎಂದು ವ್ಯಂಗ್ಯವಾಡಿದ ಸಚಿವರು, ''ಕರ್ನಾಟಕದಲ್ಲಿ ಅದು ಒಂದು ಇತಿಹಾಸವೇ ಅಲ್ಲವೇ'' ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಶಿವಾನಂದ ಪಾಟೀಲ್, ''ಇದು ಒಂದೆಡೆ ದುರುದ್ದೇಶದಿಂದಲೂ ಆಗಿರಬಹುದು. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಇದಕ್ಕೆ ಗೃಹಮಂತ್ರಿಗಳು ಪ್ರತಿಕ್ರಿಯಿಸಿದರೆ ಸೂಕ್ತ. ನನಗೆ ಆ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಅದಕ್ಕೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ'' ಎಂದು ತಿಳಿಸಿದರು.
ಇದನ್ನೂ ಓದಿ :ಮೆಣಸಿನಕಾಯಿ ಬೆಳೆಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ : ಸಚಿವ ಶಿವಾನಂದ ಪಾಟೀಲ್